ಬೆಂಗಳೂರು
ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಂಡಿದೆ. ನಿನ್ನೆ ನಡೆದ ವಿಚಾರಣೆಯಲ್ಲಿ ಜನಪ್ರತಿನಿಧಿಗಳ ಕೋರ್ಟ್, ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದೆ. ಇದರಿಂದ ಸಂಪುಟ ಪುನಾರಚನೆ ವೇಳೆ ಸಚಿವರಾಗಬೇಕೆಂಬ ವಿನಯ್ ಕುಲಕರ್ಣಿ ಕನಸು ನುಚ್ಚುನೂರಾಗಿದೆ.
ಯೋಗೇಶ್ ಗೌಡ ಹತ್ಯೆ ಪ್ರಕರಣದ 16ನೇ ಆರೋಪಿ ಚಂದ್ರಶೇಖರ ಇಂಡಿ ಅಲಿಯಾಸ್ ಚಂದು ಮಾಮಗೆ ಕೋರ್ಟ್ ಜಾಮೀನು ನೀಡಿದೆ. ಆದರೆ, 15ನೇ ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿಗೆ ಜಾಮೀನು ಅರ್ಜಿಯನ್ನು ತಿರಸ್ಕಾರ ಮಾಡಿದೆ. ಪ್ರಮುಖವಾಗಿ ಸಾಕ್ಷಿಗಳ ಮೇಲೆ ಒತ್ತಡ ಹಾಕಿದ್ದ ಆರೋಪದ ಮೇಲೆ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಪ್ರಕರಣದ ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿದ ಹಿನ್ನಲೆಯಲ್ಲಿ ಜಾಮೀನು ಕೋರಿ ವಿನಯ್ ಕುಲಕರ್ಣಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಕುರಿತು ಕೋರ್ಟ್ ವಾದ ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿತ್ತು. ಇನ್ನೊಂದೆಡೆ ವಿನಯ್ ಕುಲಕರ್ಣಿ ಸಹ ಈಗ ಜಾಮೀನು ಸಿಕ್ಕರೆ ಈ ಬಾರಿ ಸಂಪುಟ ಪುನಾರಚನೆ ವೇಳೆ ಸಚಿವರಾಗಬೇಕೆಂಬ ಕನಸು ಕಂಡಿದ್ದರು. ಆದರೆ ಕೋರ್ಟ್ ವಿನಯ್ ಕುಲಕರ್ಣಿ ಕನಸಿಗೆ ತಣ್ಣೀರೆರಚಿದೆ.
ಧಾರವಾಡ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ ಗೌಡ ಅವರನ್ನು 2016ರ ಜೂನ್ 15ರಂದು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರ ಬಳಿಕ ಸಿಬಿಐ ಕೈಗೆತ್ತಿಕೊಂಡು ಶಾಸಕ ವಿನಯ್ ಕುಲಕರ್ಣಿ ಅವರನ್ನು ಆರೋಪಿಯನ್ನಾಗಿ ಪರಿಗಣಿಸಿ ಬಂಧಿಸಿತ್ತು. ಬಳಿಕ ವಿನಯ್ ಕುಲಕರ್ಣಿ ಜಾಮೀನಿನ ಮೇಲೆ ಜೈಲಿನಿಂದ ಆಚೆ ಬಂದಿದ್ದರು. ಆದರೆ, ಸಾಕ್ಷ್ಯ ನಾಶ ಯತ್ನ ನಡೆಸಿದ್ದಾರೆಂದು ಸಿಬಿಐ ಸಾಕ್ಷಿ ಸಮೇತ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಇದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ವಿನಯ್ ಕುಲಕರ್ಣಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಪಡಿಸಿತ್ತು. ಅನಿವಾರ್ಯವಾಗಿ ವಿನಯ್ ಕುಲಕರ್ಣಿ 2025ರ ಜೂನ್ 13ರಂದು ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.








