ಶಿಕ್ಷೆಗೊಳಗಾದ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡಿದ ಸಚಿವ ಮಾಣಿಕ್ರಾವ್ ಕೊಕಟೆ

ಮುಂಬೈ: 

    ಮಹಾರಾಷ್ಟ್ರದ ವಸತಿ ಹಗರಣದಲ್ಲಿ  ಶಿಕ್ಷೆಗೊಳಗಾದ ಕೆಲವೇ ಗಂಟೆಗಳಲ್ಲಿ ಮಹಾರಾಷ್ಟ್ರ ಕ್ರೀಡಾ ಸಚಿವ  ಮತ್ತು ಎನ್‌ಸಿಪಿ ನಾಯಕ  ಮಾಣಿಕ್ರಾವ್ ಕೊಕಟೆ  ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. 1995ರ ವಸತಿ ಹಗರಣ ಪ್ರಕರಣದಲ್ಲಿ ಮಾಣಿಕ್ರಾವ್ ಕೊಕಟೆ ಮತ್ತು ಅವರ ಸಹೋದರ ವಿಜಯ್ ಕೊಕಟೆ  ಅವರನ್ನು ಅಪರಾಧಿಗಳೆಂದು ತೀರ್ಮಾನಿಸಿ ನಾಸಿಕ್ ಸೆಷನ್ಸ್ ನ್ಯಾಯಾಲಯ  ತೀರ್ಪು ನೀಡಿದೆ. 1995ರಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ  ಮೀಸಲಾದ ವಸತಿ ಯೋಜನೆಯಲ್ಲಿ ಶೇ. 10 ರಷ್ಟು ಕೋಟಾವನ್ನು ಇವರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.ಮೂರು ದಶಕಗಳ ಹಿಂದಿಂದ ವಸತಿ ಹಗರಣದ ಕುರಿತು ನಾಸಿಕ್ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದ ಬೆನ್ನಲ್ಲೇ ಮಾಣಿಕ್ರಾವ್ ಕೊಕಟೆ ಅವರು ರಾಜೀನಾಮೆ ನೀಡಿದರು. ಇದು ರಾಜ್ಯದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ರಾಜಕೀಯ ಕೋಲಾಹಲ ವನ್ನು ಉಂಟು ಮಾಡಿದೆ. 

    ವಸತಿ ಹಗರಣ ಹೊರತುಪಡಿಸಿ ಯಾವುದೇ ಆರೋಪವಿಲ್ಲದ ಕೊಕಟೆ ಕ್ರೀಡಾ ಖಾತೆಯನ್ನು ಹೊಂದಿದ್ದರು. ನಾಸಿಕ್ ಸೆಷನ್ಸ್ ನ್ಯಾಯಾಲಯವು ಬುಧವಾರ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದರಿಂದ ಅವರು ರಾಜೀನಾಮೆ ನೀಡಿದರು. ಇವರ ರಾಜೀನಾಮೆಯಿಂದ ತೆರವಾಗಿರುವ ಮಹಾರಾಷ್ಟ್ರ ಕ್ರೀಡಾ ಸಚಿವಾಲಯವು ಈಗ ಅಜಿತ್ ಪವಾರ್ ಅವರ ಅಧಿಕಾರ ವ್ಯಾಪ್ತಿಯಲ್ಲಿದೆ. 

    1995ರಲ್ಲಿ ಮಾಣಿಕ್ರಾವ್ ಕೊಕಟೆ ಮತ್ತು ಅವರ ಸಹೋದರ ವಿಜಯ್ ಕೊಕಾಟೆ ಅವರು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಮೀಸಲಾಗಿದ್ದ ವಸತಿ ಯೋಜನೆಯ ಶೇ. 10 ರಷ್ಟು ಕೋಟಾವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಕುರಿತು ತನಿಖೆ ನಡೆಸಿದಾಗ ಸಹೋದರರಿಬ್ಬರ ವಿರುದ್ಧ ವಂಚನೆ ಮತ್ತು ನಕಲಿ ದಾಖಲೆಗಳು ಸಿಕ್ಕಿದ್ದರಿಂದ ಅವರನ್ನು ತಪ್ಪಿತಸ್ಥರೆಂದು ತೀರ್ಮಾನಿಸಲಾಗಿದೆ.

