
ಸೊರಬ: ಬಿಜೆಪಿ ಮುಖಂಡನ ಅನೈತಿಕ ಸಂಬಂಧದಿಂದ ಬೇಸತ್ತು ಆತನ ಪತ್ನಿ ನೇಣಿಗೆ ಶರಣಾದ ಘಟನೆ ಭಾನುವಾರ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ನಡೆದಿದೆ.
ಮೂಲತಃ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಹೊಸವೀರಾಪುರ ಗ್ರಾಮದ ಮಂಜುಳಾ (೩೮) ಆತ್ಮಹತ್ಯೆಗೆ ಶರಣಾದ ಮಹಿಳೆ. ಮಂಜುಳಾ ಅವರನ್ನು ಪಟ್ಟಣದ ಕಾನುಕೇರಿ ಬಡಾವಣೆಯ ನಿವಾಸಿ, ಪುರಸಭೆ ಮಾಜಿ ಅಧ್ಯಕ್ಷ ಪ್ರಭು ಮೇಸ್ತ್ರಿ ಅವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ, ಪ್ರಭುಮೇಸ್ತ್ರಿ ತನ್ನ ಮಾಲಿಕತ್ವದ ಹಾರ್ಡ್ವೇರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ಹೊಂದಿರುವ ಅನೈತಿಕ ಸಂಬಂಧವನ್ನು ಬಿಟ್ಟುಬಿಡುವಂತೆ ಅನೇಕ ಬಾರಿ ಹಿರಿಯರು ಹಾಗೂ ಸಂಬಂಧಿಗಳು ಬುದ್ದಿ ಮಾತು ಹೇಳಿದ್ದರೂ, ಆಕೆಯೊಂದಿಗೆ ಸಂಬಂಧ ಮುಂದುವರೆಸಿಕೊಂಡು ಮಂಜುಳಾ ಅವರಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರು ಎನ್ನಲಾಗುತ್ತಿದೆ. ಇದರಿಂದ ಬೇಸತ್ತ ಪ್ರಭು ಮೇಸ್ತ್ರಿ ಪತ್ನಿ ಮಂಜುಳಾ ಮನೆಯ ಹಿಂಭಾಗದ ಮರದ ತೊಲೆಗೆ ನೇಣಿಗೆ ಶರಣಾಗಿದ್ದಾರೆ. ಈ ಬಗ್ಗೆ ಮೃತಳ ತಾಯಿ ಶೋಭಾ ನೀಡಿದ ದೂರಿನ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಭುಮೇಸ್ತ್ರಿ ಹಿನ್ನೆಲೆ: ಇಟ್ಟಿಗೆ ಗುಮ್ಮಿಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಪ್ರಭು ಮೇಸ್ತ್ರಿ ಕಾಲಕ್ರಮೇಣ ಕಟ್ಟಡ ನಿರ್ಮಾಣ ಗುತ್ತಿಗೆ ಕೆಲಸಕ್ಕೆ ಪ್ರಾರಂಭಿಸಿ ಯಶಸ್ಸನ್ನು ಗಳಿಸಿದ್ದರು. ಇವರ ಜನಪ್ರಿಯತೆಯತೆ ಮತ್ತು ಕಳೆದ ಬಾರಿಯ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಹನ್ನೆರಡನೇ ವಾರ್ಡ್ನಿಂದ ಮೊದಲ ಬಾರಿಗೆ ಬಿಜೆಪಿ ಕಣಕ್ಕೆ ಇಳಿಸಿತ್ತು. ಅದೃಷ್ಟ ವೆಂಬಂತೆ ಮೊದಲ ಬಾರಿಗೆ ಚುನಾಯಿತರಾಗಿ ನಂತರದ ದಿನದಲ್ಲಿ ಮೇಲ್ದರ್ಜೆಗೆ ಏರಿದ ಸೊರಬ ಪುರಸಭೆಯ ಅಧ್ಯಕ್ಷಗಾದಿಯನ್ನು ಅಲಂಕರಿಸಿದ್ದರು. ಬಿಜೆಪಿಯಲ್ಲಿ ಬಣರಾಜಕಾರಣದ ಕಿತ್ತಾಟ ನಡೆಯುತ್ತಿದೆ ಎನ್ನುವ ಹೊತ್ತಿನಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದರು. ಇವೆಲ್ಲದರ ನಡುವೆ ಹಾರ್ಡ್ವೇರ್ ನಡೆಸುತ್ತಿದ್ದ ಸಂದರ್ಭದಲ್ಲಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗುತ್ತಿದೆ. ಈ ಮೊದಲು ಕೇರಳ ಮೂಲದ ಮಹಿಳೆಯೊಂದಿಗೆ ಮೊದಲು ಮದುವೆಯಾಗಿದ್ದರು. ಮೊದಲ ಪತ್ನಿಯನ್ನು ತೊರೆದಿದ್ದ ಪ್ರಭುಮೇಸ್ತ್ರಿ ಜೊತೆಗೆ ಮಂಜುಳಾ ಅವರ ವಿವಾಹವು ಜರುಗಿತ್ತು. ಮೊದಲ ಪತ್ನಿ ತವರಿಗೆ ತೆರಳಿದರೆ, ಎರಡನೇ ಪತ್ನಿ ಬಾರದ ಲೋಕಕ್ಕೆ ತೆರಳಿದ್ದಾಳೆ. ಅಲ್ಲದೇ, ಮೃತ ಮಂಜುಳಾ ಗರ್ಭಿಣಿಯಾಗಿದ್ದಳು ಎನ್ನಲಾಗುತ್ತಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಸೋಮವಾರ ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯ ತರುಯವಾಯವಷ್ಟೇ ಇದೊಂದು ಆತ್ಮಹತ್ಯೆಯೋ ಅಥವಾ ಹತ್ಯೆಯೋ ಎಂಬುದು ತಿಳಿದುಬರದಲಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.








