ಆಯುಷ್‌ ಬದೋನಿ ಆಲ್‌ರೌಂಡ್‌ ಆಟದಿಂದ ದೆಹಲಿ ಎದುರು ಸೋತ ಕರ್ನಾಟಕ!

ಅಹಮದಾಬಾದ್‌:

     ಪ್ರಸ್ತುತ ನಡೆಯುತ್ತಿರುವ 2025ರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ  ಟೂರ್ನಿಯ ಎಲೈಟ್‌ ಡಿ ಪಂದ್ಯದಲ್ಲಿ ಕರ್ನಾಟಕ ತಂಡ  ಮೂರನೇ ಸೋಲು ಅನುಭವಿಸಿದೆ. ಗುರುವಾರ ನಡೆದಿದ್ದ ಈ ಪಂದ್ಯದಲ್ಲಿ ಆಯುಷ್‌ ಬದೋನಿ  ಆಲ್‌ರೌಂಡರ್‌ ಆಟದ ಬಲದಿಂದ ದೆಹಲಿ ತಂಡ, ಮಯಾಂಕ್‌ ಅಗರ್ವಾಲ್‌ ನಾಯಕತ್ವದ ಕರ್ನಾಟಕ ಎದುರು 45 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ 20 ಓವರ್‌ಗಳ ಟೂರ್ನಿಯಲ್ಲಿ ದೆಹಲಿ ಮೂರನೇ ಗೆಲುವು ಪಡೆದು ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇನ್ನು ಸೋತ ಕರ್ನಾಟಕ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಇಳಿದಿದೆ.

   ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ದೆಹಲಿ ತಂಡ, ಪ್ರಿಯಾಂಶ್‌ ಆರ್ಯ, ಆಯುಷ್‌ ಬದೋನಿ ಹಾಗೂ ತೇಜಸ್ವಿ ದಹಿಯಾ ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 232 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಕರ್ನಾಟಕ ತಂಡಕ್ಕೆ 233 ರನ್‌ಗಳ ಕಠಿಣ ಗುರಿಯನ್ನು ನೀಡಿತು. 

    ಬಳಿಕ ಬೃಹತ್‌ ಮೊತ್ತದ ಗುರಿಯನ್ನು ಹಿಂಬಾಲಿಸಿದ ಕರ್ನಾಟಕ ತಂಡದ ಪರ ದೇವದತ್‌ ಪಡಿಕ್ಕಲ್‌ ಹಾಗೂ ರವಿಚಂದ್ರನ್‌ ಸ್ಮರಣ್‌ ಅರ್ಧಶತಕ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟರ್‌ಗಳು ವಿಫಲರಾದರು. ಆಯುಷ್‌ ಬದೋನಿ ಸ್ಪಿನ್‌ ಮೋಡಿಗೆ ನಲುಗಿ 19.3 ಓವರ್‌ಗಳಿಗೆ 187 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬ್ಯಾಟಿಂಗ್‌ನಲ್ಲಿ ಅರ್ಧಶತಕ ಹಾಗೂ ಬೌಲಿಂಗ್‌ನಲ್ಲಿ 4 ವಿಕೆಟ್‌ ಕಬಳಿಸಿದ ಆಯುಷ್‌ ಬದೋನಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ದೆಹಲಿ ತಂಡದ ಪರ ಅಗ್ರ ನಾಲ್ವರು ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನವನ್ನು ತೋರಿದರು. ಪ್ರಿಯಾಂಶ್‌ ಆರ್ಯ 33 ಎಸೆತಗಳಲ್ಲಿ 187ರ ಸ್ಟ್ರೈಕ್‌ ರೇಟ್‌ನಲ್ಲಿ 62 ರನ್‌ಗಳನ್ನು ಬಾರಿಸಿದರು. ಆಯುಷ್‌ ಬದೋನಿ 35 ಎಸೆತಗಳಲ್ಲಿ 53 ರನ್‌ಗಳನ್ನು ಸಿಡಿಸಿದರು. ತೃೇಜಸ್ವಿ ದಹಿಯಾ ಕೂಡ 53 ರನ್‌ಗಳನ್ನು ಗಳಿಸಿದರು. ಕೊನೆಯಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ನಿತೀಶ್‌ ರಾಣಾ ಅಜೇಯ 46 ರನ್‌ಗಳನ್ನು ಗಳಿಸಿದರು. ಕರ್ನಾಟಕ ಪರ ಶುಭಾಂಗ್‌ ಹೆಗ್ಡೆ ಎರಡು ವಿಕೆಟ್‌ ಕಿತ್ತರು. 

    ಬೃಹತ್‌ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮಯಾಂಕ್‌ ಅಗರ್ವಾಲ್‌ ಹಾಗೂ ಶರತ್‌ ಬಿ ಆರ್‌ ವಿಫಲರಾದರು. ಕರುಣ್‌ ನಾಯರ್‌ ಕೂಡ ಕೇವಲ ಎರಡು ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ನಾಲ್ಕನೇ ವಿಕೆಟ್‌ಗೆ ಜೊತೆಯಾದ ದೇವದತ್‌ ಪಡಿಕ್ಕಲ್‌ ಹಾಗೂ ಸ್ಮರಣ್‌ ರವಿಚಂದ್ರನ್‌ ಜೋಡಿ 76 ರನ್‌ಗಳ ಜೊತೆಯಾಟವನ್ನು ಆಡಿತು. ಪಡಿಕ್ಕಲ್‌ ಸ್ಪೋಟಕ ಇನಿಂಗ್ಸ್‌ ಆಡಿ 38 ಎಸೆತಗಳಲ್ಲಿಎರಡು ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 62 ರನ್‌ ಸಿಡಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್‌ ನಡೆಸಿದ 19ನೇ ಓವರ್‌ವರೆಗೂ ಹೋರಾಟ ನಡೆಸಿದರು. ಅವರು ಆಡಿದ 38 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ 72 ರನ್‌ ಸಿಡಿಸಿದರು. ಆದರೆ, ಇತರೆ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಕರ್ನಾಟಕ ಸೋಲು ಒಪ್ಪಿಕೊಂಡಿತು.

Recent Articles

spot_img

Related Stories

Share via
Copy link