ಆಲೂರು, ಸರಗೂರು ತಾಲೂಕು ಕಚೇರಿಗಳಿಗೆ ಬಾಂಬ್‌ ಬೆದರಿಕೆ

 ಮೈಸೂರು

    ಹಾಸನ ಹಾಗೂ ಮೈಸೂರು ಜಿಲ್ಲೆಯ ಹಲವು ಕಡೆಗಳಿಗೆ ಬಾಂಬ್‌ ಬೆದರಿಕೆ  ಸಂದೇಶ ಬಂದಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕು ಕಚೇರಿ ಹಾಗೂ ಮೈಸೂರು ಜಿಲ್ಲೆಯ ಸರಗೂರು ತಾಲೂಕು ಕಚೇರಿಗೆ ಬಾಂಬ್‌ ಬೆದರಿಕೆ ಒಡ್ಡಲಾಗಿದೆ. ಎರಡೂ ಕಡೆಗಳಲ್ಲಿ ಸಮಗ್ರ ಪರಿಶೀಲನೆ ಮಾಡಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

   ಆಲೂರು ತಾಲೂಕು ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿಯಿಂದ ಇಮೇಲ್ ಬೆದರಿಕೆ ಸಂದೇಶ ಬಂದಿದ್ದು, ಈ ಕುರಿತು ತಹಶೀಲ್ದಾರ್ ಮಲ್ಲಿಕಾರ್ಜುನ್‌ಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಕೂಡಲೇ ತಹಶಿಲ್ದಾರ್ ಮಲ್ಲಿಕಾರ್ಜುನ್ ಪೊಲೀಸರಿಗೆ ಈ ಕುರಿತು ಮಾಹಿತಿ ತಲುಪಿಸಿದ್ದಾರೆ. ಆಲೂರು ಪೊಲೀಸ್ ಠಾಣೆ ಪಕ್ಕದಲ್ಲಿಯೇ ತಾಲೂಕು ಕಚೇರಿ ಇದೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಡಿಸೆಂಬರ್ 15ರಂದು ಸಹ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶ ಬಂದಿತ್ತು.

   ಅದರ ಬೆನ್ನಲ್ಲೇ, ಮೈಸೂರಿನ ಸರಗೂರು ತಾಲೂಕು ಕಚೇರಿಯಲ್ಲಿ RDX ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಸಂದೇಶ ಬಂದಿದೆ. ಮಧ್ಯಾಹ್ನ 1 ಗಂಟೆಗೆ ಬಾಂಬ್ ಸ್ಪೋಟಗೊಳ್ಳುತ್ತದೆ ಎಂದು ಸಂದೇಶ ಬಂದಿದೆ. ಇ- ಮೇಲ್ ನೋಡಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸರಗೂರು ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. 

   ಇತ್ತೀಚೆಗೆ ಮಂಗಳೂರಿನ ನೆಹರು ಮೈದಾನದಲ್ಲಿರುವ ಆರ್‌ಟಿಒ ಕಚೇರಿಗೆ ಬಾಂಬ್‌ ಬೆದರಿಕೆ ಮೇಲ್ ಬಂದಿದೆ. ಇನ್ನು 5 ಬಾಂಬ್‌ಗಳಿಂದ ಗದಗ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿಯೂ ಸಂದೇಶ ಬಂದಿತ್ತು. ಅರ್ನಾ ಅಶ್ವಿನ್ ಶೇಖರ್ ಎಂಬ ಇ-ಮೇಲ್ ಐಡಿಯಿಂದ ಡಿಸಿ ಕಚೇರಿ ಇಮೇಲ್-ಗೆ ಬೆದರಿಕೆ ಬಂದಿತ್ತು. ಬಾಂಬ್ ಸ್ಕ್ಯಾಡ್, ಶ್ವಾನ ದಳ, ASC ಟೀಮ್ ದೌಡಾಯಿಸಿ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ಮಾಡಲಾಗಿತ್ತು. ಹುಸಿ ಬಾಂಬ್‌ ಬೆದರಿಕೆ ಎಂದು ತಿಳಿದುಬಂದಿತ್ತು.

Recent Articles

spot_img

Related Stories

Share via
Copy link