ಅಧಿಕಾರಿಗಳು ಮತ್ತು ಗುತ್ತಿಗೆದಾರರ ಹಣದ ದಾಹಕ್ಕೆ ಬಲಿಯಾದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ……..!

ಕೊರಟಗೆರೆ :- 

      ಬರ ಪೀಡಿತ ಪ್ರದೇಶ ಬಯಲು ಸೀಮೆಗೆ ಕುಡಿಯುವ ನೀರು ಒದಗಿಸುವ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಎತ್ತಿನಹೊಳೆ ಯೋಜನೆ ತುಮಕೂರು ಜಿಲ್ಲೆಯ ಅಧಿಕಾರಿಗಳ ಹಾಗೂ ಗುತ್ತಿಗೆದಾರಗಳ ಹಣ ದಾಹಕ್ಕೆ ಕಾಮಗಾರಿಯು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು, ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ಪೋಲಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಬರಪೀಡಿತ ಪ್ರದೇಶಗಳಾದ ಬಯಲು ಸೀಮೆಯ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನರಿಗೆ ಫ್ಲೋರೈಡ್ ಮುಕ್ತ ನೀರು ಒದಗಿಸುವ ದೃಷ್ಟಿಯಿಂದ ಕುಡಿಯುವ ನೀರಿನ ಮಹತ್ವಕಾಂಕ್ಷೆ ಯೋಜನೆಗೆ ಸಾವಿರಾರು ಕೋಟಿ ಹಣ ಬಳಕೆಯಾಗುತ್ತಿದ್ದರೂ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಎತ್ತಿನಹೊಳೆ ಯೋಜನೆಯ ಬಹಳಷ್ಟು ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು ಸಾವಿರಾರು ಕೋಟಿ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಆರೋಪಿಸಲಾಗುತ್ತಿದೆ. 

ಸರ್ಕಾರದ ಬಹುನಿರೀಕ್ಷೆಯ ಎತ್ತಿನಹೊಳೆ ಯೋಜನೆಯು ಆರ್ಥಿಕವಾಗಿ ಅತಿ ದೊಡ್ಡ ಮೊತ್ತದ ಯೋಜನೆಯಾಗಿದ್ದು ಆರಂಭಿಕ ಅಂದಾಜು ವೆಚ್ಚ ಸುಮಾರು 13 ಸಾವಿರ ಕೋಟಿ ಎನ್ನಲಾಗಿದ್ದು, ಈಗಿನ ಪರಿಷ್ಕೃತ ಅಂದಾಜು ವೆಚ್ಚ 23 ಸಾವಿರ ಕೋಟಿಗೂ ಅಧಿಕವಾಗಿದೆ ,ಆದರೂ ಎತ್ತಿನಹೊಳೆ ಯೋಜನೆಯ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು ಕಾಮಗಾರಿಯಲ್ಲಿ ಅಗತ್ಯವಿರುವ ಕಬ್ಬಿಣ ಸೇರಿದಂತೆ ಮೂಲಭೂತ ವಸ್ತುಗಳನ್ನು ಬಳಕೆ ಮಾಡದೆ, ಅಸಡ್ಡೆ, ಮತ್ತು ಬೇಜವಾಬ್ದಾರಿ ವಹಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಧಿಕಾರಿಗಳು ಹಣದ ದಾಹಕ್ಕೆ ಗುತ್ತಿಗೆದಾರರ ಜೊತೆ ಕೈ ಜೋಡಿಸಿ ಇಡೀ ಯೋಜನೆಯನ್ನ ಹಳ್ಳ ಹಿಡಿಯುವಂತೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

     ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ದೊಡ್ಡ ಪಾಲನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾಮಗಾರಿ ನಡೆಯುತ್ತಿರುವ ಬಹಳಷ್ಟು ಸ್ಥಳಗಳಲ್ಲಿ ನಾಲೆಗಳ ತಡೆಗೋಡೆಗಳು ಕುಸಿಯುತ್ತಿದೆ , ಕೆಲವು ಕಡೆ ನಾಲೆ ಗೋಡೆ ಬಿರುಕುಬಿಟ್ಟು ಗಿಡ ಬೆಳೆದು ಬಳ್ಳಿ ಸುತ್ತುವರೆದಿವೆ, ತಾಲೂಕಿನ ಬಹುತೇಕ ಸ್ಥಳಗಳಲ್ಲಿ ಇದೇ ಸ್ಥಿತಿ ಕಂಡುಬರುತ್ತಿದ್ದು ಕಾಮಗಾರಿಯ ಗುಣಮಟ್ಟ ಪ್ರಶ್ನಿಸುವಂತಿದೆ .

