
ಪ್ರಜಾಪ್ರಗತಿ.ಕಾಂ
ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನ ಗಡಿ ಭಾಗದ ಗ್ರಾಮವಾದ ಕಿಡುಕನಹಳ್ಳಿಗೆ ದಶಕಗಳು ಕಳೆದರೂ ಸಮರ್ಪಕ ಬಸ್ ಸೌಕರ್ಯ ಇಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರ ಶ್ರೀನಿವಾಸ್ ಸಬ್ಬೇನಹಳ್ಳಿ ಅವರು ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರ ಮೂಲಕ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕೂಡಲೇ ಬಸ್ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ಸುಮಾರು ೫೦೦ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಕಿಡುಕನಹಳ್ಳಿ ಗ್ರಾಮವು ತುಮಕೂರು ಜಿಲ್ಲೆಯ ಗಡಿಭಾಗದಲ್ಲಿದ್ದು, ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಇಲ್ಲಿನ ಪರಿಸ್ಥಿತಿ ಸಾಕಷ್ಟು ದುಸ್ತರವಾಗಿದೆ. ರೈತರು ಮತ್ತು ಕೃಷಿ ಕಾರ್ಮಿಕರು ತಮ್ಮ ದಿನನಿತ್ಯದ ವ್ಯಾಪಾರಕ್ಕಾಗಿ ಪಟ್ಟಣಗಳಿಗೆ ಹೋಗಲು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಆರ್ಥಿಕವಾಗಿಯೂ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಕ್ಕೆ ವಾಹನಗಳು ಸಂಚರಿಸಲು ಸುಸಜ್ಜಿತ ರಸ್ತೆ ವ್ಯವಸ್ಥೆ ಇದ್ದರೂ ಸಹ, ಸಾರಿಗೆ ಇಲಾಖೆಯ ಅಧಿಕಾರಿಗಳು ಈ ಮಾರ್ಗದಲ್ಲಿ ಬಸ್ ಓಡಿಸಲು ಆಸಕ್ತಿ ತೋರುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಬೆಳಿಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಮಾಡಿ ಕೊಡಿ ಎಂದು ಹಲವು ಬಾರಿ ಕೇಳಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಶ್ರೀನಿವಾಸ್ ಸಬ್ಬೇನಹಳ್ಳಿ ಅಧಿಕಾರಿಗಳ ನಿರ್ಲಕ್ಷತೆ ಬಗ್ಗೆ ದೂರಿದ್ದಾರೆ
ಈಗಲಾದರೂ ಕೆಎಸ್‌ಆರ್‌ಟಿಸಿ ವಿಭಾಗೀಯ ಅಧಿಕಾರಿಗಳು ಎಚ್ಚೆತ್ತುಕೊಂಡು, ಕಿಡುಕನಹಳ್ಳಿ ಗ್ರಾಮದ ಜನರ ‘ನಡಿಗೆಯ ಶಿಕ್ಷೆ’ಯನ್ನು ತಪ್ಪಿಸುತ್ತಾರೆಯೆ ಎಂದು ಕಾದು ನೋಡಬೇಕಿದೆ.
ಕೋಟ್:
ಹುಳಿಯಾರು, ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿಯ ಶಾಲೆ, ಕಾಲೇಜುಗಳಿಗೆ ಹೋಗುವ ನೂರಾರು ವಿದ್ಯಾರ್ಥಿಗಳು ಪ್ರತಿದಿನ ೫ ಕಿಲೋ ಮೀಟರ್ ದೂರದ ಬೊಮ್ಮೇನಹಳ್ಳಿಯವರೆಗೆ ನಡೆದುಕೊಂಡೆ ಹೋಗಬೇಕಾದ ಅನಿವಾರ್ಯತೆ ಇದೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಬೇಕಾದ ರೋಗಿಗಳು ಮತ್ತು ಗರ್ಭಿಣಿಯರು ಬಸ್ ಇಲ್ಲದೆ ಖಾಸಗಿ ವಾಹನಗಳನ್ನೆ ಅವಲಂಬಿಸಿದ್ದಾರೆ. ಗಡಿ ಗ್ರಾಮದ ಜನರನ್ನು ಕೇವಲ ಮತ ಹಾಕಲು ಮಾತ್ರ ಬಳಸಿಕೊಳ್ಳಬೇಡಿ. ಅವರಿಗೆ ಕನಿಷ್ಠ ಸಾರಿಗೆ ಸೌಲಭ್ಯ ನೀಡುವುದು ಸರಕಾರದ ಕರ್ತವ್ಯ. ಕೂಡಲೇ ರೂಟ್ ಸರ್ವೆ ನಡೆಸಿ ಬಸ್ ಬಿಡದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಉಗ್ರ ಪ್ರತಿಭಟನೆ ನಡೆಸಲಾಗುವುದು.
-ಶ್ರೀನಿವಾಸ್ ಸಬ್ಬೇನಹಳ್ಳಿ, ಸಾಮಾಜಿಕ ಹೋರಾಟಗಾರ.








