ನವದೆಹಲಿ:
ರಾಷ್ಟ್ರ ರಾಜಕಾರಣದಲ್ಲಿ ಕಳೆದ ಕೆಲ ತಿಂಗಳುಗಳಿಂದ ಭಾರಿ ಚರ್ಚೆಯಗುತ್ತಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ವಿಷಯ ಇಂದು ಸಂಸತ್ತಿನಲ್ಲಿ ಚರ್ಚೆಯಾಗಲಿದೆ. ಡಿಸೆಂಬರ್ 1ರಂದು ಚಳಿಗಾಲದ ಅಧಿವೇಶನ ಆರಂಭವಾದಾಗಿನಿಂದಲೂ ವಿರೋಧ ಪಕ್ಷಗಳು ಈ ಕುರಿತ ಚರ್ಚೆಗೆ ಪಟ್ಟು ಹಿಡಿದಿದ್ದವು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಸಂಸತ್ತಿನ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಿದ್ದರು. ಇದೀಗ ವಿಪಕ್ಷಗಳ ಒತ್ತಾಯಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಇಂದು (ಡಿ. 09) ಚುನಾವಣಾ ಸುಧಾರಣೆಗಳ ಕುರಿತು ಚರ್ಚೆ ನಡೆಸಲು ನಿರ್ಧರಿಸಿದೆ. ಇನ್ನು ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರೋಧ ಪಕ್ಷದ ನೇತೃತ್ವ ವಹಿಸಲಿದ್ದು, ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಉತ್ತರಿಸಲಿದ್ದಾರೆ.
ಕಳೆದ ನವೆಂಬರ್ನಲ್ಲಿ ನಡೆದ ಬಿಹಾರ ಚುನಾವಣಾ ಫಲಿತಾಂಶದ ನಂತರ ವಿಪಕ್ಷಗಳು ಮತಗಳ್ಳತನದ ಆರೋಪ ಮಾಡಿದ್ದವು. ನಕಲಿ ಮತದಾರರನ್ನು ಮತದಾರ ಪಟ್ಟಿಯಿಂದ ಕೈ ಬಿಡುವ ಸಲುವಾಗಿ ಪ್ರಸ್ತುತಪಡಿಸಿದ್ದ ಎಸ್ಐಆರ್ ಅನ್ನು ಬಿಹಾರದಲ್ಲಿ ಅನುಷ್ಠಾನಗೊಳಿಸಿದ ವೇಳೆ ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ವಿರೋಧ ಪಕ್ಷಗಳ ಪರವಾಗಿ ಮತ ಹಾಕುವ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಈ ಪ್ರಕ್ರಿಯೆ ನಡೆಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ವಿಪಕ್ಷಗಳು ಈ ಕುರಿತಾಗಿ ಚರ್ಚೆ ನಡೆಸಲು ಒಪ್ಪಿಗೆ ಸೂಚಿಸುವಂತೆ ಅಧಿವೇಶನದ ಆರಂಭದಿಂದಲೂ ಪಟ್ಟು ಹಿಡಿದಿದ್ದವು.
ರಾಹುಲ್ ಗಾಂಧಿಯವರು ಈ ಚರ್ಚೆಯಲ್ಲಿ ಭಾರತೀಯ ಚುನಾವಣಾ ಆಯೋಗ ಬಿಜೆಪಿ ಜೊತೆ ಶಾಮೀಲಾಗಿದ್ದು, ಮತಗಳ್ಳತನದಲ್ಲಿ ಭಾಗಿಯಾಗಿದೆ ಎನ್ನುವ ವಿಷಯ ಚರ್ಚಿಸುವ ಸಾಧ್ಯತೆಯಿದೆ. ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ವ್ಯತ್ಯಾಸಗಳು ಚುನಾವಣಾ ಕಾರ್ಯವಿಧಾನಗಳಲ್ಲಿನ ಲೋಪಗಳು ಕುರಿತು ಮಾತನಾಡಬಹುದು. ಈ ವಿಷಯಗಳು ಮಹಾರಾಷ್ಟ್ರ, ಹರಿಯಾಣ ಮತ್ತು ಕರ್ನಾಟಕದಲ್ಲಿ ಇತ್ತೀಚಿನ ಪತ್ರಿಕಾಗೋಷ್ಠಿಗಳಲ್ಲಿಯೂ ಸಹ ಕೇಳಿ ಬಂದಿದ್ದವು. ಮತದಾರರ ಪಟ್ಟಿ ಮರು ಪರಿಶೀಲನಾ ಕಾರ್ಯದ ಸಮಯದಲ್ಲಿ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ಮೇಲಿನ ಒತ್ತಡವನ್ನು ಕಾಂಗ್ರೆಸ್ ಪ್ರಸ್ತಾಪಿಸುವ ನಿರೀಕ್ಷೆಯಿದೆ. ಒತ್ತಡ ಮತ್ತು ಆಯೋಗದಲ್ಲಿ ಹೆಚ್ಚಿನ ಕೆಲಸದ ಹೊರೆಯಿಂದಾಗಿ ಆತ್ಮಹತ್ಯೆಗಳು ಸಂಭವಿಸಿವೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಇಂತಹ ಸೂಕ್ಷ್ಮ ವಿಷಯವನ್ನು ವಿರೋಧ ಪಕ್ಷವು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಈ ಆರೋಪವನ್ನು ತಳ್ಳಿ ಹಾಕಿದೆ.
