
ಬೆಂಗಳೂರು: ಒಬ್ಬನೇ ಒಬ್ಬ ಅರ್ಹ ಫಲಾನುಭವಿಗೆ ತೊಂದರೆ ಆಗಬಾರದು. ಅನರ್ಹ ಫಲಾನುಭವಿಗಳು, ಯೋಜನೆಯ ದುರುಪಯೋಗಕ್ಕೆ ಮಾತ್ರ ಬ್ರೇಕ್ ಹಾಕಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಹಲವು ಫಲಾನುಭವಿಗಳು ಬ್ಯಾಂಕ್ ಸಾಲ ಪಡೆದಿರುತ್ತಾರೆ. ಸಾಲದ ಖಾತೆಗೆ ಗೃಹಲಕ್ಷಿ÷್ಮ ಹಣ ಹೋದ ತಕ್ಷಣ ಆ ಹಣ ಸಾಲದ ಮೊತ್ತಕ್ಕೆ ಜಮೆ ಆಗುತ್ತದೆ. ಆದ್ದರಿಂದ ಅಂತಹ ಫಲಾನುಭವಿಗಳು ಖಾತೆ ಬದಲಾಯಿಸಿರುತ್ತಾರೆ. ಇಂತಹ ಫಲಾನುಭವಿಗಳಿಗೆ ತೊಂದರೆ ಆಗಬಾರದು ಎಂದು ಸೂಚನೆ ನೀಡಿದರು.
ಗೃಹಜ್ಯೋತಿ ಗ್ಯಾರಂಟಿ ಯೋಜನೆ ಜಾರಿ ಆಗುವಾಗ ಹೆಚ್ಚಿನ ದುರುಪಯೋಗ ಆಗದ ಹಾಗೆ ಎಚ್ಚರಿಕೆ ವಹಿಸಿದ್ದರು. ಇದೇ ಎಚ್ಚರಿಕೆ ಇತರ ಯೋಜನೆಗಳಲ್ಲೂ ಅನುಸರಿಸಿದ್ದರೆ ದುರುಪಯೋಗದ ಪ್ರಮಾಣ ಕಡಿಮೆ ಆಗುತ್ತಿತ್ತು. ಮೃತಪಟ್ಟಿರುವ ಫಲಾನುಭವಿಗಳಿಗೂ ಗೃಹಲಕ್ಷಿ÷್ಮ ಹಣ ಹೋಗುತ್ತಿರುವುದು ಪತ್ತೆಯಾಗಿದೆ. ಈ ರೀತಿ ದುರುಪಯೋಗ ಆಗಬಾರದು. ಗೃಹಲಕ್ಷಿ÷್ಮ ಹಣ ಫಲಾನುಭವಿಗಳ ಖಾತೆಗೆ ಜಮೆಯಾದ ತಕ್ಷಣ ಅವರ ಮೊಬೈಲಿಗೆ ವಾಯ್ಸ್ ಮೆಸೆಜ್ ಮೂಲಕ ಖಚಿತಪಡಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಪ್ರಮುಖ ಅಂಶಗಳು: ಏರ್‌ಟೆಲ್ ಆಪ್ ಬ್ಯಾಂಕ್‌ನಲ್ಲಿ (ಏರ್ಟೆಲ್ ಸಿಮ್ ಬಳಕೆದಾರರು ತೆರೆಯಲು ಅವಕಾಶವಿರುವ ಖಾತೆ) ಯುಪಿಎ ಖಾತೆಗಳನ್ನು ತೆಗೆದು ದುರುಪಯೋಗ ಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಪತ್ತೆಯಾಗಿವೆ ಎನ್ನುವ ಬಗ್ಗೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಖಾತೆಗಳು ಕರ್ನಾಟಕ ರಾಜ್ಯದಲ್ಲಿ ಮಾತ್ರ ಇರಬೇಕು. ಇತರ ರಾಜ್ಯಗಳಲ್ಲಿರುವ ಖಾತೆಗಳಿಗೆ ಹಣ ಹೋಗುತ್ತಿರುವುದು ಪತ್ತೆಯಾಗಿದೆ. ಇವುಗಳಿಗೆ ತಡೆ ಹಾಕಬೇಕು ಎಂದು ತಿಳಿಸಿದರು.
