ಕಾಶಿ:
ಕಾಶಿಯ 19 ವರ್ಷದ ಯುವ ವೇದ ವಿದ್ವಾಂಸ ದೇವವ್ರತ್ ಮಹೇಶ್ ರೇಖೆ ಸಾಧನೆ ಈಗ ದೇಶದೆಲ್ಲೆಡೆ ಸುದ್ದಿಯಾಗತೊಡಗಿದೆ. ಸ್ವತಃ ಕಾಶಿಯ ಸಂಸದರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಈ ಯುವ ವೇದ ವಿದ್ವಾಂಸನ ಸ್ಮೃತಿ ಸಾಮರ್ಥ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರೂ ಸಹ ಮಹೇಶ್ ರೇಖೆ ಅವರ ಸಾಧನೆಯನ್ನು ಮೆಚ್ಚಿ ವೇದಿಕೆಯಲ್ಲಿ ಸನ್ಮಾನ ಮಾಡಿದ್ದಾರೆ.
ಭಾರತೀಯ ಸಂಸ್ಕೃತಿಯ ಬಗ್ಗೆ ಆಸಕ್ತಿ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಶುಕ್ಲ ಯಜುರ್ವೇದದ ಮಧ್ಯಂದಿನಿ ಶಾಖೆಯ 2000 ಮಂತ್ರಗಳನ್ನು ಒಳಗೊಂಡಿರುವ ದಂಡಕ್ರಮ ಪಾರಾಯಣವನ್ನು ಯಾವುದೇ ಅಡೆತಡೆಯಿಲ್ಲದೆ 50 ದಿನಗಳಲ್ಲಿ ಪೂರ್ಣಗೊಳಿಸಿದ್ದಕ್ಕಾಗಿ ಮಹೇಶ್ ರೇಖಿ ಅವರ ಸಾಧನೆಯ ಬಗ್ಗೆ ಹೆಮ್ಮೆಪಡುತ್ತಾರೆ. ಇದರಲ್ಲಿ ಹಲವಾರು ವೇದ ಶ್ಲೋಕಗಳು ಮತ್ತು ಪವಿತ್ರ ಪದಗಳನ್ನು ದೋಷರಹಿತವಾಗಿ ಪಠಿಸಲಾಗಿದೆ. ಅವರು ನಮ್ಮ ಗುರುಪರಂಪರೆಯ ಅತ್ಯುತ್ತಮ ವ್ಯಕ್ತಿಯಾಗಿದ್ದಾರೆ. ಕಾಶಿಯ ಸಂಸದನಾಗಿ, ಈ ಅಸಾಧಾರಣ ಸಾಧನೆ ಈ ಪವಿತ್ರ ನಗರದಲ್ಲಿ ನಡೆದಿದ್ದಕ್ಕೆ ನಾನು ಹರ್ಷಿಸುತ್ತೇನೆ. ಅವರ ಕುಟುಂಬಕ್ಕೆ, ಅವರನ್ನು ಬೆಂಬಲಿಸಿದ ಭಾರತದಾದ್ಯಂತದ ಹಲವಾರು ಸಂತರು, ಋಷಿಗಳು, ವಿದ್ವಾಂಸರು ಮತ್ತು ಸಂಸ್ಥೆಗಳಿಗೆ ನನ್ನ ಪ್ರಣಾಮಗಳು ಎಂದು ಮೋದಿ ಹೇಳಿದ್ದಾರೆ.
ದೇವವ್ರತ ಮಹೇಶ ರೇಖೆ ಎಂಬ 19 ವರ್ಷ ವಯಸ್ಸಿನ ವೇದಾಧ್ಯಾಯಿ ಶುಕ್ಲ ಯಜುರ್ವೇದ ಘನಾಂತ ಅಧ್ಯಯನದ ನಂತರ, ಶುಕ್ಲ ಯಜುರ್ವೇದದ ದಂಡಕ್ರಮ ಪಾರಾಯಣ ಪೂರ್ಣಗೊಳಿಸಿದ್ದಾರೆ.
ಯುವ ವೈದಿಕ ದೇವವ್ರತ ನಿರಂತರ 50 ದಿನಗಳ ಕಾಲ ಪುಸ್ತಕದ ಸಹಾಯವಿಲ್ಲದೇ, ಕೇವಲ ಸ್ಮರಣಶಕ್ತಿಯಿಂದ (ಕಂಠಸ್ಥ) ಶುಕ್ಲ ಯಜುರ್ವೇದದ ಮಧ್ಯಮಂಡಿನಿ ಶಾಖೆಯ 2,000 ಮಂತ್ರಗಳ ದಂಡ ಕ್ರಮ ಪಾರಾಯಣವನ್ನು ಕಾಶಿಯ ವಿದ್ವತ್ ವರ್ಗದ ಮುಂದೆ ಮಾಡಿ ಯಶಸ್ವಿಯಾಗಿದ್ದಾರೆ.
ಸ್ಮರಣಶಕ್ತಿಯನ್ನು ಪಳಗಿಸಿಕೊಳ್ಳುವುದು ಭಾರತೀಯ ಪುರಾತನ ಶಿಕ್ಷಣದ ಭಾಗವಾಗಿದ್ದು, ದಂಡಕ್ರಮ ಪಾರಾಯಣದಲ್ಲಿ ಕಠಿಣ ವಿಧಿವತ್ತಾದ ಅಭ್ಯಾಸ ಕ್ರಮಗಳನ್ನು ಅನುಸರಿಸಲಾಗುತ್ತದೆ. ದಂಡಕ್ರಮ ಪಾರಾಯಣವು ದಂಡಕ ಶ್ಲೋಕಗಳ ಶಿಸ್ತುಬದ್ಧ ಮತ್ತು ಲಯಬದ್ಧವಾಗಿ ನಿಖರವಾದ ಪಠಣವನ್ನು ಸೂಚಿಸುತ್ತದೆ. ಇದು ಅಸಾಧಾರಣ ಉಸಿರಾಟದ ನಿಯಂತ್ರಣ, ಸ್ಮರಣಶಕ್ತಿ ಮತ್ತು ವೇದಗಳ ಸ್ವರಶ್ರುತಿಯ ಮೇಲೆ ಪಾಂಡಿತ್ಯ ಹೊಂದಿದವರು ಮಾತ್ರ ಮಾಡಬಲ್ಲದ್ದಾಗಿದೆ.








