ಅಪ್ರಾಪ್ತೆಯನ್ನು ಜನರ ಮುಂದೆಯೇ ಒತ್ತೆಯಾಳಾಗಿರಿಸಿಕೊಂಡ ಯುವಕ

ಲಖನೌ: 

    ಮುಸುಕುಧಾರಿ ಯುವಕನೊಬ್ಬ ಉಡುಪು ಮಳಿಗೆಯೊಳಗೆ ನುಗ್ಗಿ ಅಪ್ರಾಪ್ತ ಬಾಲಕಿಯನ್ನು ಹಿಡಿದುಕೊಂಡು ಚಾಕು ತೋರಿಸಿ ಬೆದರಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ  ಬಿಜ್ನೋರ್‌ನ ನಜೀಬಾಬಾದ್ ಮಾರುಕಟ್ಟೆಯಲ್ಲಿ ನಡೆದಿದೆ. ಹೊಸ ವರ್ಷದ ಮುನ್ನಾದಿನ ಡಿಸೆಂಬರ್ 21ರ ಬುಧವಾರ ಸಂಜೆ ಅಪ್ರಾಪ್ತೆಯನ್ನು ಆರೋಪಿಯು ಒತ್ತೆಯಾಳಾಗಿರಿಸಿಕೊಂಡಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯು ಸಾರ್ವಜನಿಕರು ಮತ್ತು ಅಂಗಡಿಯವರಲ್ಲಿ ಭೀತಿಯನ್ನು ಉಂಟುಮಾಡಿತು.

    ಇಬ್ಬರು ಅಪ್ರಾಪ್ತ ಬಾಲಕಿಯರು ಅಂಗಡಿಯಿಂದ ಬಟ್ಟೆ ಖರೀದಿಸಲು ಮಾರುಕಟ್ಟೆಗೆ ಬಂದಿದ್ದರು. ಸಂಜೆ 7 ಗಂಟೆ ಸುಮಾರಿಗೆ ಆರೋಪಿ ಇದ್ದಕ್ಕಿದ್ದಂತೆ ಅಂಗಡಿಗೆ ಪ್ರವೇಶಿಸಿದನು. ಬಾಲಕಿಯರಲ್ಲಿ ಒಬ್ಬಳ ಕುತ್ತಿಗೆಗೆ ಚಾಕು ಇಟ್ಟು, ಆಕೆಯನ್ನು ಹಲವಾರು ನಿಮಿಷಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿದ್ದನು ಮತ್ತು ಹಣಕ್ಕಾಗಿ ಬೇಡಿಕೆ ಇಡುತ್ತಾ ಕೊಲೆ ಬೆದರಿಕೆ ಹಾಕಿದ್ದಾನೆ. 

    ಈ ಘಟನೆಯಿಂದ ಅಂಗಡಿಯೊಳಗೆ ಗೊಂದಲ ಉಂಟಾಗಿದ್ದು, ಅಂಗಡಿ ಮಾಲೀಕರು ಎಚ್ಚರಿಕೆ ನೀಡಿದರು. ಗದ್ದಲ ಕೇಳಿ ಅಂಗಡಿಯ ಹೊರಗೆ ಜನಸಮೂಹ ಜಮಾಯಿಸಿ ಯುವಕನನ್ನು ಹತ್ತಿಕ್ಕಲು ಪ್ರಯತ್ನಿಸಿತು. ಆದರೆ, ಆರೋಪಿ ತನ್ನ ಹಿಡಿತವನ್ನು ಬಿಗಿಗೊಳಿಸಿ ಅಪ್ರಾಪ್ತೆಯ ಕತ್ತು ಸೀಳುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದಾಗಿ ಜನರು ಹಿಂದೆ ಸರಿಯಬೇಕಾಯಿತು.

    ಹೊಸ ವರ್ಷದ ಭದ್ರತಾ ವ್ಯವಸ್ಥೆಯಿಂದಾಗಿ ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಧಾವಿಸಿದರು. ಆರಂಭದಲ್ಲಿ ಪೊಲೀಸರು, ಆರೋಪಿ ಬಳಿ ಬಾಲಕಿಯನ್ನು ಬಿಡುಗಡೆ ಮಾಡುವಂತೆ ಮನವೊಲಿಸಲು ಪ್ರಯತ್ನಿಸಿದರು. ಅವನು ನಿರಾಕರಿಸಿದಾಗ, ಪೊಲೀಸರು ಆತನ ಮೇಲೆ ದಾಳಿ ನಡೆಸಿ ಚಾಕುವನ್ನು ಕಸಿದುಕೊಂಡರು. ಈ ಮೂಲಕ ಅಪ್ರಾಪ್ತ ಬಾಲಕಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾದರು.

    ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಘಟನೆಯಲ್ಲಿ ಬಳಸಿದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ನಜಿಬಾಬಾದ್‍ನ ಪೊಲೀಸ್ ಅಧಿಕಾರಿ ನಿತೇಶ್ ಪ್ರತಾಪ್ ಸಿಂಗ್ ಮಾತನಾಡಿ, ಆರೋಪಿಯನ್ನು ಬಾರಾಬಂಕಿ ಜಿಲ್ಲೆಯ ನಿವಾಸಿ ಅಜಿತ್ ಎಂದು ಗುರುತಿಸಲಾಗಿದೆ. ಆತ ಜೈಲಿಗೆ ಹೋಗಲು ಬಯಸಿದ್ದರಿಂದ ಈ ಕೃತ್ಯ ಎಸಗಿದ್ದಾಗಿ ಎಂದು ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ ತಿಳಿದುಬಂದಿದೆ ಎಂದು ಅಧಿಕಾರಿ ಹೇಳಿದರು. 

   ಆರೋಪಿಯು, ಅಪ್ರಾಪ್ತೆ ಬಾಲಕಿಯ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ, ಕೃತ್ಯದ ಉದ್ದೇಶ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಹಿನ್ನೆಲೆ, ಮಾನಸಿಕ ಸ್ಥಿತಿ ಮತ್ತು ನಜೀಬಾಬಾದ್‌ನಲ್ಲಿ ಅವನು ಇರುವುದಕ್ಕೆ ಕಾರಣವನ್ನು ಕಂಡುಹಿಡಿಯಲು ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

    ತಮಗಿಂತ ಸಣ್ಣ ವಯಸ್ಸಿನ ಮಕ್ಕಳ ಮೇಲೆ ಅಪ್ರಾಪ್ತ ಬಾಲಕರ ಗುಂಪೊಂದು ಮನಬಂದಂತೆ ಹಲ್ಲೆ ನಡೆಸಿದ್ದ ಆಘಾತಕಾರಿ ಘಟನೆ ತಮಿಳುನಾಡಿನ ವಿರುತ್ತನಗರ ಜಿಲ್ಲೆಯಲ್ಲಿ ನಡೆದಿತ್ತು. ಅಪ್ರಾಪ್ತ ಹುಡುಗರು ಗಾಂಜಾ ಸೇದುತ್ತಿದ್ದ ವಿಷಯವನ್ನು ಈ ಮಕ್ಕಳು ಗ್ರಾಮಸ್ಥರಿಗೆ ಹೇಳಿದ್ದರು. ಇದೇ ಸಿಟ್ಟಿನಿಂದ ಮಕ್ಕಳನ್ನು ಗುರಿಯಾಗಿಸಿಕೊಂಡು ಈ ಕ್ರೂರ ಕೃತ್ಯ ಎಸಗಿದ್ದರು ಎಂದು ಹೇಳಲಾಗಿದೆ.

Recent Articles

spot_img

Related Stories

Share via
Copy link