ಭಾರತೀಯ ಚುನಾವಣಾ ಆಯೋಗ ಎಸ್ಐಆರ್ ಅನ್ನು ಮತದಾರರ ಪಟ್ಟಿಯಲ್ಲಿರುವ ದತ್ತಾಂಶ ಸಮಸ್ಯೆಗಳನ್ನು ಬಗೆಹರಿಸಲು ಈ ಕ್ರಮ ಅನುಸರಿಸಲಾಗಿದೆ ಎಂದು ಹೇಳಿದೆ. ಆಯೋಗವು ಕೊನೆಯದಾಗಿ 2002- 2004ರಲ್ಲಿ ದೇಶಾದ್ಯಾಂತ ಪ್ರತಿ ಮನೆಯ ಪರಿಷ್ಕರಣೆ ನಡೆಸಿತ್ತು. ಕಳೆದ ಎರಡು ದಶಕಗಳಲ್ಲಿ ಮತದಾರರ ಪಟ್ಟಿಯಲ್ಲಿ ನಕಲು ನೊಂದಣಿಗಳು, ಸ್ಥಳಾಂತರಗೊಂಡ ಮತದಾರರು ಹಾಗೂ ಮೃತಪಟ್ಟವರ ಪರಿಷ್ಕರಣೆ ಮಾಡಲು ನಡೆಸಲಾಗಿತ್ತು. ಸಂವಿಧಾನದ 324 ನೇ ವಿಧಿ ಮತ್ತು 1950 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 21 ರ ಅಡಿಯಲ್ಲಿ ಮತದಾರರ ಪಟ್ಟಿಯಲ್ಲಿ ಲೋಪಗಳಿದ್ದಾಗ ಚುನಾವಣಾ ಆಯೋಗ ಪರಿಷ್ಕರಣೆ ಮಾಡುವ ಅಧಿಕಾರ ಹೊಂದಿದೆ. ಎಸ್ಐಆರ್ ಮನೆ-ಮನೆ ಎಣಿಕೆ, ಮೊದಲೇ ಭರ್ತಿ ಮಾಡಿದ ನಮೂನೆಗಳು, ಆನ್ಲೈನ್ ಸಲ್ಲಿಕೆ ಆಯ್ಕೆಗಳು ಮತ್ತು ಹಳೆಯ ಮತದಾರರ ದತ್ತಾಂಶದ ಪರಿಶೀಲನೆಯನ್ನು ಒಳಗೊಂಡಿರುತ್ತದೆ.
ಈ ಬಾರಿ ನಡೆದ ಎಸ್ಐಆರ್ ಡಿಸೆಂಬರ್ 4 ರಂದು ಕೊನೆಗೊಳ್ಳುತ್ತಿದ್ದ ಎಣಿಕೆ ಅವಧಿಯನ್ನು ಡಿಸೆಂಬರ್ 11 ರವರೆಗೆ ವಿಸ್ತರಿಸಲಾಯಿತು. ಭಾನುವಾರದ ಚುನಾವಣಾ ಆಯೋಗದ ಬುಲೆಟಿನ್ ಪ್ರಕಾರ, 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ. 99.94 ರಷ್ಟು ಮತದಾರರು ತಮ್ಮ ಎಣಿಕೆ ನಮೂನೆಗಳನ್ನು ಸ್ವೀಕರಿಸಿದ್ದಾರೆ, 50.94 ಕೋಟಿ ನಮೂನೆಗಳನ್ನು ಮನೆಗಳಿಗೆ ತಲುಪಿಸಲಾಗಿದೆ. ಇದರಿಂದಾಗಿ ಕೇರಳವು ಡಿಸೆಂಬರ್ 18 ರವರೆಗೆ ನಮೂನೆಗಳನ್ನು ಸ್ವೀಕರಿಸುತ್ತದೆ. 50 ಕೋಟಿಗೂ ಹೆಚ್ಚು ನಮೂನೆಗಳು ಅಥವಾ ಒಟ್ಟು ನಮೂನೆಗಳಲ್ಲಿ ಶೇ. 98.22 ರಷ್ಟು ಈಗಾಗಲೇ ಡಿಜಿಟಲೀಕರಣಗೊಂಡಿವೆ ಎಂದು ಆಯೋಗವು ತಿಳಿಸಿದೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ನೇತೃತ್ವದ ಎನ್ಡಿಎ ಮೈತ್ರಿ ಕೂಟ ಭರ್ಜರಿ ಜಯ ದಾಖಲಿಸಿದೆ. ಎಸ್ಐಅರ್ ಎನ್ನುವುದು ಚುನಾವಣ ಆಯೋಗದ ಸ್ವಾಯತ್ತ ಪ್ರಕ್ರಿಯೆ ಅದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ. ವಿಪಕ್ಷ ಬಿಹಾರದಲ್ಲಿ ಹೀನಾಯ ಸೋಲು ಕಂಡ ಕಾರಣ ಹತಾಶರಾಗಿ ಈ ರೀತಿಯ ಆರೋಪಗಳನ್ನು ಮಾಡುತ್ತಿದೆ ಎಂದು ಬಿಂಬಿಸಲು ಕೇಂದ್ರ ಸರ್ಕಾರ ತಯಾರಾಗಿದೆ.








