ರಾಂಚಿ
ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ಜಾರ್ಖಂಡ್ನಲ್ಲಿ ಭಾನುವಾರ (ಡಿಸೆಂಬರ್ 14) ಬಾಂಬ್ ಸ್ಫೋಟಗೊಂಡು ಇಬ್ಬರು ಸಿಆರ್ಪಿಎಫ್ ಜವಾನರು ಗಾಯಗೊಂಡಿದ್ದಾರೆ. ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಸಾರಂಡಾ ಅರಣ್ಯದಲ್ಲಿ ಐಇಡಿ ಸ್ಫೋಟಗೊಂಡು ಎಲೈಟ್ ಕೋಬ್ರಾ ಬೆಟಾಲಿಯನ್ನ ಇಬ್ಬರು ಕೇಂದ್ರ ಮೀಸಲು ಪೊಲೀಸ್ ಪಡೆ ಜವಾನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಛೋಟಾನಾಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬಲಿಬಾ ಅರಣ್ಯ ಪ್ರದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶವನ್ನು ಮಾವೋವಾದಿಗಳ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಈ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಮಾವೋವಾದಿಗಳು ಐಇಡಿಗಳನ್ನು ಇರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಶ್ಚಿಮ ಸಿಂಗ್ಭೂಮ್ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ರೇಣು ಸ್ಫೋಟವನ್ನು ದೃಢಪಡಿಸಿದ್ದು, ಗಾಯಗೊಂಡ ಯೋಧರು ಸಾರಂಡಾ ದಟ್ಟ ಅರಣ್ಯದಲ್ಲಿ ಮಾವೋವಾದಿಗಳ ವಿರುದ್ಧ ನಡೆದ ಕಾರ್ಯಾಚರಣೆಯ ಭಾಗವಾಗಿದ್ದರು ಎಂದು ಹೇಳಿದರು. “ಗಾಯಗೊಂಡ ಯೋಧರಿಗೆ ಸಿಆರ್ಪಿಎಫ್ ಶಿಬಿರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ರಾಂಚಿಯ ಖಾಸಗಿ ಆಸ್ಪತ್ರೆಗೆ ಹೆಲಿಕಾಪ್ಟರ್ ಮೂಲಕ ಕರೆದೊಯ್ಯಲಾಗಿದೆ” ಎಂದು ತಿಳಿಸಿದರು.
ಗಾಯಗೊಂಡ ಸಿಬ್ಬಂದಿಯನ್ನು ಹೆಡ್ ಕಾನ್ಸ್ಟೇಬಲ್ ಅಲೋಕ್ ದಾಸ್ ಮತ್ತು ಸಿಪಾಯಿ ನಾರಾಯಣ್ ದಾಸ್ ಎಂದು ಗುರುತಿಸಲಾಗಿದೆ. ಈ ದಾಳಿಯನ್ನು ಮಾವೋವಾದಿಗಳ ಹತಾಶೆಯ ಕೃತ್ಯ ಎಂದು ಎಸ್ಪಿ ರೇಣು ಕರೆದಿದ್ದಾರೆ. ಸ್ಫೋಟಗಳ ನಂತರ ಸರಂಡಾ ಕಾಡಿನಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ ಎಂದು ಹೇಳಿದರು.
2026ರಲ್ಲಿ ಭಾರತವನ್ನು ನಕ್ಸಲ್ಮುಕ್ತ ದೇಶವನ್ನಾಗಿಸುವುದಾಗಿ ಈಗಾಗಲೇ ಕೇಂದ್ರ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಹಲವು ನಕ್ಸಲರು ಈಗಾಗಲೇ ಶರಣಾಗಿದ್ದು, ಉಳಿದವರನ್ನು ನಿರ್ನಾಮ ಮಾಡಲಾಗುತ್ತಿದೆ.
ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮುಕ್ತ ಭಾರತದ ಕನಸನ್ನು ಒತ್ತಿ ಹೇಳಿದ್ದರು. ದೇಶಾದ್ಯಂತ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯನ್ನು ಒಂದು ದಶಕದ ಹಿಂದೆ 125ರಿಂದ ಕೇವಲ 11ಕ್ಕೆ ಇಳಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಹೇಳಿದ್ದರು.
ಈ ಹಿಂದೆ 2026ರ ಮಾರ್ಚ್ 31ರೊಳಗೆ ಭಾರತದಲ್ಲಿ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಮಾವೋವಾದಿಗಳ ನಿಯಂತ್ರಣದಲ್ಲಿದ್ದ ಜಿಲ್ಲೆಗಳಲ್ಲಿ ಈಗ ಮೂರು ಸಂಪೂರ್ಣ ಮುಕ್ತವಾಗಿದೆ. ಇಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಿಗ್ರಹಿಸಲು ರಾಷ್ಟ್ರೀಯ ಕ್ರಿಯಾ ಯೋಜನೆ ಅಡಿಯಲ್ಲಿ ಸರ್ಕಾರ ಸಮಗ್ರ ಕಾರ್ಯತಂತ್ರವನ್ನು ರೂಪಿಸಿ ಜಾರಿಗೆ ಗೊಳಿಸಿದ್ದರಿಂದ ಇದು ಸಾಧ್ಯವಾಗಿದೆ. ಛತ್ತೀಸ್ಗಢದ ಬಿಜಾಪುರ, ಸುಕ್ಮಾ ಮತ್ತು ನಾರಾಯಣಪುರ ಜಿಲ್ಲೆಗಳಲ್ಲಿ ಮಾತ್ರ ಈಗ ನಕ್ಸಲ್ ಚಟುವಟಿಕೆಗಳು ಕಂಡು ಬರುತ್ತಿವೆ ಎಂದು ತಿಳಿಸಿದ್ದರು.








