ಮುಂಡಗೋಡ:
ಮುಂಡಗೋಡ ನಗರದಲ್ಲಿರುವ ಶಾಸಕರ ಮಾದರಿ ಶಾಲೆಯ ಮಕ್ಕಳು ಬಿಸಿ ಊಟ ಸೇವಿಸಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿ ಊಟದಲ್ಲಿ ಬಳಸಿದ ಆಹಾರ ಪದಾರ್ಥಗಳು ಕಳಪೆ ಗುಣಮಟ್ಟದ್ದಾಗಿದ್ದಲ್ಲದೆ ಬ್ಯಾಕ್ಟಿರಿಯಾ ಮಿಶ್ರಿತ ಸಾಂಬಾರ್ ನಿಂದಾಗಿ ಮಕ್ಕಳು ಅಸ್ವಸ್ಥಗೊಂಡಿರುವ ಬಗ್ಗೆ, ಲ್ಯಾಬ್ ರಿಪೋರ್ಟ್ ನಲ್ಲಿ ಕಂಡು ಬಂದಿರುತ್ತದೆ. ಈ ಶಾಲೆಯಲ್ಲಿ ಕುಡಿಯಲು ಬಳಸುವ ನೀರೂ ಸಹ ಗುಣಮಟ್ಟದ್ದಲ್ಲವೆಂದು ಪರೀಕ್ಷೆಯಿಂದ ಖಚಿತವಾಗಿದೆ.
ಈ ಶಾಲೆಯಲ್ಲಿ ಅಡುಗೆಗೆ ಬಳಸಲಾಗುವ ಪರಿಕರಗಳು ಸ್ವಚ್ಛತೆಯಿಂದ ಕೂಡದೇ ಇರುವುದು ಮತ್ತು ಆಹಾರ ತಯಾರಕರೂ ಸಹ ವೈಯುಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳದೇ ಇರುವುದೇ ಈ ಘಟನೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದ್ದು, ಅಸ್ವಸ್ಥಗೊಂಡ ವಿದ್ಯಾರ್ಥಿಗಳ ಪೋಷಕರು ನಿರ್ಲಕ್ಷ್ಯ ವಹಿಸಿರುವ ಮುಖ್ಯೋಪಾಧ್ಯಾಯರ ಮೇಲೆ ಯಾವುದೇ ಕ್ರಮವಾಗಿರುವುದಿಲ್ಲವೆಂದು ತಿಳಿಸಿರುತ್ತಾರೆ.
ಆಯೋಗದ ಸದಸ್ಯರೂ ಸಹ ಈ ಬಗ್ಗೆ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡು ಆಯೋಗ ವಿಚಾರಣೆಗೆ ಒಳಪಡಿಸಲಾಗುವುದು ಎಂಬ ಹೇಳಿಕೆಯನ್ನು ನೀಡಿದ್ದು, ಬಿಸಿ ಊಟದಲ್ಲಿ ಉಂಟಾಗಿರುವ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಲ್ಯಾಬ್ ರಿಪೋರ್ಟ್ ಸಹ ಬಂದಿದ್ದು, ಈ ಬಗ್ಗೆ ಇಲಾಖೆಯು ಖುದ್ದು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಇಲಾಖಾ ನಿಯಮಾನುಸಾರ ಕ್ರಮ ಜರುಗಿಸಿ ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ 07 ದಿನಗಳ ಒಳಗಾಗಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಅಧ್ಯಕ್ಷರು ಶಶಿಧರ್ ಎಸ್ ಕೋಸಂಬೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು ಮಧ್ಯಾಹ್ನದ ಬಿಸಿ ಊಟ ಯೋಜನೆ ಶಾಲಾ ಶಿಕ್ಷಣ ಇಲಾಖೆ ಉತ್ತರ ಕನ್ನಡ ಜಿಲ್ಲೆ. ಇವರಿಗೆ ಪತ್ರದ ಮೂಲಕ ತಿಳಿಸಿರುತ್ತಾರೆ.








