3 ಕೋಟಿ ರುಪಾಯಿ ವಿಮೆ ಹಣಕ್ಕಾಗಿ ವಿಷ ಸರ್ಪವನ್ನು ತಂದು ಅಪ್ಪನನ್ನೇ ಕೊಂದ ಪಾಪಿ ಪುತ್ರರು

ಚೆನ್ನೈ

    ಹಣ ಅಂದರೊ ಹೆಣವೂ ಬಾಯಿ ಬಿಡುತ್ತೆ ಎನ್ನುವ ಗಾದೆ ಯಾವ ಕಾಲಕ್ಕೂ ಸುಳ್ಳಾಗುವುದಿಲ್ಲ. ಹಣದಾಸೆಗೆ ಸ್ವಂತ ಹೆತ್ತವರನ್ನೇ, ಒಡಹುಟ್ಟಿದವರನ್ನೇ ಕೊಂದ ಅನೇಕ ನಿದರ್ಶನಗಳಿವೆ. ಇದೀಗ ನೆರೆಯ ತಮಿಳುನಾಡಿನಲ್ಲಿ  ಇಂಥದ್ದೇ ಕ್ರೂರ ಕೃತ್ಯ ನಡೆದಿದೆ. ವ್ಯಕ್ತಿಯೊಬ್ಬರು ಹಾವು ಕಡಿತದಿಂದ ಮೃತಪಟ್ಟಿದ್ದರು. ಇದೀಗ ಈ ಪ್ರಕರಣ ಕೊಲೆ ಎಂದು ಬಯಲಾಗಿದೆ. ವಿಮೆ ಹಣ ಪಡೆಯುವುದಕ್ಕಾಗಿ ಮೃತರ ಪುತ್ರರೇ ಈ ಕೃತ್ಯ ಎಸಗಿದ್ದಾರೆ ಎಂಬುದು ಬಹಿರಂಗವಾಗಿದೆ .

   ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೊದಲು ಆಕಸ್ಮಿಕ ಸಾವು ಎಂದು ನಂಬಲಾಗಿದ್ದ ಈ ಪ್ರಕರಣವು, ವಿಮಾ ಕಂಪನಿಯೊಂದು ಅನುಮಾನಾಸ್ಪದ ಕ್ಲೇಮ್‌ಗಳನ್ನು ಗುರುತಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ತಿರುವು ಪಡೆದುಕೊಂಡಿದೆ. ಇದರ ಆಧಾರದ ಮೇಲೆ ರಚಿಸಲಾದ ವಿಶೇಷ ತನಿಖಾ ತಂಡ  ತನಿಖೆ ನಡೆಸಿ, ಈ ಸಾವು ಪೂರ್ವ ನಿಯೋಜಿತ ಕೊಲೆ ಎಂದು ಪತ್ತೆಹಚ್ಚಿದೆ. 

   56 ವರ್ಷದ ಇ.ಪಿ. ಗಣೇಶನ್ ಎಂಬವವರು ಮೃತ ದುರ್ದೈವಿ. ಸರ್ಕಾರಿ ಶಾಲೆಯ ಪ್ರಯೋಗಾಲಯ ಸಹಾಯಕರಾಗಿದ್ದ ಇ.ಪಿ. ಗಣೇಶನ್ ಅಕ್ಟೋಬರ್‌ನಲ್ಲಿ ಪೋಥತುರ್ಪೆಟ್ಟೈ ಗ್ರಾಮದಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ವಿಷಸರ್ಪ ಕಡಿತದಿಂದ ಅವರು ಮೃತಪಟ್ಟಿರುವುದಾಗಿ ಕುಟುಂಬವು ವರದಿ ಮಾಡಿತ್ತು. ಆರಂಭದಲ್ಲಿ ಪೊಲೀಸ್ ಪ್ರಕರಣ ದಾಖಲಾಗಿದ್ದು, ಈ ಸಾವನ್ನು ಆಕಸ್ಮಿಕ ಸಾವು ಎಂದು ಪರಿಗಣಿಸಲಾಗಿತ್ತು.

