ಬೆಂಗಳೂರು
ಸರಕಾರಿ ಶಾಲೆಗಳಲ್ಲಿ ಆರಂಭಿಸಲಾದ ಪೂರ್ವ ಪ್ರಾಥಮಿಕ ತರಗತಿಯ ಮಕ್ಕಳಿಗೂ ಮೊಟ್ಟೆ, ಬಾಳೆಹಣ್ಣು, ಹಾಲು ಸೇರಿದಂತೆ ಮಧ್ಯಾಹ್ನದ ಬಿಸಿಯೂಟ ಯೋಜನೆ ವಿಸ್ತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಡಿಸೆಂಬರ್ 1ರಿಂದ ಅನ್ವಯವಾಗುವಂತೆ ಅನುಷ್ಠಾನಗೊಳಿಸಲು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಆಧಿರ್ ವಿ. ಶುಭಮಂಗಳಾ ಆದೇಶ ಹೊರಡಿಸಿದ್ದಾರೆ.
ಪೂರ್ವ ಪ್ರಾಥಮಿಕ ತರಗತಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ವಿಸ್ತರಣೆ ಆಗಿರಲಿಲ್ಲ. ಈಗ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯಡಿ ಬಿಸಿಹಾಲು ಮತ್ತು ಮೊಟ್ಟೆ, ಬಾಳೆಹಣ್ಣು ನೀಡುವ ಕಾರ್ಯಕ್ರಮವನ್ನು ಡಿಸೆಂಬರ್ 1ರಿಂದ ಅನ್ವಯವಾಗುವಂತೆ ಅನುಷ್ಠಾನಗೊಳಿಸಲು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಆಧಿರ್.ವಿ. ಶುಭಮಂಗಳಾ ಆದೇಶ ಹೊರಡಿಸಿದ್ದಾರೆ.
ಒಂದು ದಿನಕ್ಕೆ ಪ್ರತಿ ಮಗುವಿಗೆ ಆಹಾರ ತಯಾರಿಗೆ 6.78 ರೂ. ಗಳ ವೆಚ್ಚ ನಿಗದಿಪಡಿಸಲಾಗಿದೆ. ಇದರಲ್ಲಿ ಕೇಂದ್ರ ಸರಕಾರ ಪ್ರತಿ ಮಗುವಿಗೆ ದಿನಕ್ಕೆ 4.07 ರೂ. ಮತ್ತು ರಾಜ್ಯ ಸರಕಾರ 2.71 ರೂ.ಗಳನ್ನು ವ್ಯಯಿಸಲಿವೆ. ಅಲ್ಲದೆ, ವಾರದಲ್ಲಿ ನಾಲ್ಕು ದಿನ ಮೊಟ್ಟೆ/ಬಾಳೆಹಣ್ಣು ಖರೀದಿಗಾಗಿ ಅಜೀಂ ಪ್ರೇಮ್ಜಿ ಫೌಂಡೇಶನ್ ಹಣಕಾಸಿನ ಸಹಾಯ ಮಾಡಲಿದೆ. ಉಳಿದ ಎರಡು ದಿನಗಳ ವೆಚ್ಚವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಭರಿಸಲಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿ ವಾರದಲ್ಲಿ ಆರು ದಿನ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯಡಿ ವಾರದ ಐದು ದಿನ ಬಿಸಿ ಹಾಲು ಹಾಗೂ ಶಾಲಾ ಶಿಕ್ಷಣ ಇಲಾಖೆಯ ವೆಚ್ಚದಲ್ಲಿ ವಾರದಲ್ಲಿಎರಡು ದಿನ ಮತ್ತು ಅಜೀಂ ಪ್ರೇಮ್ಜೀ ಫೌಂಡೇಶನ್ನಿಂದ ನಾಲ್ಕು ದಿನ ಮೊಟ್ಟೆ/ಬಾಳೆಹಣ್ಣು ವಿತರಿಸಲು ಕ್ರಮ ವಹಿಸಬೇಕು ಎಂದು ಆಯುಕ್ತರು, ಎಲ್ಲ ಜಿಲ್ಲಾ ಪಂಚಾಯತಿ ಸಿಇಒಗಳಿಗೆ ನಿರ್ದೇಶನ ನೀಡಿದ್ದಾರೆ.








