ಬೆಂಗಳೂರು
ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ನಿನ್ನೆ ಒಂದೇ ದಿನದಲ್ಲಿ 8.93 ಲಕ್ಷ ಜನರು ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದು, 3.08 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಹೊಸ ವರ್ಷಾಚರಣೆ ಹಿನ್ನೆಲೆ ಬಿಎಂಆರ್ಸಿಎಲ್ ಮೂರು ಮಾರ್ಗಗಳಾದ ನೇರಳೆ, ಹಸಿರು ಹಾಗೂ ಹಳದಿ ಮೆಟ್ರೋ ರೈಲುಗಳ ಸೇವಾ ಸಮಯ ವಿಸ್ತರಿಸಿದ್ದವು.
2025ರ ಡಿ.31ರಂದು ಬೆಳಿಗ್ಗೆ 5 ಗಂಟೆಯಿಂದ ಮಧ್ಯರಾತ್ರಿ 3:10ರವರೆಗೆ ಮೆಟ್ರೋ ರೈಲುಗಳು ಸಂಚರಿಸಿದ್ದು, ಈ ಅವಧಿಯಲ್ಲಿ ಬರೋಬ್ಬರಿ 8,93,903 ಜನರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಒಂದೇ ದಿನದಲ್ಲಿ ಮೂರು ಮಾರ್ಗ ಒಟ್ಟಾಗಿ ಬರೋಬ್ಬರಿ 3,08 ಕೋಟಿ ರೂ. ಆದಾಯ ಹರಿದುಬಂದಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಹಂತ 1 ರ ಅಡಿಯಲ್ಲಿ ಪ್ರಸ್ತುತ ಹಸಿರು ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ 17 ಮೆಟ್ರೋ ರೈಲುಗಳನ್ನು ನೇರಳೆ ಮಾರ್ಗಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ. ಖುಷಿ ಸುದ್ದಿ ಎನ್ನುವಂತೆ ಹಸಿರು ಮಾರ್ಗದಲ್ಲಿ 21 ಹೊಸ ರೈಲುಗಳನ್ನು ಪರಿಚಯಿಸಲಿದೆ. ಈ ಯೋಜನೆ ಮೂಲಕ ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದೆ.
ಆರಂಭದ ಹಂತದಲ್ಲಿ 17 ರೈಲುಗಳನ್ನು ಹಂತ ಹಂತವಾಗಿ ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಜೊತೆಗೆ ಹಸಿರು ಮಾರ್ಗಕ್ಕೆ ಸಂಪೂರ್ಣವಾಗಿ 21 ಹೊಸ ಆಧುನಿಕ 6 ಕೋಚ್ CRRC ರೈಲುಗಳನ್ನು ನಿಯೋಜಿಸಲು ಬಿಎಂಆರ್ಸಿಎಲ್ ಮುಂದಾಗಿದೆ. ಈ ಮೂಲಕ ಗ್ರೀನ್ ಲೈನ್ನ ನಮ್ಮ ಮೆಟ್ರೋದಲ್ಲಿನ ಜನದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಮಾದಾವರದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ಗೆ ಸಂಪರ್ಕ ಕಲ್ಪಿಸುವ 33.5 ಕಿಮೀ ಹಸಿರು ಮಾರ್ಗವಾದ ಉತ್ತರ-ದಕ್ಷಿಣ ಕಾರಿಡಾರ್ ಅನ್ನು ಹಂತ ಹಂತವಾಗಿ ಹೊಸ ರೈಲು ಸೆಟ್ಗಳೊಂದಿಗೆ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗುವುದು. ಅಲ್ಲದೇ ಗ್ರೀನ್ ಮೆಟ್ರೋ ಲೈನ್ಗೆ ಸಂಪೂರ್ಣವಾಗಿ ಹೊಸ ರೈಲುಗಳನ್ನು ನೀಡುವ ಯೋಜನೆ ಇದಾಗಿದೆ. ಈ ಮೂಲಕ ಹೆಚ್ಚುವರು ರೈಲು ಓಡಾಟದಿಂದ ಸಂಚಾರ ದಟ್ಟಣೆ ಕಡಿಮೆ ಆಗಲಿದೆ. ಜೊತೆಗೆ ಹಸಿರು ಮಾರ್ಗದ ರೈಲುಗಳು ಹಂತ ಹಂತವಾಗಿ ನೇರಳೆ ಮಾರ್ಗಕ್ಕೆ ಶಿಫ್ಟ್ಆಗುವ ಕಾರಣ ಪೂರ್ವ-ಪಶ್ಚಿಮ ಕಾರಿಡಾರ್, ವೈಟ್ಫೀಲ್ಡ್ ಮೆಟ್ರೋ ನಿಲ್ದಾಣದಿಂದ ಚಲ್ಲಘಟ್ಟ ಟರ್ಮಿನಲ್ವರೆಗೆ ವಿಸ್ತರಿಸಿರುವ 43.49 ಕಿಮೀ ನೇರಳೆ ಮಾರ್ಗದಲ್ಲಿ ಸಂಚಾರ ದಟ್ಟಣೆ ಕಡಿಮೆ ಹಾಗೂ ಹೆಚ್ಚುವರಿ ರೈಲು ಓಡಾಟ ಆಗಲಿದೆ.