    ಈ ಹಿಂದೆ ಮ್ಯಾಜಿಸ್ಟ್ರೇಟ್ ನೀಡಿದ್ದ ಶಿಕ್ಷೆಯನ್ನು ಎತ್ತಿಹಿಡಿದಿರುವ ನಾಸಿಕ್ ಸೆಷನ್ಸ್ ನ್ಯಾಯಾಲಯ ಕೊಕಟೆ ಅವರನ್ನು ಮಹಾರಾಷ್ಟ್ರ ಶಾಸಕಾಂಗದಿಂದ ಅನರ್ಹಗೊಳಿಸಲು ಅವಕಾಶ ನೀಡಿತ್ತು. ಅಲ್ಲದೆ ಚುನಾವಣಾ ಕಾನೂನಿನಡಿಯಲ್ಲಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.ನಾಸಿಕ್ ಸೆಷನ್ಸ್ ನ್ಯಾಯಾಲಯದ ತೀರ್ಪಿನ ಬಳಿಕ ಅವರ ಬಂಧನಕ್ಕೆ ವಾರಂಟ್ ಹೊರಡಿಸಲಾಯಿತು. ಈ ಹಿನ್ನೆಲೆಯಲ್ಲಿ ಅವರ ಪರ ವಕೀಲರು ತುರ್ತು ವಿಚಾರಣೆಗಾಗಿ ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಿದರು. ಆದರೆ ನ್ಯಾಯಾಲಯವು ಈ ವಿಷಯವನ್ನು ಶುಕ್ರವಾರ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದರಿಂದ ಕೊಕಟೆ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ತಕ್ಷಣ ಬಂಧವಾಗುವುದನ್ನು ತಪ್ಪಿಸಲಾಗಿದೆ. ಈ ವರ್ಷದ ಆರಂಭದಲ್ಲಿ ರಾಜ್ಯ ವಿಧಾನಸಭೆಯಲ್ಲಿ ಮೊಬೈಲ್ ಫೋನ್‌ನಲ್ಲಿ ರಮ್ಮಿ ಆಟವಾಡಿ ಕೊಕಟೆ ಸುದ್ದಿಯಾಗಿದ್ದರು. 

   ಮಾಣಿಕ್ರಾವ್ ಕೊಕಟೆ ಅವರ ರಾಜೀನಾಮೆಯಿಂದ ಕ್ರೀಡಾ ಸಚಿವ ಹುದ್ದೆ ತೆರವಾಗಿದ್ದರಿಂದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೇಲೆ ರಾಜಕೀಯ ಒತ್ತಡ ಹೆಚ್ಚಾಗಿದೆ. ಅವರು ತಮ್ಮ ಚುನಾವಣಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಎನ್‌ಸಿಪಿಯ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದರು. ಪರಿಸ್ಥಿತಿಯ ಬಗ್ಗೆ ವಿವರಿಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾದರು.ಒಂದೆಡೆ ಕೊಕಟೆ ಅವರ ಶಿಕ್ಷೆಯನ್ನು ತಡೆಹಿಡಿಯಲು ಇರುವ ಅವಕಾಶದ ಬಗ್ಗೆ ಫಡ್ನವೀಸ್ ಕೇಳಿದ್ದರೆ ಇನ್ನೊಂದೆಡೆ ಸರ್ಕಾರವು ಶಿಕ್ಷೆಗೊಳಗಾದ ಸಚಿವರನ್ನು ರಕ್ಷಿಸಲು ಪರಿಗಣಿಸುವುದು ಸಾಧ್ಯವಿಲ್ಲ ಎಂದು ಬಿಜೆಪಿ, ಶಿವಸೇನೆ ವಾದಿಸಿದೆ ಎನ್ನಲಾಗಿದೆ. 

   ಕೊಕಟೆ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಇನ್ನೂ ಸ್ವೀಕರಿಸಿಲ್ಲ. ಹೀಗಾಗಿ ಮಹಾವಿಕಾಸ್ ಅಘಾಡಿ ಸರ್ಕಾರದ ಅವಧಿಯಲ್ಲಿ ನವಾಬ್ ಮಲಿಕ್ ಅವರನ್ನು ಖಾತೆಯಿಲ್ಲದೆ ಸಚಿವರನ್ನಾಗಿ ಇರಿಸಿಕೊಂಡಂತೆಯೇ ಮಹಾಯುತಿ ಕೊಕಟೆ ಅವರನ್ನು ಕೂಡ ಖಾತೆಗಳಿಲ್ಲದೆ ಉಳಿಸಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.ಇನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣದ ನಾಯಕರು ಕೋಕಟೆ ಅವರನ್ನು ತಕ್ಷಣವೇ ಏಕೆ ಅನರ್ಹಗೊಳಿಸಲಿಲ್ಲ ಎಂದು ಪ್ರಶ್ನಿಸಿವೆ.

   ಕೊಕಟೆ ರಾಜೀನಾಮೆ ಬಳಿಕ ಹಿರಿಯ ಎನ್‌ಸಿಪಿ ನಾಯಕ ಧನಂಜಯ್ ಮುಂಡೆ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಡುವೆ ದೆಹಲಿಯಲ್ಲಿ ಮಾತುಕತೆ ನಡೆದಿದ್ದು, ಇದು ಸಚಿವ ಸಂಪುಟ ಪುನರಚನೆಗೆ ಆಗಿರಬಹುದು ಎನ್ನುವ ಊಹಾಪೋಹಗಳು ಎದ್ದಿವೆ. ಆದರೆ ಇದು ಪೂರ್ವ ಯೋಜಿತ ಭೇಟಿಯಾಗಿತ್ತು. ಇದಕ್ಕೂ ಕೊಕಟ ರಾಜೀನಾಮೆಗೂ ಸಂಬಂಧವಿಲ್ಲ ಎಂದು ಮುಂಡೆ ಸ್ಪಷ್ಟಪಡಿಸಿದ್ದಾರೆ.

Recent Articles

spot_img

Related Stories

Share via
Copy link