ಬೆಂಗಳೂರು
ಬಹುಕಾಲದಿಂದ ತಾಂಡಾ, ಹಟ್ಟಿ ಗೊಲ್ಲರಹಟ್ಟಿಗಳಲ್ಲಿ ವಾಸ ಮಾಡುತ್ತಿದ್ದ ನಿವಾಸಿಗಳಿಗೆ ದಾಖಲೆ ಇಲ್ಲದೆ ನೆಮ್ಮದಿಯ ಜೀವನ ಅಸಾಧ್ಯವಾಗಿತ್ತು. ಅಂತಹವರಿಗೆ ಹಕ್ಕುಪತ್ರ ಮತ್ತು ದಾಖಲೆ ನೀಡಲು 2017ರಲ್ಲಿ ಸರ್ಕಾರವು ಕಾನೂನು ತಿದ್ದುಪಡಿ ಮಾಡಿದೆ. ಇದರ ಮುಖಾಂತರ ಬಹುಕಾಲದಿಂದ ಅತಂತ್ರವಾಗಿದ್ದ ಕುಟುಂಬಗಳಿಗೆ ನೆಮ್ಮದಿ ನೀಡಲು ಅವರ ವಾಸಕ್ಕೆ ದಾಖಲೆಗಳ ಗ್ಯಾರಂಟಿ ನೀಡುವ ಕೆಲಸ ಪ್ರಗತಿಯಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕಾನೂನು 2017ರಲ್ಲಿ ತಿದ್ದುಪಡಿ ಆದ ನಂತರ 2023 ಮೇ ವರೆಗೆ 6 ವರ್ಷಗಳಲ್ಲಿ 1.08 ಲಕ್ಷ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಲಾಗಿತ್ತು. ಮೇ 2023 ರಿಂದ 2025ರ ವರೆಗೆ 1.11 ಲಕ್ಷ ಹಕ್ಕುಪತ್ರಗಳನ್ನು ಈಗಾಗಲೇ ನೀಡಲಾಗಿದೆ. ಮೇ 2025ರ ನಂತರ 1.10 ಲಕ್ಷ ಹಕ್ಕುಪತ್ರಗಳನ್ನು ನೀಡುವ ಪ್ರಕ್ರಿಯೆ ಕೂಡಲೇ ಪೂರ್ಣಗೊಳಿಸುವಂತೆ ಇಂದಿನ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೂ ಸೂಚಿಸಲಾಗಿದೆ. ಫೆಬ್ರವರಿ ತಿಂಗಳಲ್ಲಿ 1.10 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದ್ದಾರೆ.
ಕಾಲಾನುಕಾಲದಿಂದ ಬಹುತೇಕ ಬಡ ಕುಟುಂಬಗಳು ವಾಸಿಸುತ್ತಿದ್ದರೂ ದಾಖಲೆ ರಹಿತವಾಗಿರುವುದರಿಂದ ಅವರ ಬದುಕೇ ಅತಂತ್ರವಾಗಿದೆ. ದಶಕಗಳ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಕಂದಾಯ ಗ್ರಾಮ ರಚನೆ ಅಭಿಯಾನದ ಮುಖಾಂತರ ನಡೆಯುತ್ತಿದೆ. ದಾಖಲೆ ರಹಿತ ವಸತಿ ಪ್ರದೇಶ ಮತ್ತು ಮನೆಗಳನ್ನು ಗುರುತಿಸಿ ಸರ್ವೇ ಮಾಡಿ, ದಾಖಲೆಗಳನ್ನು ತಯಾರಿಸಿ, ಅಧಿಸೂಚನೆ ಹೊರಡಿಸಿ, ಹಕ್ಕುಪತ್ರ ನೀಡಿ, ಕ್ರಯಪತ್ರದಂತೆ ನೋಂದಣಿ ಮಾಡಿ ಸ್ಥಳೀಯ ಸಂಸ್ಥೆಯಲ್ಲಿ ಪಕ್ಕಾ ಖಾತೆ ಮಾಡುವುದರ ಮುಖಾಂತರ ಸಂಪೂರ್ಣ ಮಾಲಿಕತ್ವದ ಗ್ಯಾರಂಟಿ ನೀಡುವ ಈ ಕಾರ್ಯ ರಾಜ್ಯಾದ್ಯಂತ ಅಭಿಯಾನದ ಮಾದರಿಯಲ್ಲಿ ನಡೆಯುತ್ತಿದೆ.
ಬಹುತೇಕ ಬಡ ಕುಟುಂಬಗಳೇ ಇದರ ಫಲಾನುಭವಿಗಳಾಗಿದ್ದಾರೆ. ಯಾರಿಂದಲೂ ಅರ್ಜಿಗೆ ಕಾಯದೆ, ಕಂದಾಯ ಇಲಾಖೆಯ ಅಧಿಕಾರಿಗಳೇ ಸ್ವತಃ ಜನರ ಮನೆ ಬಾಗಿಲಿಗೆ ಹೋಗಿ ಇಷ್ಟೂ ಕೆಲಸವನ್ನು ಮಾಡಿಕೊಡುತ್ತಿದ್ದಾರೆ. ಇದರಲ್ಲಿ ಆಗಿರುವ ಪ್ರಗತಿಯನ್ನುಒಳಗೊಂಡರೆ ಒಟ್ಟು 4 ಲಕ್ಷ ಕುಟುಂಬಗಳಿಗೆ ಶಾಶ್ವತ ನೆಮ್ಮದಿ ನೀಡಿದಂತಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.








