ನವದೆಹಲಿ
ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಬಗ್ಗೆ ರಾಹುಲ್ ಗಾಂಧಿ ಟೀಕಿಸಿದ್ರು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಸಹ ಅದೇ ಧಾಟಿ ತೋರುತ್ತಿದ್ದಾರೆ. ಈರ್ವರಲ್ಲೂ ವಾಸ್ತವ ಒಪ್ಪಿಕೊಳ್ಳುವ ನೈಜತೆಯೇ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ. ದೇಶದಲ್ಲಿ ಫಾಕ್ಸ್‌ಕಾನ್‌ನಂತಹ ಜಾಗತಿಕ ಪ್ರಮುಖ ಕಂಪನಿಗಳ ವಿಸ್ತರಣೆಗೆ ಕೇಂದ್ರ ಪ್ರೋತ್ಸಾಹಿಸುತ್ತಿದೆ. ಕರ್ನಾಟಕದಲ್ಲಿ ಸಹ ಈ ಕಾರ್ಖಾನೆ ಸ್ಥಾಪಿಸಲು ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಭೂಮಿ ಹಂಚಿಕೆ ಮಾಡಲಾಗಿತ್ತು ಎಂಬುದನ್ನು ಕಾಂಗ್ರೆಸ್ ಮರೆತುಬಿಟ್ಟಿದೆ ಎಂದು ಸಿಎಂಗೆ, ಜೋಶಿ ತಿರುಗೇಟು ಕೊಟ್ಟಿದ್ದಾರೆ.
ಕಾಂಗ್ರೆಸ್ ನಟಿಸುವುದನ್ನು ನಿಲ್ಲಿಸಿ, ವಾಸ್ತವವನ್ನು ಒಪ್ಪಿಕೊಳ್ಳಬೇಕು. ಭಾರತದ ಉತ್ಪಾದನಾ ಬೆಳವಣಿಗೆ ಪ್ರಧಾನಿ ಮೋದಿಯವರ ಕಲ್ಪನೆಯಂತೆ ʼಮೇಕ್ ಇನ್ ಇಂಡಿಯಾ’ದ ಫಲಿತಾಂಶವೇ ಆಗಿದೆ ಎಂದು ಪ್ರಲ್ಹಾದ್ ಜೋಶಿ ಪ್ರತಿಪಾದಿಸಿದ್ದಾರೆ. ಪ್ರಧಾನಿ ಮೋದಿ ಅವರು ಪರಿಚಯಿಸಿದ ಪಿಎಲ್‌ಐ ಯೋಜನೆಯ ನೇರ ಫಲಾನುಭವಿ ಆಗಿದೆ ಫಾಕ್ಸ್‌ಕಾನ್ ಕಂಪನಿ. ಈ PLI ಯೋಜನೆಯಡಿಯೇ ₹14,065 ಕೋಟಿ ಹೂಡಿಕೆಗಳನ್ನು ಆಕರ್ಷಿಸಲಾಗಿದೆ ಮತ್ತು ಅಕ್ಟೋಬರ್ 2025ರ ವೇಳೆಗೆ ಸುಮಾರು 1.32 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಸಚಿವ ಜೋಶಿ ಸಿಎಂಗೆ ತಿರುಗೇಟು ನೀಡಿದ್ದಾರೆ.
ಭಾರತ ಇದೀಗ ದೇಶೀಯವಾಗಿ ಚಿಪ್‌ಗಳು, ಎಲೆಕ್ಟ್ರಾನಿಕ್ ಘಟಕಗಳು ಮತ್ತು ಉಪ-ಮಾಡ್ಯೂಲ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಮೊಬೈಲ್ ಫೋನ್ ಉತ್ಪಾದನೆ 2014–15ರಲ್ಲಿ ₹0.18 ಲಕ್ಷ ಕೋಟಿ ಮೌಲ್ಯದಲ್ಲಿ ಇದ್ದದ್ದು ಇಂದು ₹5.5 ಲಕ್ಷ ಕೋಟಿಗೆ ಏರಿದೆ. ಇದು 28 ಪಟ್ಟು ಹೆಚ್ಚಾಗಿದೆ. ಇದು ಮೇಕ್ ಇನ್ ಇಂಡಿಯಾದ ಫಲವಲ್ಲವೇ? ಎಂದಿದ್ದಾರೆ.