   ಆದರೆ ವಿಮಾ ಕ್ಲೇಮ್‌ಗಳನ್ನು ಪ್ರಕ್ರಿಯೆಗೊಳಿಸುವಾಗ, ಕಂಪನಿಯು ಗಣೇಶನ್ ಅವರ ಸಾವಿನ ಸಂದರ್ಭಗಳ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿತು. ಗಣೇಶನ್ ಅವರ ಮೇಲೆ ಹೆಚ್ಚಿನ ಮೌಲ್ಯದ ಪಾಲಿಸಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಉಲ್ಲೇಖಿಸಿತು. ವಿಮಾ ಕಂಪನಿಯು ಉತ್ತರ ವಲಯದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಆಸ್ರಾ ಗಾರ್ಗ್ (ಐಪಿಎಸ್) ಅವರಿಗೆ ಈ ಬಗ್ಗೆ ಮಾಹಿತಿ ನೀಡಿತು. ಹೀಗಾಗಿ ಈ ಸಂಬಂಧ ಪೊಲೀಸರು ತನಿಖೆಗಿಳಿದರು.

   ಪುತ್ರರು ತಮ್ಮ ತಂದೆಗೆ ಸುಮಾರು 3 ಕೋಟಿ ರುಪಾಯಿಗೆ ವಿಮೆ ಮಾಡಿಸಿಕೊಂಡಿದ್ದರು ಎಂದು ತಿರುವಳ್ಳೂರಿನ ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ ಶುಕ್ಲಾ ಹೇಳಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಪುತ್ರರು ತಮ್ಮ ತಂದೆಯ ಸಾವನ್ನು ಹಾವು ಕಡಿತದಿಂದ ಮೃತಪಟ್ಟರು ಎಂದು ಬಿಂಬಿಸಿದರು. ಕೊಲೆ ಮಾಡಲು ಸಂಚು ರೂಪಿಸಿದ ಅವರು ಜೀವಂತ ವಿಷಕಾರಿ ಹಾವು ಖರರೀದಿಸಿದರು. ಸಾವಿಗೆ ಸುಮಾರು ಒಂದು ವಾರದ ಮೊದಲು, ನಾಗರಹಾವಿನ ಮೂಲಕ ಗಣೇಶನ್ ಅವರಿಗೆ ಕಚ್ಚಿಸಲು ಮುಂದಾದರು. ಆದರೆ ಈ ಪ್ರಯತ್ನ ವಿಫಲವಾಯಿತು.

  ನಾಗರಹಾವಿನಿಂದ ಯಾವುದೇ ಪ್ರಯೋಜನವಾಗದೇ ಇದ್ದುದರಿಂದ ಮತ್ತೊಂದು ವಿಷಕಾರಿ ಕಟ್ಟು ಹಾವುವನ್ನು ಬೆಳಗಿನ ಜಾವ ಮನೆಯೊಳಗೆ ತಂದು ತಂದೆಯ ಕುತ್ತಿಗೆಗೆ ಕಚ್ಚುವಂತೆ ಉದ್ದೇಶಪೂರ್ವಕವಾಗಿ ಮಾಡಲಾಯಿತು. ಹಾವು ಕಚ್ಚಿದ ಬಳಿಕ ಸಾಕ್ಷ್ಯವನ್ನು ನಾಶ ಮಾಡಲು ಹಾವನ್ನು ಮನೆಯೊಳಗೆಯೇ ಕೊಲ್ಲಲಾಯಿತು.

   ನಂತರ ಹಾವು ಕಚ್ಚಿರುವ ತಂದೆಯನ್ನು ಬೇಕೆಂತಲೇ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ವಿಳಂಬ ಮಾಡಲಾಯಿತು. ಆಸ್ಪತ್ರೆಗೆ ತಲುಪುವಷ್ಟರಲ್ಲಿ ವಿಷವೇರಿ ಅವರು ಮೃತಪಟ್ಟರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶನ್ ಅವರ ಇಬ್ಬರು ಪುತ್ರರು ಮತ್ತು ಹಾವನ್ನು ತಂದುಕೊಟ್ಟ ನಾಲ್ವರು ಆರೋಪಿಗಳು ಸೇರಿದಂತೆ ಒಟ್ಟು ಆರು ಜನರನ್ನು ಬಂಧಿಸಲಾಗಿದೆ.

Recent Articles

spot_img

Related Stories

Share via
Copy link