     ವಿಶ್ವೇಶ್ವರಯ್ಯ ಜಲ ನಿಗಮ ಕಚೇರಿ ನೆಪ ಮಾತ್ರಕ್ಕೆ ಕೊರಟಗೆರೆಯಲ್ಲಿದ್ದು ಇಲ್ಲಿಯ ಅಧಿಕಾರಿಗಳು ರೈತರಿಗಾಗಿ ಅಥವಾ ಸಾರ್ವಜನಿಕರಿಗೆ ಆಗಲಿ ಯಾವುದೇ ಮಾಹಿತಿ ಕೊಡಲು ಕಚೇರಿಯಲ್ಲಿ ಸಹಾಯಕ ಕಾರ್ಯ ಪಾಲಕ ಅಭಿಯಂತರಾದ ನಾಗರಾಜು ರೈತರಿಗೆ ಹಾಗೂ ಸಾರ್ವಜನಿಕರಿಗೆ ಸಂಪರ್ಕಕ್ಕೆ ಬಾರದೆ ಅತಿ ಹೆಚ್ಚು ಫೀಲ್ಡ್ ವರ್ಕ್ , ಡಿಸ್ಟಿಕ್ ಆಫೀಸ್ ಹಾಗೂ ಸ್ಟೇಟ್ ಆಫಿಸ್ ಎಂದು ಹರಕೆ ಉತ್ತರ ನೀಡಿ ಕಚೇರಿಗೆ ಬರುವ ರೈತಾಪಿ ವರ್ಗ ಹಾಗೂ ಸಾರ್ವಜನಿಕರಿಗೆ ಕುಂಟು ನೆಪ ಹೇಳುತ್ತಾರೆ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಿರುವುದಲ್ಲದೆ ಕೆಲವು ರೈತರು ಭೂ ಸ್ವಾಧೀನ ಪ್ರಕ್ರಿಯೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಮಾಹಿತಿ ಪಡೆಯಲು ಕಚೇರಿಗೆ ಹಲವು ಬಾರಿ ಅಲೆಯುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತಿದ್ದಾರೆ.

     ರಾಜ್ಯ ಸರ್ಕಾರದ ಒಂದು ಮಹತ್ವಕಾಂಕ್ಷೆಯ ಯೋಜನೆ ಸಫಲವಾಗಬೇಕಾದರೆ ಕಾಮಗಾರಿಯು ಗುಣಮಟ್ಟ ಕಾಯ್ದುಕೊಳ್ಬೇಕು ಆದರೆ ತುಮಕೂರು ಜಿಲ್ಲೆಯಲ್ಲಿ ಅದಕ್ಕೆ ವಿರುದ್ಧ ಎಂಬುದು ಕೊರಟಗೆರೆ ತಾಲೂಕಿನ ಬಹಳಷ್ಟು ಸ್ಥಳಗಳಲ್ಲಿ ಕಳಪೆ ಕಾಮಗಾರಿ ಕಂಡುಬರುತ್ತಿತ್ತು ಯೋಜನೆ ಕೇವಲ 1-2 ದಿನಗಳ ತಿಂಗಳು ವರ್ಷಗಳ ಯೋಜನೆಯಾಗಿರದೆ ಇದು ಶಾಶ್ವತ ಯೋಜನೆಯಾಗಿದ್ದು,ಕುಡಿಯುವ ನೀರಿನ ಯೋಜನೆಯಾಗಿರುವುದರಿಂದ ನಾಲೆಗಳಲ್ಲಿ ಪ್ರತಿ ವರ್ಷ ನೀರು ಹರಿಯುವ ಕಾರಣ ನಾಲೆಗಳು ಗುಣಮಟ್ಟದಲ್ಲಿ ನಿರ್ಮಾಣವಾಗಬೇಕು, ಈಗಾಗಲೇ ನೀರು ಹರಿಯುವ ಮುನ್ನವೇ ನಾಲೆಗಳು ಕುಸಿಯುತ್ತಿರುವುದನ್ನು ನೋಡಿದರೆ ಈ ಯೋಜನೆ ಎಲ್ಲೋ ಒಂದು ಕಡೆ ಬಯಲು ಸೀಮೆಯ ಜನರ ಕುಡಿಯುವ ನೀರಿನ ಕನಸನ್ನು ಭಗ್ನ ಗೊಳಿಸುತ್ತದೆಯೋ ಎಂಬ ಅನುಮಾನ ಮೂಡಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಕೊರಟಗೆರೆ ತಾಲೂಕಿಗೆ 2026ರ ಅಂತ್ಯ ಹಾಗೂ 2027 ಪ್ರಾರಂಭದಲ್ಲಿಯೇ ಎತ್ತಿನಹೊಳೆ ಯೋಜನೆಯಿಂದ ನೀರು ಹರಿಯಲ್ಲಿದ್ದು, ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 104 ಕೆರೆಗಳಿಗೆ ನೀರು ಹರಿಯಲಿದ್ದು ,ಕೋರಾದ 36ಕೆರೆ, ಪುರವರದ 8ಕೆರೆ, ಕಸಬಾದ 8ಕೆರೆ, ಹೊಳವನಹಳ್ಳಿಯ 10ಕೆರೆ, ಕೋಳಾಲದ 25ಕೆರೆ ಮತ್ತು ಚನ್ನರಾಯನದುರ್ಗದ 17 ಕೆರೆ ಸೇರಿ ಒಟ್ಟು 104ಕೆರೆಗಳಿಗೆ ಎತ್ತಿನಹೊಳೆ ಯೋಜನೆಯ ನೀರು ಹರಿಯಲಿದೆ ಬಯಲುಸೀಮೆ ರೈತರ ನೀರಾವರಿ ಬೇಡಿಕೆಯಂತೆ ನಾನು ನೀಡಿದ ಎತ್ತಿನಹೊಳೆ ಯೋಜನೆಯ ಕಾರ್ಯಗತದ ಹೆಜ್ಜೆಗುರುತು ಹಾಕಿದ್ದೇನೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ .

