ಬೆಂಗಳೂರು
ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸುವುದರ ಜೊತೆಗೆ ಸರಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ಮೊಟ್ಟೆ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಸರಕಾರದಿಂದ ಶಾಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ಕೊಡುತ್ತಿದ್ದ ಮೊಟ್ಟೆ ಸೌಲಭ್ಯವನ್ನು ಶಿಕ್ಷಣ ಇಲಾಖೆಯು ಅಜೀಂ ಪ್ರೇಮ್‌ಜೀ ಪ್ರತಿಷ್ಠಾನದ ಸಹಯೋಗದೊಂದಿಗೆ ವಾರದ ಆರು ದಿನಗಳಿಗೆ ವಿಸ್ತರಿಸಿದೆ. ಎರಡು ದಿನಕ್ಕೆ ಏಜೆನ್ಸಿಗಳು ಮೊಟ್ಟೆ ಪೂರೈಸಿದರೆ, ಉಳಿದ 4 ದಿನ ಸರಕಾರ ನೀಡಿದ ಅನುದಾನದಲ್ಲೇ ಮೊಟ್ಟೆ ಖರೀದಿಸಿ ವಿತರಿಸಬೇಕಿದೆ. ಮೊಟ್ಟೆಗೇನೋ ದುಡ್ಡು ಬರುತ್ತಿದೆ. ಆದರೆ, ಅದು ಮೊಟ್ಟೆ ಖರೀದಿಗೆ ಹಾಗೂ ಅದನ್ನು ಬೇಯಿಸಿಕೊಡುವ ಖರ್ಚಿಗೆ ಸಾಕಾಗುತ್ತಿಲ್ಲ. ಹೀಗಾಗಿ ಶಿಕ್ಷಕರು ಹೆಚ್ಚುವರಿ ಮೊತ್ತವನ್ನು ತಮ್ಮ ಜೇಬಿನಿಂದಲೇ ವ್ಯಯಿಸಬೇಕಾಗುತ್ತಿದೆ.
ಈ ಹಿಂದೆ 5.30 ರೂ.ನಷ್ಟಿದ್ದ ಮೊಟ್ಟೆ ದರ ಕಳೆದ ತಿಂಗಳಿಂದ 7 ರಿಂದ 8 ರೂ. ವರೆಗೆ ಏರಿಕೆಯಾಗಿದೆ. ಉತ್ಪಾದನೆ ಕುಸಿತ ಹಾಗೂ ಬೇಡಿಕೆ ಹೆಚ್ಚಾದ ಹಿನ್ನಲೆ ಮೊಟ್ಟೆ ದರ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ದರ 8 ರೂಪಾಯಿಗೆ ಏರಿಕೆ ಕಂಡಿದೆ. ಆದರೆ ಶಾಲಾ ಶಿಕ್ಷಣ ಇಲಾಖೆ ಪ್ರತಿ ಮೊಟ್ಟೆ ಖರೀದಿಗೆ 6 ರೂಪಾಯಿ ದರ ನಿಗದಿ ಮಾಡಿದೆ. ಇದರಿಂದಾಗಿ ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಕೈಯಿಂದ ಹೆಚ್ಚುವರಿ ಹಣ ಹಾಕಿ ಮೊಟ್ಟೆ ದರ ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಮೊಟ್ಟೆ ಬೇಯಿಸಲು ಹೆಚ್ಚು ಹಣ ಖರ್ಚಾಗುತ್ತಿದೆ. ಹೀಗಾಗಿ ಸರ್ಕಾರಿ ಶಾಲಾ ಶಿಕ್ಷಕರಿಗೆ ಮೊಟ್ಟೆ ಖರೀದಿಸಲು ಆಗದ ಮತ್ತು ಹೆಚ್ಚುವರಿ ಹಣ ನೀಡಲು ಸ್ವಂತ ಹಣ ಖರ್ಚು ಮಾಡಬೇಕಾದ, ಅನುದಾನಿಗಳ ಮೊರೆ ಹೋಗಬೇಕಾದ ಸ್ಥಿತಿ ಎದುರಾಗಿದೆ.
ಕಳೆದ ಕೆಲವು ತಿಂಗಳ ಹಿಂದೆ ಶಿಕ್ಷಣ ಇಲಾಖೆ ವಾರದಲ್ಲಿ 2 ದಿನಗಳು ಮಾತ್ರ ಮೊಟ್ಟೆ ವಿತರಣೆ ಮಾಡುತ್ತಿತ್ತು. ಆದರೆ, ಇತ್ತೀಚೆಗೆ ಶಿಕ್ಷಣ ಇಲಾಖೆಯು ಅಜೀಂ ಪ್ರೇಮ್‌ಜೀ ಫೌಂಡೇಷನ್ ಜತೆ ಒಪ್ಪಂದ ಮಾಡಿಕೊಂಡು 1,500 ಕೋಟಿ ರೂ.ಅನುದಾನ ಪಡೆದಿದೆ. ಇದರಿಂದ ವಾರದಲ್ಲಿ ಎರಡು ದಿನಗಳ ಬದಲಿಗೆ 6 ದಿನಗಳ ಕಾಲ ಮೊಟ್ಟೆ ನೀಡುತ್ತಿದೆ. ಇದರಿಂದಾಗಿ ಶಾಲೆಗಳಲ್ಲಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಬೇಡಿಕೆಗೆ ತಕ್ಕಂತೆ ಮೊಟ್ಟೆ ಪೂರೈಕೆಯಾಗುತ್ತಿಲ್ಲ.
ಒಟ್ಟಿನಲ್ಲಿ ವಾರದಲ್ಲಿ ಆರು ದಿನಗಳ ಕಾಲ ಮೊಟ್ಟೆ ನೀಡುವ ಯೋಜನೆಯಿಂದಾಗಿ ಸರ್ಕಾರಿ ಶಾಲೆ ಶಿಕ್ಷಕರಿಗೆ ಸಮಸ್ಯೆ ಎದುರಾಗಿದೆ. ಸರ್ಕಾರ ಈ ಬಗ್ಗೆ ಕೂಡಲೇ ಗಮನಹರಿಸಬೇಕಿದೆ.








