ಇಷ್ಟದ ಖಾದ್ಯ ಸವಿಯುತ್ತಾ ಸಚಿವ ನಿತಿನ್‌ ಗಡ್ಕರಿ ಜೊತೆ ಪ್ರಿಯಾಂಕಾ ಗಾಂಧಿ ಚರ್ಚೆ!

ನವದೆಹಲಿ:

      ಕೇರಳದ  ರಸ್ತೆ ಯೋಜನೆಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ  ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ  ಅವರನ್ನು ಭೇಟಿಯಾದರು. ಈ ವೇಳೆ ಅವರಿಬ್ಬರ ನಡುವಿನ ಮಾತುಕತೆಯು, ನಗು, ವಿನೋದ ಹಾಗೂ ಆಹಾರವನ್ನು ಸವಿಯು ಮೂಲಕ ಪ್ರಾರಂಭವಾಯಿತು.

     ಕೇರಳದ ವಯನಾಡಿನ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಸಂಸತ್ತಿನ ಆವರಣದಲ್ಲಿರುವ ಗಡ್ಕರಿ ಅವರ ಕಚೇರಿಯಲ್ಲಿ ಭೇಟಿಯಾಗಿ, ಕೇರಳದ ಆರು ರಸ್ತೆ ಯೋಜನೆಗಳ ಕುರಿತು ಚರ್ಚಿಸಿದರು. ಕೆಲವು ಯೋಜನೆಗಳು ಕೇರಳ ಸರ್ಕಾರದ ಅಧೀನದಲ್ಲಿವೆ. ಆದ್ದರಿಂದ ಕೇಂದ್ರವು ಅವುಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೆದ್ದಾರಿ ಸಚಿವರು ಹೇಳಿದರು. ಆದರೆ ಉಳಿದವುಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು. 

    ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಪ್ರಿಯಾಂಕಾ ಗಾಂಧಿಯ ಸಹೋದರ ರಾಹುಲ್ ಗಾಂಧಿ ಅವರು ತಮ್ಮ ಕ್ಷೇತ್ರ, ರಾಯ್‍ಬರೇಲಿ ಪ್ರದೇಶದಲ್ಲಿ ರಸ್ತೆ ಯೋಜನೆಗಳಿಗೆ ಸಂಬಂಧಪಟ್ಟ ವಿಚಾರಕ್ಕೆ ಭೇಟಿಯಾಗಿದ್ದರು. ಅಂದು ಅಣ್ಣ ಇದೇ ವಿಚಾರಕ್ಕೆ ಭೇಟಿಯಾದರೆ, ಇಂದು ಅವರ ಸಹೋದರಿ ಬಂದಿದ್ದಾರೆ. ಸಹೋದರನ ಕೆಲಸ ಮಾಡಿದೆ, ಸಹೋದರಿಯ ಕೆಲಸ ಮಾಡದೇ ಇದ್ದರೆ ನಾನು ಮಾಡಿಲ್ಲ ಎಂದು ಅಬ್ಬರಿಸಬಹುದು ಎಂದು ಗಡ್ಕರಿ ತಮಾಷೆಯಾಗಿ ಹೇಳಿದ್ದಕ್ಕೆ ಅಲ್ಲಿದ್ದವರೆಲ್ಲಾ ಜೋರಾಗಿ ನಕ್ಕರು.

   ಕೇರಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ವಿಶ್ವಾಸ ವ್ಯಕ್ತಪಡಿಸಿದ ವಯನಾಡ್ ಸಂಸದೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವರಿಗೆ ತಿಳಿಸಿದರು.

   ಇನ್ನು, ಇವರಿಬ್ಬರ ಮಾತುಕತೆಯ ನಡುವೆ ರುಚಿಕರವಾದ ಆಹಾರವನ್ನೂ ಸಹ ಸವಿದರು. ಯೂಟ್ಯೂಬ್ ವಿಡಿಯೊ ನೋಡಿ ಗಡ್ಕರಿ ಅವರು ಅನ್ನದ ಖಾದ್ಯ ಮಾಡಿದ್ದರು. ಕಡುಬು ರೀತಿಯ ಈ ಖಾದ್ಯವನ್ನು ಸಾಸ್ ಮತ್ತು ಚಟ್ನಿಯೊಂದಿಗೆ ಬಡಿಸಲಾಯಿತು. ಪ್ರಿಯಾಂಕಾ ಗಾಂಧಿ ಗಡ್ಕರಿಯನ್ನು ಭೇಟಿ ಮಾಡಿದಾಗ, ಅವರಿಗೆ ಖಾದ್ಯ ಸವಿಯುವಂತೆ ಒತ್ತಾಯಿಸಿದರು. ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಮತ್ತು ಅವರ ಪಕ್ಷದ ಸಹೋದ್ಯೋಗಿ ದೀಪೇಂದರ್ ಸಿಂಗ್ ಹೂಡಾ ಕೂಡ ಗಡ್ಕರಿ ಅವರೊಂದಿಗೆ ಮಾತನಾಡುತ್ತಾ ಕಡುಬು ರೀತಿಯ ಖಾದ್ಯವನ್ನು ಸವಿದರು. 

    ಜನರ ಮತದಾನದ ಹಕ್ಕನ್ನು ದುರ್ಬಲಗೊಳಿಸಲು ಚುನಾವಣಾ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ಅನುಮಾನಾಸ್ಪದವನ್ನಾಗಿ ಮಾಡಲಾಗಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರದಂದು ಆರೋಪಿಸಿದ್ದರು. ಬ್ಯಾಲೆಟ್ ಪೇಪರ್‌ಗಳ ಮೂಲಕ ನಡೆಯುವ ನ್ಯಾಯಯುತ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಿಜೆಪಿ ತನ್ನ ಶಕ್ತಿಯನ್ನು ಸಾಬೀತುಪಡಿಸಲಿ ಎಂದು ಅವರು ಸವಾಲು ಹಾಕಿದ್ದರು.

   ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಹೆಸರುಗಳನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದರು. ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಅವರು ಹೇಗೆ ಪಿತೂರಿ ನಡೆಸಿದರು ಎಂಬುದಕ್ಕೆ ಒಂದು ದಿನ ಅವರು ಉತ್ತರಿಸಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದರು.

Recent Articles

spot_img

Related Stories

Share via
Copy link