ಎಪ್ಸ್ಟೀನ್ ಜೊತೆ ಬಿಲ್ ಗೇಟ್ಸ್ ಸೇರಿ ಹಲವು ದಿಗ್ಗಜರ ನಂಟು…..?

ನ್ಯೂಯಾರ್ಕ್: 

      ಮಕ್ಕಳ ಮೇಲಿನ ಲೈಂಗಿಕ ಅಪರಾಧಿ ಎಂದು ಸಾಬೀತಾಗಿರುವ ಅಮೆರಿಕದ  ಹಣಕಾಸುದಾರ ಜೆಫ್ರಿ ಎಡ್ವರ್ಡ್ ಎಪ್ಸ್ಟೀನ್  ನ ಎಸ್ಟೇಟ್ ಗೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ , ತತ್ತ್ವಜ್ಞಾನಿ ಮತ್ತು ಕಾರ್ಯಕರ್ತ ನೋಮ್ ಚೋಮ್ಸ್ಕಿ , ಟ್ರಂಪ್ ಮಾಜಿ ಸಹಾಯಕ ಸ್ಟೀವ್ ಬ್ಯಾನನ್  ಸೇರಿದಂತೆ ಹಲವಾರು ಗಣ್ಯರು ಭೇಟಿ ನೀಡಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. 2019ರಲ್ಲಿ ಸಾವನ್ನಪ್ಪಿರುವ ಜೆಫ್ರಿ ಎಡ್ವರ್ಡ್ ಎಪ್ಸ್ಟೀನ್ ಎಸ್ಟೇಟ್ ಗೆ ಸಂಬಂಧಿಸಿದಂತೆ ಗುರುವಾರ ಕಾಂಗ್ರೆಸ್ ನ ಡೆಮೊಕ್ರಾಟ್  ಗಳು ಹಲವಾರು ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

    ಮಕ್ಕಳ ಮೇಲಿನ ಲೈಂಗಿಕ ಅಪರಾಧಿ, ಅಮೆರಿಕದ ಹಣಕಾಸುದಾರ ಜೆಫ್ರಿ ಎಡ್ವರ್ಡ್ ಎಪ್ಸ್ಟೀನ್ ಅಪರಾಧಗಳಿಗೆ ಸಂಬಂಧಿಸಿದ ಕಡತಗಳನ್ನು ಯುಎಸ್ ನ್ಯಾಯ ಇಲಾಖೆ ಬಿಡುಗಡೆ ಮಾಡುವ ಒಂದು ದಿನದ ಮೊದಲು ಕಾಂಗ್ರೆಸ್ಸಿನ ಡೆಮೋಕ್ರಾಟ್‌ಗಳು ಈ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. 

    ಮಕ್ಕಳ ಮೇಲಿಂದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅವರ ಎಸ್ಟೇಟ್‌ನಿಂದ ಬಿಡುಗಡೆ ಮಾಡಲಾಗಿರುವ ಛಾಯಾಚಿತ್ರಗಳಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್, ರಾಜಕೀಯ ತತ್ತ್ವಜ್ಞಾನಿ, ಕಾರ್ಯಕರ್ತ ನೋಮ್ ಚೋಮ್ಸ್ಕಿ ಮತ್ತು ಟ್ರಂಪ್ ಮಾಜಿ ಸಹಾಯಕ ಸ್ಟೀವ್ ಬ್ಯಾನನ್ ಕಾಣಿಸಿಕೊಂಡಿದ್ದಾರೆ.

   ಈ ಕುರಿತು ಮಾಹಿತಿ ನೀಡಿರುವ ಹೌಸ್ ಓವರ್‌ಸೈಟ್ ಸಮಿತಿಯಲ್ಲಿರುವ ಡೆಮೋಕ್ರಾಟ್‌ಗಳು, ಎಪ್ಸ್ಟೀನ್ ಅವರ ಚಟುವಟಿಕೆಗಳು ಮತ್ತು ಅವರೊಂದಿಗೆ ಸಂಪರ್ಕ ಹೊಂದಿರುವವರ ಬಗ್ಗೆ ಪಾರದರ್ಶಕತೆಯನ್ನು ನೀಡುವ ಸಲುವಾಗಿ ಈ ಛಾಯಾಚಿತ್ರಗಳನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

