ಉಡುಪಿ
ಮಲ್ಪೆಯಲ್ಲಿ ಬಂಧಿತರಾಗಿದ್ದ 10 ಮಂದಿ ಅಕ್ರಮ ಬಾಂಗ್ಲಾ ವಲಸಿಗರಿಗೆ ಉಡುಪಿ ಜಿಲ್ಲಾ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿದೆ. ಬಾಂಗ್ಲಾ ದೇಶದಿಂದ ಅಕ್ರಮವಾಗಿ ಉಡುಪಿಗೆ ಬಂದಿದ್ದ ಹಕೀಮ್ ಆಲಿ, ಸುಜೋನ್ ಎಸ್.ಕೆ., ಇಸ್ಮಾಯಿಲ್ ಎಸ್.ಕೆ , ಕರೀಮ್ ಎಸ್.ಕೆ., ಸಲಾಂ ಎಸ್.ಕೆ., ರಾಜಿಕುಲ್ ಎಸ್.ಕೆ., ಮೊಹಮ್ಮದ್ ಸೋಜಿಬ್ , ರಿಮೂಲ್ , ಮೊಹಮ್ಮದ್ ಇಮಾಮ್ ಶೇಖ್, ಮೊಹಮ್ಮದ್ ಜಹಾಂಗಿರ್ ಆಲಂ ಶಿಕ್ಷೆಗೊಳಗಾದವರು.
2024ರ ಅ.11ರಂದು ಸಾಯಂಕಾಲ 7 ಗಂಟೆಗೆ ಮಲ್ಪೆ ಠಾಣೆ ಪಿಎಸ್ಐ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಲ್ಪೆ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ 7 ಜನರು ಅನುಮಾನಸ್ಪದವಾಗಿ ಲಗೇಜ್ ಸಮೇತ ಒಡಾಡುತ್ತಿದ್ದರು. ಇದನ್ನು ಕಂಡು ವಿಚಾರಿಸಿದಾಗ ಆರೋಪಿತರು ಯಾವುದೇ ಅನುಮತಿ ದಾಖಲೆಗಳನ್ನು ಪಡೆಯದೇ ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ದಾಖಲೆಗಳನ್ನು ಸೃಷ್ಟಿಸಿರುವುದು ಕಂಡುಬಂದಿತ್ತು. ಹೀಗಾಗಿ ಏಳು ಜನರನ್ನು ಬಂಧಿಸಲಾಗಿತ್ತು. ಇನ್ನು ತನಿಖೆ ವೇಳೆ ಬಾಂಗ್ಲಾದೇಶದಿಂದ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಹೂಡೆಗೆ ಬಂದಿರುವುದಾಗಿ ಬಾಯ್ಬಿಟ್ಟಿದ್ದರು. ಅಲ್ಲದೇ ಇವರು ನೀಡಿದ ಮಾಹಿತಿಯಂತೆ ಉಳಿದ 3 ಮಂದಿ ಅಕ್ರಮ ವಲಸಿಗರನ್ನು ನಂತರ ಬಂಧಿಸಲಾಗಿತ್ತು.
ಈ ಆರೋಪಿಗಳು ನಕಲಿ ಭಾರತೀಯ ದಾಖಲಾತಿ ಸೃಷ್ಟಿಸಿ ಉಡುಪಿಗೆ ಪ್ರವೇಶಿಸಿದ್ದರು.ಆರೋಪಿಗಳ ಪೈಕಿ ಸಿಕ್ಕಿಂ ಅಗರ್ತಲಾದ ಕಾಜೋಲ್ ಎಂಬಾತ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ್ದಾನೆಂದು ತಿಳಿದುಬಂದಿತ್ತು. ಹಾಗೇ ಮತ್ತೋರ್ವ ಆರೋಪಿ ಉಸ್ಮಾನ್ ಎಂಬಾತ ಅಕ್ರಮವಾಗಿ ಕರೆತಂದು ಉದ್ಯೋಗಕ್ಕೆ ವ್ಯವಸ್ಥೆ ಮಾಡಿದ್ದ. ಸದ್ಯ ಮಲ್ಪೆ ಪೊಲೀಸರು, ಅಕ್ರಮ ಬಾಂಗ್ಲಾ ವಲಸಿಗರನ್ನು ಬಂಧಿಸಿ ಅವರಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.








