ನಿಟ್ಟೆ ಶಿಕ್ಷಣ ಸಂಸ್ಥೆಗಳ ಸ್ಥಾಪಕ, ನ್ಯಾ. ಸಂತೋಷ್ ಹೆಗ್ಡೆ ಸೋದರ ವಿನಯ್ ಹೆಗ್ಡೆ ನಿಧನ

ಮಂಗಳೂರು

    ಕರಾವಳಿಯ ನಿಟ್ಟೆ ಶಿಕ್ಷಣ ಸಂಸ್ಥೆಗಳ ಸ್ಥಾಪಕ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ, ನ್ಯಾ. ಸಂತೋಷ್ ಹೆಗ್ಡೆ ಅವರ ಸೋದರ ಡಾ. ಎನ್.ವಿನಯ ಹೆಗ್ಡೆ(86)  ಗುರುವಾರ ಬೆಳಗಿನ ಜಾವ ನಿಧನರಾದರು. ರಾಜ್ಯದ ಪ್ರಮುಖ ಶಿಕ್ಷಣ ತಜ್ಞರು, ಉದ್ಯಮಿ ಮತ್ತು ಸಮಾಜ ಸೇವಕರಾಗಿ ಅವರು ಗುರುತಿಸಿಕೊಂಡಿದ್ದರು. ವಿನಯ ಹೆಗ್ಡೆ ಅವರು ಲೋಕಸಭಾ ಸ್ಪೀಕರ್ ಆಗಿದ್ದ ದಿವಂಗತ ಜಸ್ಟಿಸ್ ಕೆ.ಎಸ್. ಹೆಗ್ಡೆ ಅವರ ಪುತ್ರ.

    ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ತಮ್ಮ ಶಿಕ್ಷಣ ಪೂರೈಸಿದವರು. ತಮ್ಮ ತಂದೆಯವರ ಆಶಯದಂತೆ 1979ರಲ್ಲಿ ‘ನಿಟ್ಟೆ ಎಜುಕೇಶನ್ ಟ್ರಸ್ಟ್’ ಸ್ಥಾಪಿಸಿದರು. ಇಂದು ನಿಟ್ಟೆ ಶಿಕ್ಷಣ ಸಂಸ್ಥೆಗಳು ಮಂಗಳೂರು, ಬೆಂಗಳೂರು ಮತ್ತು ನಿಟ್ಟೆಯಲ್ಲಿ 40ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ಹೊಂದಿವೆ. ಇದರಲ್ಲಿ ವೈದ್ಯಕೀಯ, ಎಂಜಿನಿಯರಿಂಗ್, ದಂತವೈದ್ಯಕೀಯ, ಫಾರ್ಮಸಿ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜುಗಳು ಸೇರಿವೆ.

    ಪ್ರಸ್ತುತ ಅವರು ಮಂಗಳೂರಿನ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. ಲೆಮಿನಾ ಸಸ್ಪೆನ್ಷನ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಲೆಮಿನಾ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಇದು ಆಟೋಮೊಬೈಲ್ ಬಿಡಿಭಾಗಗಳ ತಯಾರಿಕೆಯಲ್ಲಿ ಪ್ರಮುಖ ಸಂಸ್ಥೆಯಾಗಿದೆ.

   ರಾಜ್ಯದ ಹಲವು ಸಮಿತಿಗಳಲ್ಲಿ ಮತ್ತು ಕೈಗಾರಿಕಾ ಒಕ್ಕೂಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಲವು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಶಿಕ್ಷಣ ಮತ್ತು ಸಮಾಜ ಸೇವೆಗಾಗಿ ಅವರಿಗೆ ಕರ್ನಾಟಕ ಸರ್ಕಾರದಿಂದ ‘ರಾಜ್ಯೋತ್ಸವ ಪ್ರಶಸ್ತಿ’ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಲಭಿಸಿದೆ. ಕರಾವಳಿ ಕರ್ನಾಟಕದ ಶೈಕ್ಷಣಿಕ ಮತ್ತು ಕೈಗಾರಿಕಾ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದೂರದೃಷ್ಟಿಯ ನಾಯಕರಾಗಿದ್ದರು.

Recent Articles

spot_img

Related Stories

Share via
Copy link