ಬೆಂಗಳೂರು
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್‌ನ್ಯೂಸ್ ನೀಡಿದೆ. ಮಂಗಳವಾರ ಹಳದಿ ಲೈನ್‌ನಲ್ಲಿ 6ನೇ ಹೊಸ ಮೆಟ್ರೋ ರೈಲು ಓಡಾಟ ಆರಂಭವಾಗಲಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ 6ನೇ ಮೆಟ್ರೋ ರೈಲು ಸಂಚಾರ ಆರಂಭವಾಗಲಿದ್ದು, ಇದರಿಂದ ಇನ್ನುಮುಂದೆ ಹೆಚ್ಚು ಹೊತ್ತು ರೈಲಿಗಾಗಿ ಕಾಯಬೇಕಾಗಿಲ್ಲ. ಈ ಬಗ್ಗೆ ಬಿಎಂಆರ್‌ಸಿಎಲ್ ಪ್ರಕಟಣೆ ಹೊರಡಿಸಿದೆ. ಆ ಮೂಲಕ ಯೆಲ್ಲೋ ಲೈನ್‌ನಲ್ಲಿ ಮೆಟ್ರೋ ರೈಲುಗಳು 15 ನಿಮಿಷಗಳ ಅಂತರದ ಬದಲು 13 ನಿಮಿಷಗಳ ಅಂತರದಲ್ಲಿ ಸಂಚರಲಿಸಲಿವೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಹಳದಿ ಮಾರ್ಗದಲ್ಲಿ 6ನೇ ರೈಲು ಡಿಸೆಂಬರ್ 23ರಿಂದ ಪ್ರಯಾಣಿಕರ ಸೇವೆಗಾಗಿ ಓಡಾಡಲಿದೆ ಎಂದು ಬಿಎಂಆರ್‌ಸಿಎಲ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಈ ರೈಲಿನ ಸೇರ್ಪಡೆಯೊಂದಿಗೆ ಸೋಮವಾರದಿಂದ ಶನಿವಾರದವರೆಗೆ ಜನದಟ್ಟಣೆಯ ಅವಧಿಯಲ್ಲಿ ಮೆಟ್ರೋ ಸೇವೆಗಳು ಪ್ರಸ್ತುತ 15 ನಿಮಿಷಗಳ ಅಂತರದ ಬದಲು 13 ನಿಮಿಷಗಳ ಅವಧಿಯಲ್ಲಿ ಸಂಚರಿಸಲಿವೆ. ಭಾನುವಾರ ಪೀಕ್ ಅವಧಿಯ ಸೇವಾ ಅವಧಿ 15 ನಿಮಿಷಗಳಾಗಿಯೇ ಮುಂದುವರಿಯಲಿದೆ.
ಆರ್.ವಿ. ರಸ್ತೆ ಹಾಗೂ ಬೊಮ್ಮಸಂದ್ರ ನಿಲ್ದಾಣಗಳ ಎರಡೂ ಟರ್ಮಿನಲ್‌ಗಳಿಂದ ಮೊದಲ ಹಾಗೂ ಕೊನೆಯ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಯಾಣಿಕರು ಮೇಲ್ಕಂಡ ಬದಲಾವಣೆಗಳನ್ನು ಗಮನಿಸಿ, ಮೆಟ್ರೋ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಟಿಟಾಗರ್ನಿಂದ ಹೊರಟು 6ನೇ ಡ್ರೈವರ್ ಲೆಸ್ ಮೆಟ್ರೋ ರೈಲು ಸೆಟ್ ಡಿಸೆಂಬರ್ 3ರಂದು ಸಂಜೆ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದು ತಲುಪಿತ್ತು.
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಒಟ್ಟು 96 ಹೊಸ ರೈಲುಗಳ ಸೇರ್ಪಡೆ ಮಾಡಿದೆ. ಇತ್ತ ನಮ್ಮ ಮೆಟ್ರೋದ ಹಸಿರು ಮಾರ್ಗ, ನೇರಳೆ ಮಾರ್ಗ ಹಾಗೂ ಹಳದಿ ಮಾರ್ಗಗಳಿಗೆ 64 ರೈಲುಗಳು ಸೇರ್ಪಡೆಗೊಂಡಿದೆ. ಇದೀಗ ಗ್ರೀನ್ ಲೈನ್, ಪರ್ಪಲ್ ಲೈನ್ ಸೇರಿ 58 ರೈಲುಗಳಿದ್ದರೆ, ಯೆಲ್ಲೋ ಲೈನ್‌ನಲ್ಲಿ 6 ರೈಲುಗಳಿವೆ. ಗ್ರೀನ್ ಮತ್ತು ಪರ್ಪಲ್ ಲೈನ್‌ನಲ್ಲಿ 21 ಹೊಸ ರೈಲುಗಳು, ಯೆಲ್ಲೋ ಲೈನ್- 9 ರೈಲುಗಳು ಬರಲಿವೆ.
ಹಳದಿ ಮಾರ್ಗದಲ್ಲಿ(ಆರ್.ವಿ.ರಸ್ತೆ- ಬೊಮ್ಮಸಂದ್ರ) ಹೆಚ್ಚಿನ ಪ್ರಯಾಣಿಕರ ಸಂಖ್ಯೆ ಪರಿಗಣಿಸಿ, ಬಿಎಂಆರ್‌ಸಿಎಲ್ ಹೆಚ್ಚುವರಿ 6 ರೈಲುಗಳಿಗಾಗಿ ಬಿಇಎಂಎಲ್ ಜತೆ 414 ಕೋಟಿ ರು.ಗಳ ಒಪ್ಪಂದ ಮಾಡಿಕೊಂಡಿದೆ. ಬಿಇಎಂಎಲ್ 2027ರ ವೇಳೆಗೆ ಹೆಚ್ಚುವರಿ 6 ರೈಲು (36 ಬೋಗಿ) ಪೂರೈಸುವ ಸಾಧ್ಯತೆ ಇದೆ. ಹಳದಿ ಮಾರ್ಗವನ್ನು ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ವಿಸ್ತರಿಸಿದ ನಂತರ ಹೆಚ್ಚುವರಿಯಾಗಿ 10-12 ರೈಲುಗಳು ಬೇಕಾಗುತ್ತವೆ. ಅಗತ್ಯವಿರುವ ರೈಲುಗಳನ್ನು ಕೋಲ್ಕೊತ್ತಾದ ಟಿಟಾಗರ್ ಸಂಸ್ಥೆ ಪೂರೈಕೆ ಮಾಡುತ್ತಿದೆ.








