ಎಸ್ಸೆಸ್ಸೆಲ್ಸಿ- ದ್ವಿತೀಯ ಪಿಯುಸಿಗೆ ಇನ್ನು ಎರಡೇ ಬಾರಿ ಪರೀಕ್ಷೆ

ಬೆಂಗಳೂರು

      ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉತ್ತೀರ್ಣ ಅಂಕಗಳನ್ನು ಶೇ.35ರಿಂದ ಶೇ.33ಕ್ಕೆ ಇಳಿಸಿದ ಶಿಕ್ಷಣ ಇಲಾಖೆ, ಇದೀಗ ಮತ್ತೊಂದು ಸುಧಾರಣೆ ತರಲು ಚಿಂತನೆ ನಡೆಸಿದೆ. ಇತ್ತೀಚೆಗಷ್ಟೇ ಎಸ್ಸೆಸ್ಸೆಲ್ಸಿ- ದ್ವಿತೀಯ ಪಿಯುಸಿ ಪರೀಕ್ಷೆಗಳ  ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಿದ್ದ ಶಿಕ್ಷಣ ಇಲಾಖೆ, ಮೂರು ಪರೀಕ್ಷೆಗಳನ್ನು ನಡೆಸುವ ಪರಿಪಾಠಕ್ಕೆ ತಡೆ ನೀಡಲು ಸಜ್ಜಾಗಿದೆ.

     ಸದ್ಯ ಈ ಹಿಂದೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೆ ಎರಡು ಬಾರಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಲಾಗಿತ್ತು. ಮಧು ಬಂಗಾರಪ್ಪ ಅವರು ಶಿಕ್ಷಣ ಸಚಿವರಾದ ಬಳಿಕ ಎರಡು ಪರೀಕ್ಷೆ ಬದಲಿಗೆ ಮೂರು ಪರೀಕ್ಷೆಗಳನ್ನು ಜಾರಿಗೆ ತರಲಾಗಿತ್ತು. ಈ ನಡುವೆ, ಎಸ್ಸೆಸ್ಸೆಲ್ಸಿ- ಪಿಯುಸಿ ವಿದ್ಯಾರ್ಥಿಗಳ ಉತ್ತೀರ್ಣ ಅಂಕಗಳನ್ನು ಕಡಿತಗೊಳಿಸಿದ ಬಳಿಕ ಮೂರು ಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು ಚಿಂತಿಸಿರುವ ಶಿಕ್ಷಣ ಇಲಾಖೆ, ಈ ವರ್ಷದಿಂದಲೇ ಎರಡು ಪರೀಕ್ಷೆಗಳನ್ನು ಮಾತ್ರ ನಡೆಸಲು ಮುಂದಾಗಿದೆ.

    ಎಸ್ಸೆಸ್ಸೆಲ್ಸಿ- ಪಿಯುಸಿ ವಿದ್ಯಾರ್ಥಿಗಳ ಉತ್ತೀರ್ಣ ಅಂಕಗಳನ್ನು ಕಡಿತ ಮಾಡಿರುವುದರಿಂದ ಮೊದಲೆರಡು ಪರೀಕ್ಷೆಗಳಲ್ಲೇ ಬಹುತೇಕ ವಿದ್ಯಾರ್ಥಿಗಳು ಪಾಸಾಗುತ್ತಿದ್ದಾರೆ. ಅಲ್ಲದೆ, ಮೂರನೇ ಪರೀಕ್ಷೆಯಲ್ಲೂ ಅಂಕಗಳಲ್ಲಿ ಅಂತಹ ಸುಧಾರಣೆ ಕಾಣುತ್ತಿಲ್ಲ. ಹೀಗಾಗಿ, ಮೂರನೇ ಪರೀಕ್ಷೆ ಕೈಬಿಡಲು ಇಲಾಖೆ ಗಂಭೀರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. 

    ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ 3 ಪರೀಕ್ಷೆ ಸೂತ್ರ ಜಾರಿಯಲ್ಲಿದೆ. ಇತ್ತ ಶಿಕ್ಷಣ ಇಲಾಖೆ ಹಾಗೂ ಸರಕಾರ 3ನೇ ಪರೀಕ್ಷೆಯನ್ನು ಕೈಬಿಟ್ಟರೆ ಇನ್ಮುಂದೆ ಎಸ್ಸೆಸ್ಸೆಲ್ಸಿ- ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕೇವಲ ಎರಡು ಪರೀಕ್ಷೆ ಬರೆಯಲು ಅವಕಾಶ ಸಿಗಲಿದೆ. ಇದಕ್ಕೆ ಪೂರಕವಾಗಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ-1 ಮತ್ತು 2ರ ಅಂತಿಮ ವೇಳಾಪಟ್ಟಿ ಬಿಡುಗಡೆಗೊಳಿಸಿರುವ ಶಿಕ್ಷಣ ಇಲಾಖೆ, ಮೂರನೇ ಪರೀಕ್ಷೆಗೆ ವಿದಾಯ ಹೇಳುವ ಸುಳಿವು ನೀಡಿದೆ.

    ಸದ್ಯ ಮೂರು ಪರೀಕ್ಷೆ ನಡೆಸುವ ಕ್ರಮದ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲೇ ಮೂರನೇ ಪರೀಕ್ಷೆಗೆ ಕತ್ತರಿ ಪ್ರಯೋಗಿಸಿ ಆದೇಶ ಹೊರಡಿಸುವ ನಿರೀಕ್ಷೆಯಿದೆ. ವೇಳಾಪಟ್ಟಿ ಪ್ರಕಾರ, ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮಾರ್ಚ್ 18ರಂದು ಆರಂಭವಾಗಿ ಏಪ್ರಿಲ್‌ 2ರವರೆಗೆ ನಡೆಯಲಿದೆ. ಇನ್ನು ದ್ವೀತಿಯ ಪಿಯುಸಿ ಪರೀಕ್ಷೆಗಳು 2026ರ ಫೆಬ್ರವರಿ 28 ರಂದು ಆರಂಭವಾಗಲಿದ್ದು, ಮಾರ್ಚ್ 17ರಂದು ಮುಕ್ತಾಯವಾಗಲಿವೆ.

Recent Articles

spot_img

Related Stories

Share via
Copy link