ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ 2 ವರ್ಷ….!

ಅಯೋಧ್ಯೆ

     ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯಾಗಿ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಡಿಸೆಂಬರ್‌ 31ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್  ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ವಿಶೇಷ ಪೂಜೆ ಸಲ್ಲಿಸಿದರು. 2024ರ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ  ನೇತೃತ್ವದಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗಿತ್ತು. ಆ ಐತಿಹಾಸಿಕ ಕ್ಷಣಕ್ಕೆ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಈ ವರ್ಷದ ವಾರ್ಷಿಕೋತ್ಸವವನ್ನು 2025ರ ಡಿಸೆಂಬರ್ 31ರಂದು ಆಚರಿಸಲಾಗುತ್ತಿದ್ದು, ರಾಮ ಮಂದಿರ ಟ್ರಸ್ಟ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

   ಅಯೋಧ್ಯೆ ಶ್ರೀರಾಮಂದಿರ ಪ್ರಾಣ ಪ್ರತಿಷ್ಠಾನೆಯ 2ನೇ ವಾರ್ಷಿಕೋತ್ಸವದ ಕುರಿತು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, “ಇದು ನಂಬಿಕೆ ಮತ್ತು ಪರಂಪರೆಯ ಹಬ್ಬ” ಎಂದು ವರ್ಣಿಸಿದ್ದಾರೆ. “ಪ್ರಭು ಶ್ರೀರಾಮನ ಚರಣಕ್ಕೆ ಹಾಗೂ ದೇಶ-ವಿದೇಶಗಳಲ್ಲಿರುವು ಸಕಲ ರಾಮ ಭಕ್ತರಿಗೂ ನನ್ನ ಕೋಟಿ ಕೋಟಿ ಪ್ರಣಾಮಗಳು” ಎಂದು ಮೋದಿ ಹೇಳಿದ್ದಾರೆ. ದಿನವಿಡೀ ಗಣಪತಿ ಪೂಜೆ, ಮಂಡಲ ಪೂಜೆ, ವಿಶೇಷ ಅಭಿಷೇಕ ಹಾಗೂ ಪ್ರಕಟೋತ್ಸವ ಆರತಿ ಸೇರಿದಂತೆ ವಿಶೇಷ ವಿಧಿವಿಧಾನಗಳು ನೆರವೇರಿದವು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂದಿರದಲ್ಲಿ ಪೂಜೆ ಸಲ್ಲಿಸಿ ಬಳಿಕ ಮಾತಾ ಅನ್ನಪೂರ್ಣಾ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಇದ್ದು, ರಾಮ ಮಂದಿರ ಸಂಕೀರ್ಣದ ನಿರ್ಗಮನ ದ್ವಾರವಾದ ಆವರಣದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

   ಈ ವಿಶೇಷ ದಿನದಂದು ಅಯೋಧ್ಯೆಯಲ್ಲಿ ಭಾರೀ ಜನಸಂದಣಿ ಕಂಡು ಬಂದಿದ್ದು, ಸುಮಾರು 5-6 ಲಕ್ಷ ಭಕ್ತರು ಮಂದಿರಕ್ಕೆ ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ದರ್ಶನಕ್ಕಾಗಿ ಕಾಯುತ್ತಿದ್ದ ಭಕ್ತರು “ಜೈ ಶ್ರೀರಾಮ್” ಘೋಷಣೆ ಕೂಗುತ್ತಿರುವ ದೃಶ್ಯಗಳು ಕಂಡುಬಂದವು. ಜನಸಂದಣಿಯನ್ನು ನಿಯಂತ್ರಿಸಲು ನಗರಾದ್ಯಂತ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.

   ಅಯೋಧ್ಯೆಯನ್ನು ಐದು ಭದ್ರತಾ ವಲಯಗಳಾಗಿ ವಿಭಜಿಸಲಾಗಿದ್ದು, ಭಕ್ತರಿಗಾಗಿ 36 ಪಾರ್ಕಿಂಗ್ ಪ್ರದೇಶಗಳನ್ನು ಒದಗಿಸಲಾಗಿದೆ. ಅಲ್ಲದೇ ಆ್ಯಂಟಿ-ಡ್ರೋನ್ ವ್ಯವಸ್ಥೆಯನ್ನು ಸಹ ಮಾಡಲಾಗಿದ್ದು, ಹಂತ ಹಂತವಾಗಿ ರಾಮಲಲ್ಲಾ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಜನಸಂದಣಿ ನಿಯಂತ್ರಿಸಲು ಮತ್ತು ಭಕ್ತರಿಗೆ ಸುರಕ್ಷಿತವಾಗಿ ದರ್ಶನ ಸಿಗುವಂತೆ ಮಾಡಲು ಗುರುವಾರದವರೆಗೆ ವಿಐಪಿ ಪಾಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link