ಅಬುಧಾಬಿ
ಐಪಿಎಲ್ 19ನೇ ಆವೃತ್ತಿಗೆ ಪೂರ್ವಭಾವಿಯಾಗಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಅಬುಧಾಬಿಯಲ್ಲಿ ನಡೆಯುವ ಮಿನಿ ಹರಾಜಿನಲ್ಲಿ 31 ವಿದೇಶಿಯರ ಸಹಿತ ಒಟ್ಟು 77 ಆಟಗಾರರನ್ನು ಖರೀದಿಸಲು ಅವಕಾಶವಿದೆ. 369 ಆಟಗಾರರ ಪೈಪೋಟಿಯಲ್ಲಿ ಮಹಾರಾಜ ಟ್ರೋಫಿ ಹಾಗೂ ಕೆಎಸ್ಸಿಎ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ರಾಜ್ಯದ ಉದಯೋನ್ಮುಖ ಆಟಗಾರರು ಸೇರಿ ಒಟ್ಟು 17 ಕ್ರಿಕೆಟಿಗರು ಈ ಬಾರಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಹರಾಜು ಭಾರತೀಯ ಕಾಲಮಾನ ಮಧ್ಯಾಹ್ನ 2.30 ಆರಂಭವಾಗಲಿದೆ.
ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ (75 ಲಕ್ಷ ರೂ.) ಗರಿಷ್ಠ ಮೂಲಬೆಲೆ ಹೊಂದಿರುವ ಕನ್ನಡಿಗ ಎನಿಸಿದ್ದಾರೆ. ಕಳೆದ ಬಾರಿ ಅವರು ಆರ್ಸಿಬಿ ಪರ ಆಡಿದ್ದರು. ಅಭಿನವ್ ಮನೋಹರ್, ವಿದ್ಯಾಧರ್ ಪಾಟೀಲ್, ವಿದ್ವತ್ ಕಾವೇರಪ್ಪ, ಕೆಎಲ್ ಶ್ರೀಜಿತ್, ಯಶ್ ರಾಜ್ ಪೂಂಜಾ, ಅಭಿಲಾಷ್ ಶೆಟ್ಟಿ, ಮನ್ವಂತ್ ಕುಮಾರ್, ಮನೋಜ್ ಭಾಂಡಗೆ, ಪ್ರವಿಣ್ ದುಬೆ, ಮ್ಯಾಕ್ನೀಲ್ ನೂರಾನ್ಹಾ, ಶುಭಾಂಗ್ ಹೆಗ್ಡೆ, ಶ್ರೀವತ್ಸ ಆಚಾರ್ಯ , ಹಾರ್ದಿಕ್ ರಾಜ್, ಮಾಧವ್ ಬಜಾಜ್, ತಲಾ 30 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ.
ಮಿನಿ ಹರಾಜಿನಲ್ಲಿ ವಿದೇಶಿ ಕ್ರಿಕೆಟಿಗರಿಗೆ ಎಷ್ಟೇ ಮೊತ್ತದ ಬಿಡ್ ಆದರೂ ಗರಿಷ್ಠ 18 ಕೋಟಿ ರೂ. ಮಾತ್ರ ಗಳಿಸಲಿದ್ದಾರೆ. ಬಿಸಿಸಿಐನ ಮಿನಿ ಹರಾಜು ನಿಯಮಾವಳಿ ಇದಕ್ಕೆ ಕಾರಣವಾಗಿದೆ. ಬಿಡ್ ಆದ ಹೆಚ್ಚುವರಿ ಮೊತ್ತವನ್ನು ಬಿಸಿಸಿಐ ಆಟಗಾರರ ಕಲ್ಯಾಣ ನಿಧಿಯಾಗಿ ಬಳಸಿಕೊಳ್ಳಲಿದೆ.