ರಫ್ತು ₹0.01 ಲಕ್ಷ ಕೋಟಿಯಿಂದ ₹2 ಲಕ್ಷ ಕೋಟಿಗೆ ಬೆಳೆದಿದೆ. ಇದು 127 ಪಟ್ಟು ಹೆಚ್ಚಾಗಿದೆ. ವಿಪರ್ಯಾಸವೆಂದರೆ, ಈ ಹಿಂದೆ ರಾಹುಲ್ ಗಾಂಧಿ, ಭಾರತದಲ್ಲಿ ಫೋನ್‌ಗಳನ್ನು “ತಯಾರಿಸಲಾಗುವುದಿಲ್ಲ, ಜೋಡಿಸಲಾಗುತ್ತದೆ” ಎಂದಿದ್ದರು. ಆದರೆ ಎನ್‌ಡಿಎ ಸರ್ಕಾರದ ಪ್ರೋತ್ಸಾಹದಲ್ಲಿ ಸ್ಮಾರ್ಟ್ ಫೋನ್ ಉತ್ಪಾದನಾ ಘಟಕಗಳು ಇದಕ್ಕೆ ತಕ್ಕುತ್ತರ ಕೊಟ್ಟಿವೆ ಎಂದಿದ್ದಾರೆ.
ಬಿಜೆಪಿ ನೇತೃತ್ವದ ಸುಧಾರಣೆಗಳ ಫಲಿತಾಂಶಗಳನ್ನು ಪ್ರಶ್ನಿಸುವುದು ಕಾಂಗ್ರೆಸ್‌ನ ಹತಾಶೆಯನ್ನು ತೋರಿಸುತ್ತದೆ. ಆದರೆ, ವಾಸ್ತವದಲ್ಲಿ ಭಾರತದ ಉತ್ಪಾದಕ, ಆರ್ಥಿಕತೆ ನಿರ್ಣಾಯಕ ನಾಯಕತ್ವದ ಪ್ರತಿಫಲವೇ ಹೊರತು ಎರವಲು ಪಡೆದ ನಿರೂಪಣೆಗಳಲ್ಲ ಎಂದು ಸಚಿವ ಪ್ರಲ್ಹಾದ್ ಜೋಶಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ನಕಲಿ ಸುದ್ದಿ ಮಸೂದೆಯಡಿ “ಹೆಸರು ಮತ್ತು ಅವಮಾನ” ದ ಸ್ವಯಂ ಘೋಷಿತ ಪ್ರತಿಪಾದಕ ಪ್ರಿಯಾಂಕ್ ಖರ್ಗೆ ಈಗ ಸ್ವತಃ ನಕಲಿ ಸುದ್ದಿಗಳನ್ನು ಸೃಷ್ಟಿಸಿ ಸಿಕ್ಕಿಬಿದ್ದಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ಜನರನ್ನು ದಾರಿ ತಪ್ಪಿಸಲು, ಅವ್ಯವಸ್ಥೆ ಸೃಷ್ಟಿಸಲು ಮತ್ತು ವಿಕೃತ ನಿರೂಪಣೆಯನ್ನು ಮುಂದಿಡಲು ಕರ್ನಾಟಕ ಐಟಿ ಸಚಿವರು AI- ರಚಿತ ಚಿತ್ರವನ್ನು ಹಂಚಿಕೊಳ್ಳುತ್ತಿರುವುದು ಸ್ಪಷ್ಟ ದುರುದ್ದೇಶವನ್ನು ಬಹಿರಂಗಪಡಿಸುತ್ತದೆ ಎಂದು ಅವರು ದೂರಿದ್ದಾರೆ.
ಜನರನ್ನು ದಾರಿ ತಪ್ಪಿಸಿ, ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸಿ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಲು ಕರ್ನಾಟಕದ ಐಟಿ ಸಚಿವರು AI ರಚಿತ ಫೋಟೊವನ್ನು ಹಂಚಿಕೊಂಡಿರುವುದು, ಸಮಾಜದಲ್ಲಿ ಸೌಹಾರ್ದತೆಗೆ ಭಂಗ ತರುವ ದುರುದ್ದೇಶ ಬಹಿರಂಗವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.








