ಪಾವಗಡ
ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ವೈದ್ಯರನ್ನು ನಿಯೋಜಿಸಬೇಕು ಹಾಗೂ ರಕ್ತ ಪರೀಕ್ಷೆ ಕೇಂದ್ರವನ್ನು ಮೊದಲ ಮಹಡಿಯಿಂದ ಕೆಳ ಮಹಡಿಗೆ ಸ್ಥಳಾಂತರಿಸಲು ಕೋರಿ ಆಸ್ಪತ್ರೆ ಆಡಳಿತಾಧಿಕಾರಿ ಗಣೇಶ್ ಬಾಬು ಅವರಿಗೆ ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ಮನವಿ ಪತ್ರ ಸಲ್ಲಿಸಿದೆ.
ಆಸ್ಪತ್ರೆಗೆ ತಾಲೂಕು ಸೇರಿ ನೆರೆಯ ಆಂಧ್ರಪ್ರದೇಶದ ಭಾಗದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಾರೆ. ರಾತ್ರಿ ಪಾಳಿಯಲ್ಲಿ ವೈದ್ಯರು ಹಾಗೂ ಅರಿವಳಿಕೆ (ಅನಸ್ತೇಶಿಯಾ) ತಜ್ಞರು ಇರದಿರುವುದಿರಿಂದ ಹೆರಿಗೆಗೆ ಬರುವ ಗರ್ಭಿಣಿಯರಿಗೆ ಸಮಸ್ಯೆಯಾಗುತ್ತಿದೆ. ಹಾಗೆಯೇ ರಕ್ತ ಪರೀಕ್ಷೆ ಕೇಂದ್ರ ಮೊದಲನೇ ಮಹಡಿಯಲ್ಲಿದ್ದು, ಇದರಿಂದ ವಿಶೇಷಚೇತನರು, ವೃದ್ಧರು ಹಾಗೂ ಬಾಣಂತಿಯರಿಗೆ ಬಹಳ ತೊಂದರೆಯಾಗಿದ್ದು, ಇದನ್ನು ಕೆಳ ಮಹಡಿಗೆ ಸ್ಥಳಾಂತರ ಮಾಡಬೇಕು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರಲಾಗಿದೆ.
ಇನ್ನು ಸರ್ಕಾರಿ ಆಸ್ಪತ್ರೆ ಸುತ್ತಲೂ ಅಡ್ಡದಿಡ್ಡಿಯಾಗಿ ವಾಹನಗಳ ನಿಲುಗಡೆಯಿಂದ ತುರ್ತುವಾಹನಗಳಿಗೆ ತೊಂದರೆಯಾಗಿದೆ. ಈ ಸಮಸ್ಯೆ ಪರಿಹರಿಸಲು ತಕ್ಷಣ ಗಮನಹರಿಸಬೇಕು. ಹಾಗೆಯೇ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ನಕಲಿ ವೈದ್ಯರ ಹಾವಳಿಯಿಂದ ಈಗಾಗಲೇ ಹಲವು ಅಮಾಯಕ ಜನರು ಮೃತಪಟ್ಟಿದ್ದು, ಇದರ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳು ಕ್ರಮ ಕೈಗೊಳ್ಳಲು ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ನಕಲಿ ವೈದ್ಯದಿಂದ ರೋಗಿಗಳು ಮೃತಪಟ್ಟರೆ, ಅದಕ್ಕೆ ಜಿಲ್ಲಾ ವೈದ್ಯಾಧಿಕಾರಿಗಳು ಹಾಗೂ ತಾಲೂಕು ವೈದ್ಯಾಧಿಕಾರಿಗಳು ನೇರ ಹೊಣೆ. ತತ್‌ಕ್ಷಣವೇ ಈ ವಿಚಾರವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮೈಕಲ್, ಝಬಿವುಲ್ಲಾ, ನಾಗರಾಜ್, ರಮ್ಯಾ. ನೇತ್ರಾವತಿ, ಶಶಿಕಲಾ ಮತ್ತಿತರರು ಇದ್ದರು.








