ಬೆಂಗಳೂರು
ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದೇ ರೀತಿ ಹೊಸ ವರ್ಷಾಚರಣೆಗೆ ಸಂಬಂಧಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಇದೀಗ ಮಹತ್ವದ ನಿರ್ಧಾರ ಕೈಗೊಂಡಿದ್ದು, ಉದ್ಯಾನವನಗಳು ಮತ್ತು ಕೆರೆಗಳ ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲು ತೀರ್ಮಾನಿಸಿದೆ.
ಈ ಬಗ್ಗೆ ಜಿಬಿಎ ಆಯುಕ್ತರಿಂದ ಸುತ್ತೋಲೆ ಹೊರಡಿಸಲಾಗಿದೆ. 2026ನೇ ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಈ ವರ್ಷದ ಕೊನೆಯ ದಿನವಾದ ಡಿ.31ರ ರಾತ್ರಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಒಟ್ಟಾಗಿ ಸೇರುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಯಾವುದೇ ಅಹಿತಕರ ಘಟನೆಗಳು ಹಾಗೂ ಸಾರ್ವಜನಿಕ ಶಾಂತಿ ಭಂಗವಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಡಿ.31ರಂದು ಸಂಜೆ 6 ಗಂಟೆಯ ನಂತರ ಪಾಲಿಕೆಗೆ ಸೇರಿದ ಎಲ್ಲಾ ಉದ್ಯಾನವನಗಳು ಮತ್ತು ಕೆರೆಗಳಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಸೂಚನಾ ಫಲಕಗಳನ್ನು ಅಳವಡಿಸಿ, ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಹೊಸ ವರ್ಷ ಸಮೀಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಬಂದೋಬಸ್ತ್ ಕೈಗೊಳ್ಳಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಹಿರಿಯ ಅಧಿಕಾರಿಗಳ ಜತೆ ಭಾನುವಾರ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಡಿಜಿಪಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳು ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಕುರಿತು ಸಚಿವರು ಮಾತನಾಡಿ, ಹೊಸವರ್ಷದ ಮುಂಜಾಗ್ರತೆ ವಿಚಾರವಾಗಿ ಸಿದ್ಧತೆಗಳು ನಡೆಯುತ್ತಿವೆ. ಭಾನುವಾರ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೆ ಸಭೆ ನಡೆಸಲಿದ್ದೇನೆ. ಈಗಾಗಲೇ ಎಲ್ಲಾ ಪ್ರದೇಶಗಳಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ. ಸಿದ್ಧತೆ ಕುರಿತಂತೆ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಲಿದ್ದಾರೆ. ಎಲ್ಲಾ ರೀತಿಯಲ್ಲಿ ನಾವು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.








