ಹಳೆಯ ವಿದ್ಯಾರ್ಥಿಗಳೇ ಮಠದ ನಿಧಿ: ಸಿದ್ಧಲಿಂಗ ಸ್ವಾಮೀಜಿ

ತುಮಕೂರು:

     ಶ್ರೀಮಠವು ಎಂದೂ ಎನನ್ನು ಬೇಡುವುದಿಲ್ಲ. ಸಂಘಕ್ಕೆ ಯಾವ ನಿಧಿಯು ಬೇಡ. ಹಳೆಯ ವಿದ್ಯಾರ್ಥಿಗಳೇ ನಮ್ಮ ಪಾಲಿನ ನಿಧಿ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

    ಸಿದ್ದಗಂಗಾಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಸಿದ್ದಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ ಕೊಡಮಾಡುವ “ಸಿದ್ದಗಂಗಾಶ್ರೀ’ ‘ ಸಂಘ ಸಿರಿ’ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಪರಮಪೂಜ್ಯರಿಗೆ ಹಳೆಯ ವಿದ್ಯಾರ್ಥಿಗಳ ಕಂಡರೆ ಅಭಿಮಾನ, ಪ್ರೀತಿ ಇತ್ತು‌. ನಿಮ್ಮಲ್ಲಿ ಪೂಜ್ಯರನ್ನು ಕಂಡಷ್ಟು ಖುಷಿ ಯಾಗುತ್ತಿದೆ ಎಂದರು.

    ಶ್ರೀಮಠದ ಬೆಳವಣಿಗೆಯ ಪ್ರತಿ ಹಂತದಲ್ಲು ಶ್ರೀಗಳ ಶ್ರಮ ಇದೆ. ಮಠದ ಮಕ್ಕಳ ಶ್ರೇಯೋಭಿವೃದ್ಧಿ ಗಾಗಿ ಅವರ ಜೀವನವನ್ನೇ ಸಮರ್ಪಿಸಿಕೊಂಡಿದ್ದರು. ಶಿವಕುಮಾರ ಶ್ರೀಗಳ ಮೇಲಿನ ಭಕ್ತಿ, ಶ್ರದ್ಧೆ, ಅಭಿಮಾನ, ಪ್ರೀತಿಯಿಂದ ಹಳೆಯ ವಿದ್ಯಾರ್ಥಿಗಳು ಈ ಸಮಾವೇಶಕ್ಕೆ ನಾಡಿನೆಲ್ಲಡೆಯಿಂದ ಆಗಮಿಸಿದ್ದಾರೆ. ಇದೊಂದು ಕೃತಜ್ಞತಾ ಸಭೆ ಅಂದರೆ ತಪ್ಪಾಗಲಾರದು ಎಂದು ತಿಳಿಸಿದರು. 

   ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂಬ ಗುರಿಹೊಂದಿದ್ದ ಶ್ರೀಗಳು , ಮಠದಲ್ಲಿ ಮಕ್ಕಳಿಗೆ ಅನ್ನ, ಆಶ್ರಯ, ಅಕ್ಷರ ದಾಸೋಹ ನೀಡಿದ್ದಲ್ಲದೆ ಗ್ರಾಮೀಣಭಾಗದಲ್ಲಿ ಗ್ರಾಮಾಂತರ ಶಾಲೆಗಳನ್ನು ತೆರೆದು ಅವರನ್ನು ಅಕ್ಷರಸ್ಥರನ್ನಾಗಿಸುವುದರ ಜತೆಗೆ ಸಂಸ್ಕಾರವನ್ನು ಕಲಿಸಿ ಉತ್ತಮ ಬದುಕು ರೂಪಿಸಿ ಕೊಳ್ಳಲು ಅವಕಾಶ ಕಲ್ಪಿಸಿದರು.ಶ್ರೀಗಳ ಆಶಯದಂತೆ ನಾವೆಲ್ಲಾ ಬದುಕೋಣ ಎಂದರು.