   ಎಪ್ಸ್ಟೀನ್ ಅವರ ಎಸ್ಟೇಟ್ ಹೌಸ್ ನಲ್ಲಿರುವ ಸುಮಾರು 95,000 ಚಿತ್ರಗಳ ದೊಡ್ಡ ಸಂಗ್ರಹದಲ್ಲಿ ಒಟ್ಟು 68 ಛಾಯಾಚಿತ್ರಗಳನ್ನು ಓವರ್‌ಸೈಟ್ ಸಮಿತಿಗೆ ಹಸ್ತಾಂತರಿಸಿದೆ. ಕಳೆದ ವಾರ ಡೆಮೋಕ್ರಾಟ್‌ಗಳು 19 ಫೋಟೋಗಳನ್ನು ಬಿಡುಗಡೆ ಮಾಡಿದರು. ಅವುಗಳಲ್ಲಿ ಕೆಲವು ಚಿತ್ರಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇದ್ದಾರೆ. ಆದರೆ ಇದು ದೊಡ್ಡ ವಿಷಯವಲ್ಲ ಎಂದು ಹೇಳಿ ಅವರು ಅದನ್ನು ನಿರ್ಲಕ್ಷಿಸಿದ್ದಾರೆ. 

    ಇದೀಗ ಹೊಸದಾಗಿ ಬಿಡುಗಡೆ ಮಾಡಿರುವ ಚಿತ್ರದಲ್ಲಿ ಹರೆಯದ ಯುವತಿಯರು ಕೂಡ ಇದ್ದಾರೆ. ಅಲ್ಲದೇ ಇವುಗಳಲ್ಲಿ ರಷ್ಯಾ, ಮೊರಾಕೊ, ಇಟಲಿ, ಜೆಕ್ ಗಣರಾಜ್ಯ, ದಕ್ಷಿಣ ಆಫ್ರಿಕಾ, ಉಕ್ರೇನ್ ಮತ್ತು ಲಿಥುವೇನಿಯಾದ ಮಹಿಳೆಯರಿಗೆ ಸೇರಿದ ಗುರುತಿನ ಚೀಟಿಗಳು ಕೂಡ ಸಿಕ್ಕಿವೆ. ಈ ನಡುವೆ ಸಂದೇಶಗಳ ಸ್ಕ್ರೀನ್ ಶಾಟ್ ಕೂಡ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಪ್ರತಿಯೊಂದಕ್ಕೂ 1,000 ಡಾಲರ್ ಬೆಲೆ ಎಂದು ಉಲ್ಲೇಖಿಸಲಾಗಿದೆ. ಇದು ಯಾರಿಗಾದರೂ ಯುವತಿಯರನ್ನು ಕಳುಹಿಸುವ ಉದ್ದೇಶದಿಂದ ಚರ್ಚಿಸಿರುವುದು ಎನ್ನಲಾಗಿದೆ.

   ಇನ್ನು ಹೆಚ್ಚಿನ ಚಿತ್ರಗಳು ಬಿಡುಗಡೆಗೆ ಬಾಕಿ ಇದ್ದು, ಸಾವಿರಾರು ಚಿತ್ರಗಳು ಪರಿಶೀಲನೆಯಲ್ಲಿವೆ. ಅವುಗಳ ವಿಶ್ಲೇಷಣೆ ನಡೆಯುತ್ತಿದೆ. ಅಧ್ಯಕ್ಷ ಟ್ರಂಪ್ ಅವರು ಎಪ್ಸ್ಟೀನ್ ಅವರ ಕಾನೂನು ಕಡತಗಳಿಗೆ ಸಂಬಂಧಿಸಿ ಪಾರದರ್ಶಕತೆ ತೋರಲು ಕರೆ ನೀಡಿದ್ದಾರೆ. ಹೀಗಾಗಿ ಆಡಳಿತವು ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ ಎಂದು ಓವರ್‌ಸೈಟ್ ಸಮಿತಿ ತಿಳಿಸಿದೆ.

Recent Articles

spot_img

Related Stories

Share via
Copy link