ಕೇರಳ :
ಮಲಯಾಳಂ ಚಿತ್ರರಂಗದ ಖ್ಯಾತ ನಟ, ಲೇಖಕ ಮತ್ತು ನಿರ್ಮಾಪಕ ಶ್ರೀನಿವಾಸನ್ (69) ಅವರು ಶನಿವಾರ ನಿಧನರಾದರು. ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಶ್ರೀನಿವಾಸನ್ ಅವರ ನಿಧನಕ್ಕೆ ಅಭಿಮಾನಿಗಳು, ಗಣ್ಯರು, ಆಪ್ತರು ಸಂತಾಪ ಸೂಚಿಸಿದ್ದಾರೆ. 69 ವರ್ಷದ ಶ್ರೀನಿವಾಸನ್ ದೀರ್ಘಕಾಲದ ಅನಾರೋಗ್ಯದಿಂದಾಗಿ ಉದಯಂಪೀರೂರಿನಲ್ಲಿರುವ ತಮ್ಮ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ (ಡಿ.20) ಸಾವನ್ನಪ್ಪಿದ್ದಾರೆ.
1956ರ ಏಪ್ರಿಲ್ 6 ರಂದು ಕೇರಳದ ಕಣ್ಣೂರು ಜಿಲ್ಲೆಯ ತಲಶ್ಶೇರಿ ಸಮೀಪದ ಪಟ್ಯಂನಲ್ಲಿ ಜನಿಸಿದ ಶ್ರೀನಿವಾಸನ್, ಮಲಯಾಳಂ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ನಟರಲ್ಲಿ ಒಬ್ಬರಾಗಿದ್ದರು. ತೀಕ್ಷ್ಣವಾದ ಸಾಮಾಜಿಕ ವಿಡಂಬನೆಯನ್ನು ಸರಳವಾದ ಕಥೆಗಳಲ್ಲಿ ಬೆರೆಸುವ ಕಲೆ ಅವರಿಗೆ ಸಿದ್ದಿಸಿತ್ತು. ಸುಮಾರು ಐದು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಅವರು 225ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಮಲಯಾಳಂ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳಿಗೆ ಚಿತ್ರಕಥೆಗಳನ್ನು ಬರೆದಿದ್ದಾರೆ.
ಶ್ರೀನಿವಾಸನ್ ಅವರು ಚೆನ್ನೈನ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ನಲ್ಲಿ ಔಪಚಾರಿಕ ತರಬೇತಿಯನ್ನು ಪಡೆದರು. ಈ ತರಬೇತಿಯು ಇವರ ಬರವಣಿಗೆ, ನಟನೆ ಮತ್ತು ನಿರ್ದೇಶನದ ವೃತ್ತಿಜೀವನಕ್ಕೆ ಗಟ್ಟಿಯಾದ ಅಡಿಪಾಯ ಹಾಕಿಕೊಟ್ಟಿತು. 1976ರಲ್ಲಿ ತೆರೆಕಂಡ ಪಿ. ಎ. ಬೇಕರ್ ಅವರ ಮಣಿಮುಳಕ್ಕಂ ಸಿನಿಮಾದ ಮೂಲಕ ನಟರಾಗಿ ಬಣ್ಣದ ಲೋಕ ಪ್ರವೇಶಿಸಿದ ಶ್ರೀನಿವಾಸನ್, 1979 ರ ‘ಸಂಘಗಾನಂ’ ಚಿತ್ರದಲ್ಲಿ ಇವರು ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡರು.
ಆನಂತರ ಹೆಚ್ಚು ಪ್ರಖ್ಯಾತಿಗೆ ಬಂದಿದ್ದು ಲೇಖಕರಾಗಿ. ಓಡರುತಮ್ಮಾವ ಆಲರಿಯಂ, ನಾಡೋಡಿಕಟ್ಟು, ಪಟ್ಟಣಪ್ರವೇಶಂ, ವರವೇಲ್ಪು, ತಲಯಾಣ ಮಂತ್ರಂ, ಸಂದೇಶಂ, ಮಿಥುನಂ, ಮಳೆಯೆತ್ತುಂ ಮುನ್ಪೆ, ಅಳಗಿಯ ರಾವಣನ್, ಒರು ಮರವತ್ತೂರ್ ಕನವು, ಜ್ಞಾನ್ ಪ್ರಕಾಶನ್ ಮುಂತಾದ ಸಿನಿಮಾಗಳಿಗೆ ಸ್ಕ್ರಿಪ್ಟ್ ಬರೆದಿದ್ದರು. ಅವರ ಬರವಣಿಗೆಯೆಲ್ಲಿ ಹಾಸ್ಯ, ರಾಜಕೀಯ ಒಳನೋಟ ಮತ್ತು ನೈತಿಕ ಸ್ಪಷ್ಟತೆ ಎದ್ದು ತೋರುತ್ತಿತ್ತು.
ನಟನೆ ಮತ್ತು ಬರವಣಿಗೆ ಜೊತೆಗೆ ‘ವಡಕ್ಕುನ್ನೋಕಿಯಂತ್ರಂ’ ಮತ್ತು ‘ಚಿಂತಾವಿಷ್ಟಯಾಯ ಶ್ಯಾಮಲ’ ಎಂಬೆರಡು ಚಿತ್ರಗಳನ್ನು ನಿರ್ದೇಶಿಸಿದ್ದರು. ʻವಡಕ್ಕುನ್ನೋಕಿಯಂತ್ರಂʼ ಚಿತ್ರಕ್ಕೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ‘ಅತ್ಯುತ್ತಮ ಚಿತ್ರ’ ಪ್ರಶಸ್ತಿ ಸಿಕ್ಕಿತ್ತು. ʻಚಿಂತಾವಿಷ್ಟಯಾಯ ಶ್ಯಾಮಲʼ ಚಿತ್ರವು ಸಾಮಾಜಿಕ ಸಮಸ್ಯೆಗಳ ಕುರಿತಾದ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಜೊತೆಗೆ ಕೇರಳ ಸರ್ಕಾರದ ನೀಡುವ ‘ಅತ್ಯುತ್ತಮ ಜನಪ್ರಿಯ ಚಿತ್ರ ರಾಜ್ಯ ಪ್ರಶಸ್ತಿ’ ಎಂಬ ಗೌರವಕ್ಕೂ ಪಾತ್ರವಾಗಿತ್ತು. 2025ರಲ್ಲಿ ತೆರೆಕಂಡ ʻನ್ಯಾನ್ಸಿ ರಾಣಿʼ ಶ್ರೀನಿವಾಸನ್ ನಟಿಸಿದ ಕೊನೇ ಸಿನಿಮಾ.
ಶ್ರೀನಿವಾಸನ್ ಅವರಿಗೆ ವಿನೀತ್ ಶ್ರೀನಿವಾಸನ್ ಮತ್ತು ಧ್ಯಾನ್ ಶ್ರೀನಿವಾಸನ್ ಎಂಬಿಬ್ಬರು ಮಕ್ಕಳಿದ್ದಾರೆ. ಅವರಲ್ಲಿ ವಿನೀತ್ ಅವರು ನಟ, ನಿರ್ದೇಶಕ, ನಿರ್ಮಾಪಕ, ಹಿನ್ನೆಲೆ ಗಾಯಕ ಹೀಗೆ ತಂದೆಯಂತೆ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಧ್ಯಾನ್ ಅವರು ನಟರಾಗಿ ಸಕ್ರಿಯವಾಗಿದ್ದಾರೆ.