   ಹಳೆಯ ವಿದ್ಯಾರ್ಥಿಗಳು ವೈಯಕ್ತಿಕ ಬದುಕು, ವೃತ್ತಿ ಬದುಕಲ್ಲು ಪ್ರಾಮಾಣಿಕತೆ ತೋರಿ ಮಠದ ಕೀರ್ತಿಯನ್ನು ಬೆಳಗಿದ್ದೀರಾ. ಶ್ರೀಗಳ ಆಶೀರ್ವಾದ ಪಡೆದು ಬೆಳೆದಿರುವ ನೀವುಗಳ ಮಠಕ್ಕೆ ಬರುವುದೇ ನಮಗೆ ಪುಣ್ಯವೆಂದು ಭಾವಿಸಿದ್ದೀವಿ ಎಂದರು.

   ಸಿದ್ದಗಂಗಾ ಶಿವಕುಮಾರ ಶ್ರೀ ಪ್ರಶಸ್ತಿ ಸ್ವೀಕರಿಸಿ ಮೈಸೂರಿನ ಡಾ.ಎಸ್​.ಪಿ.ಉಮಾದೇವಿ ಹಾಗೂ ಹಿರಿಯ ತಜ್ಞವೈದ್ಯ ತುಮಕೂರಿನ ಡಾ.ಸಿ.ಶರತ್​ ಕುಮಾರ್​ ಮಾತನಾಡಿದರು.ಕೆಎಸ್​ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಜಯವಿಭವ ಸ್ವಾಮಿ, ಸಂದ ಕಾರ್ಯದರ್ಶಿ ಕೆ.ಎಚ್​.ಶಿವರುದ್ರಯ್ಯ, ಎಸ್​.ಶಿವಕುಮಾರ್​, ವಿದ್ವಾನ್​ ಎಂ.ಜಿ.ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

   ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕರಾಗಿದ್ದ ಡಾ.ಎಂ.ಎನ್​.ಚನ್ನಬಸಪ್ಪ ಅವರನ್ನು ಸಿದ್ದಗಂಗಾ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಶಿಕ್ಷಣ, ಆಡಳಿತ ಹಾಗೂ ಶ್ರೀಮಠಕ್ಕೆ ಸಲ್ಲಿಸಿದ ಜೀವಮಾನದ ಸಾಧನೆಯನ್ನು ಪರಿಗಣಿಸಿ ಚನ್ನಬಸಪ್ಪ ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ನೀಡಲಾಯಿತು. ಎಂಎನ್​ಸಿ ಪುತ್ರಿ ಹೇಮ ಅವರು ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು 1 ಲಕ್ಷ ರೂ., ನಗದು, ಅಭಿನಂದನಾ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

   ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಮೈಸೂರಿನ ಡಾ.ಎಸ್​.ಪಿ.ಉಮಾದೇವಿ ಹಾಗೂ ಹಿರಿಯ ತಜ್ಞವೈದ್ಯ ತುಮಕೂರಿನ ಡಾ.ಸಿ.ಶರತ್​ ಕುಮಾರ್​ಗೆ ಸಿದ್ದಗಂಗಾ ಶಿವಕುಮಾರ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ 25 ಸಾವಿರ ರೂ., ನಗದು, ಪ್ರಶಸ್ತಿಪತ್ರ, ಸ್ಮರಣಿಕೆ ಹೊಂದಿದೆ.

ಸಂಸಿರಿ ಪ್ರಶಸ್ತಿ: 

   ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಂದ ಹಳೆಯ ವಿದ್ಯಾರ್ಥಿಗಳಾದ ದುಗ್ಗಹಟ್ಟಿಯ ಪಿ.ವೀರಭದ್ರಪ್ಪ, ತುಮಕೂರಿನ ಎಚ್​.ಬಿ.ನಂಜುಂಡಯ್ಯ, ಎಂ.ಎಸ್​.ದಶರಥರಾಮಯ್ಯ, ಗೆದ್ದಲಗಟ್ಟೆ ಎಂ.ಸಿದ್ದಯ್ಯ, ಬೆಂಗಳೂರಿನ ಜಿ.ನಾಗಸುಂದರ್​, ದಾವಣಗೆರೆ ಸಿ.ಕೆ.ಸಿದ್ದಪ್ಪ ಅವರಿಗೆ ಸಂಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Recent Articles

spot_img

Related Stories

Share via
Copy link