ತುಮಕೂರು ಜಿಲ್ಲೆ ಬಯಲು ಸೀಮೆ ಪ್ರದೇಶವಾಗಿದ್ದು ಕೊರಟಗೆರೆ ಮಧುಗಿರಿ ಹಾಗೂ ಪಾವಗಡ ತಾಲೂಕಿನ ಕೆರೆಗಳಿಗೆ ನೀರು ಹರಿಸುವಂತ ತಾಲೂಕಿನ ಈ ಯೋಜನೆ ಕೆಲವು ವರ್ಷಗಳಿಂದ ಸತತವಾಗಿ ಕಾಮಗಾರಿ ನೆಡೆಯುತ್ತಿದ್ದು ಪ್ರಾರಂಭಿಕ ಹಂತದಲ್ಲಿಯೇ ಕಳಪೆ ಕಾಮಗಾರಿ ಅನಾವರಣಗೊಂಡಿದ್ದು , ಕೆಲವು ಆಯ್ದ ಗ್ರಾಮಗಳಲ್ಲಿ ಈ ಯೋಜನೆಯ ಕಾಲುವೆಗಳಲ್ಲಿ ನೀರು ಹರಿಯುವ ಮುನ್ನವೇ ನಾಲೆಗಳು ಅಲ್ಲಲ್ಲಿ ಕುಸಿದು ಹೋಗಿರುವುದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಂದಂತಿದೆ ಈ ಪ್ರದೇಶಗಳಿಗೆ ಮಾನ್ಯ ಜಲ ಸಂಪನ್ಮೂಲ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಕಾಮಗಾರಿಯಲ್ಲಿ ಆಗಿರುವ ಬೇಜವಾಬ್ದಾರಿತನಕ್ಕೆ ಹೊಣೆಗಾರರಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ರೈತರು ಉನ್ನತ ತನಿಕೆ ನಡೆಸಬೇಕು ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಸರ್ಕಾರಕ್ಕೆ ಆಗಿರುವ ದೊಡ್ಡ ಮಟ್ಟದ ನಷ್ಟವನ್ನು ಮತ್ತೆ ತಪ್ಪಿತಸ್ಥರಿಂದ ಹಿಂದಿರುಗಿಸುವಂಥಾಗಬೇಕು ಎಂದು ಒತ್ತಾಯಿಸಿದ್ದಾರೆ.

ಒಟ್ಟಾರೆ ಬರಪೀಡಿತ ಪ್ರದೇಶ ಕೊರಟಗೆರೆ ಜನತೆಗೆ ಶಾಶ್ವತ ನೀರಾವರಿ ಯೋಜನೆಯ ಕನಸು ಅಧಿಕಾರಿ ಹಾಗೂ ಗುತ್ತಿಗೆದಾರರ ಹಣದ ದಾಹಕ್ಕೆ ಬತ್ತಿ ಹೋಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತದೆ .

Recent Articles

spot_img

Related Stories

Share via
Copy link