ಬೆಂಗಳೂರು
ನಗರದಲ್ಲಿ ನ್ಯೂ ಇಯರ್ ಪಾರ್ಟಿಯ ಮತ್ತಿನಲ್ಲಿ ನಡೆದ ಕ್ಷುಲಕ ಗಲಾಟೆ, ತಾರಕಕ್ಕೇರಿದ್ದು, ನಡುರಸ್ತೆಯಲ್ಲೇ ಕ್ಯಾಬ್ ಚಾಲಕನ ಮೇಲೆ 10ಕ್ಕೂ ಹೆಚ್ಚು ಪುಂಡರು ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಬೆಂಗಳೂರು ನಗರದ ಹೃದಯ ಭಾಗ ಕಾರ್ಪೋರೇಷನ್ ಸರ್ಕಲ್ ಬಳಿ ಜರುಗಿದೆ. ಘಟನೆ ಬುಧವಾರ ತಡರಾತ್ರಿ ಸುಮಾರು 3.15ರ ವೇಳೆಗೆ ನಡೆದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಸ್ಥಿತಿ ಶಮನಗೊಳಿಸಿದ್ದಾರೆ.
ಹೊಸ ವರ್ಷ ಆಚರಣೆ ವೇಳೆ ಕುಡಿದ ಮತ್ತಿನಲ್ಲಿ ಓಡಾಡುತ್ತಿದ್ದ ಯುವಕರ ಗುಂಪೊಂದು, ಕಾರ್ಪೋರೇಷನ್ ಸರ್ಕಲ್ ಬಳಿ ನಿಂತಿದ್ದ ಕಾರಿಗೆ ಹಿಂದಿನಿಂದ ಬಂದು ಟಚ್ ಮಾಡಿದೆ. ಈ ವೇಳೆ ಕಾರಿನ ಚಾಲಕ ಕೆಳಗೆ ಇಳಿದು, ಏಕೆ ಕಾರಿಗೆ ಡಿಕ್ಕಿ ಹೊಡೆದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಪ್ರಶ್ನೆಗೆ ಉತ್ತರ ನೀಡುವ ಬದಲು ಯುವಕರ ಗುಂಪು ಚಾಲಕನ ಮೇಲೆ ಹಿಂದಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದೆ. ಮಾತಿಗೆ ಮಾತು ಬೆಳೆದು ಗಲಾಟೆ ತಾರಕಕ್ಕೆ ಏರಿದೆ. ಕುಡಿದ ಮತ್ತಿನಲ್ಲಿ ಇದ್ದ ಯುವಕರು ಚಾಲಕನನ್ನು ಸುತ್ತುವರೆದು ನಡುರಸ್ತೆಯಲ್ಲೇ ತಳ್ಳಾಟ, ಹೊಡೆದಾಟಕ್ಕೆ ಇಳಿದಿದ್ದಾರೆ.
ಚಾಲಕನ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡು ಸ್ಥಳದಲ್ಲಿದ್ದ ಇತರ ಕ್ಯಾಬ್ ಮತ್ತು ಕಾರು ಚಾಲಕರು ಜಗಳ ಬಿಡಿಸಲು ಮುಂದಾಗಿದ್ದಾರೆ. ಆದರೆ ಇದರಿಂದ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಂಡಿದ್ದು, ಹಲ್ಲೆಗಿಳಿದ ಯುವಕರು ಬೇರೆ ಚಾಲಕರ ಮೇಲೆಯೂ ದಾಳಿ ಮಾಡಲು ಯತ್ನಿಸಿದ್ದಾರೆ. ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿದ ಯುವಕರ ಅಟ್ಟಹಾಸದಿಂದ ಕೆಲಕಾಲ ಕಾರ್ಪೋರೇಷನ್ ಸರ್ಕಲ್ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಡುರಸ್ತೆಯಲ್ಲಿ ಕಾರು ಚಾಲಕನನ್ನು ನೆಲಕ್ಕೆ ಕೆಡವಿ, ಕಾಲಿನಿಂದಲೂ ಹೊಡೆಯಲು ಯತ್ನಿಸಿರುವ ದೃಶ್ಯಗಳು ಸ್ಥಳೀಯರಲ್ಲಿ ಭೀತಿ ಮೂಡಿಸಿವೆ.
ಘಟನೆಯ ವೇಳೆ ಸ್ಥಳದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು, ವಾಹನ ಸವಾರರು ಭಯಭೀತರಾಗಿದ್ದಾರೆ. ಮಾಹಿತಿ ತಿಳಿದ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಹಲ್ಲೆಗೊಳಗಾದ ಕ್ಯಾಬ್ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.