ಕೇಂದ್ರದ ನೀತಿಗಳಿಂದ ಬಡವರು ಮತ್ತು ಮಧ್ಯಮ ವರ್ಗದವರ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆ, ಬೆಲೆ ಏರಿಕೆಯ ಪರಿಣಾಮಗಳು ಮತ್ತು ತಲಾ ಆದಾಯ ಕುಸಿಯುತ್ತಿರುವುದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಗೃಹಲಕ್ಷಿ÷್ಮ ಯೋಜನೆ ಜಾರಿಯಲ್ಲಿ ಬರುತ್ತಿರುವ ಎರಡು ಪ್ರಮುಖ ತಾಂತ್ರಿಕ ಸಮಸ್ಯೆಗಳ ಬಗ್ಗೆ ಕೂಲಂಕಷ ಚರ್ಚೆ ನಡೆಸಲಾಯಿತು. ಮರಣ ಹೊಂದಿದ ಫಲಾನುಭವಿಗಳ ಸಂಖ್ಯೆ ಸಕಾಲದಲ್ಲಿ ದೊರೆಯದಿರುವ ಬಗ್ಗೆ ಇ-ಕೆವೈಸಿ ಹಾಗೂ ಬ್ಯಾಂಕ್ ಖಾತೆ/ಎನ್.ಪಿ.ಸಿ.ಐ ನಿಷ್ಕಿçಯವಾಗಿರುವ ಫಲಾನುಭವಿಗಳ ಕುರಿತಂತೆ ಚರ್ಚೆ ನಡೆಸಲಾಯಿತು. ಆಡಿಟರ್ ಜನರಲ್ ವರದಿಯಲ್ಲಿ ಉಲ್ಲೇಖವಾಗಿರುವ ಈ ಕೆಳಗಿನ ಸಂಗತಿಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಒಂದೇ ಖಾತೆಯಲ್ಲಿ ಹಲವು ಫಲಾನುಭವಿಗಳು ಗೃಹಲಕ್ಷಿ ಹಣ ಪಡೆಯುತ್ತಿದ್ದಾರೆ. ಮೂರು ಲಕ್ಷ ಕಂತುಗಳಲ್ಲಿ ಒಟ್ಟು 60 ಕೋಟಿ ರೂಪಾಯಿ ಹಣ ಹೋಗಿದೆ ಎನ್ನುವ ಬಗ್ಗೆ ಎಜಿ ಅವರ ವರದಿ ಬಂದಿದೆ. ಒಬ್ಬರೇ ಹಲವು ಖಾತೆಗಳನ್ನು ನೋಂದಾಯಿಸಿರುವುದನ್ನು ವರದಿಯಲ್ಲಿ ಉಲ್ಲೇಖವಾಗಿದೆ. ಹಿಂದೆ ಪಡೆದ ಅರ್ಜಿಗಳಲ್ಲಿ ಉಲ್ಲೇಖವಾಗಿರುವ ಅಂಶಗಳ ನೈಜತೆ ಬಗ್ಗೆ ಪರಿಶೀಲನೆ ನಡೆಸದಿರುವ ಬಗ್ಗೆ ಪ್ರಸ್ತಾಪಸಲಾಯಿತು.
ಶಕ್ತಿ ಯೋಜನೆಯು ಮೇ ಅಂತ್ಯದವರೆಗೆ 763 ಕೋಟಿ ಮಹಿಳೆಯರು ಯೋಜನೆಯ ಫಲಾನುಭವಿಗಳಾಗಿದ್ದು, ಅವರಿಗೆ ವಿನಿಯೋಗಿಸಲಾದ ಟಿಕೆಟ್ ಮೌಲ್ಯ 20047.69 ಕೋಟಿ ರೂಪಾಯಿಗಳು. 2026-27ನೇ ಸಾಲಿಗೆ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಎಲ್ಲರನ್ನೂ ಸೇರಿಸಿ 10 ಲಕ್ಷ ಉಚಿತ ಬಸ್ ಪಾಸ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲು ಅಂದಾಜಿಸಲಾಗಿದೆ. ಗೃಹ ಜ್ಯೋತಿ ಯೋಜನೆಯಡಿ ಮೇ ಅಂತ್ಯದವರೆಗೆ 1.65 ಕೋಟಿ ಫಲಾನುಭವಿಗಳು ಯೋಜನೆಯ ಲಾಭ ಪಡೆದಿರುತ್ತಾರೆ. ಹೊರ ರಾಜ್ಯದಿಂದ ಇಲ್ಲಿಗೆ ಬಂದು ನೆಲೆಸಿ ಗೃಹ ಜ್ಯೋತಿ ಲಾಭ ಪಡೆಯುತ್ತಿರುವವರ ಮಾಹಿತಿ ಸಂಗ್ರಹಿಸಲು ಸೂಚನೆ ನೀಡಲಾಯಿತು.
ಮತಪಟ್ಟಿಯಲ್ಲಿ ಹೆಸರಿರುವ ಮತದಾರರು ಮಾತ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಿರುತ್ತಾರೆ. ಆದ್ದರಿಂದ ವಿಶೇಷ ಸಮಗ್ರ ಪರಿಷ್ಕರಣೆ ಸಂದರ್ಭದಲ್ಲಿ ಫಲಾನುವಿಗಳು ತಮ್ಮ ಹೆಸರು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಅನ್ನಭಾಗ್ಯ ಯೋಜನೆಯಡಿ 11,561 ಕೋಟಿ ರೂ.ಗಳನ್ನು ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ. ಜುಲೈ-2023 ರಿಂದ ಡಿಸೆಂಬರ್-2024ರ ವರೆಗೆ ಒಟ್ಟು 72,02,33,970 ಫಲಾನುಭವಿಗಳಿಗೆ ಒಟ್ಟು ರೂ. 11,561.05 ಕೋಟಿಗಳನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿರುತ್ತದೆ ಎಂದು ಅಧಿಕಾರಿಗಳು ವಿವರಿಸಿದರು.
ನಂತರ 2025ನೇ ಫೆಬ್ರವರಿ ತಿಂಗಳಿನಿAದ ಇಲ್ಲಿಯವರೆಗೆ ಪ್ರಸ್ತುತ ರಾಜ್ಯದಲ್ಲಿರುವ ಒಟ್ಟು 4,44,67,942 ಫಲಾನುಭವಿಗಳಿಗೆ ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟವಾಗುತ್ತಿರುವುದನ್ನು ನಿಗ್ರಹಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದರು.
ಸಭೆಯಲ್ಲಿ ಸಚಿವರಾದ ಕೆ.ಹೆಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಸಿಎಂ ಮುಖ್ಯ ಸಲಹೆಗಾರ ಸುನಿಲ್ ಕನಗೋಳ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸಿಎಂ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ, ಎಸ್ ಆರ್ ಪಾಟೀಲ್, ಪುಷ್ಪಾ ಅಮರನಾಥ್, ಮೆಹರುಸ್ ಖಾನ್, ಬೆಂಗಳೂರು ಜಿಲ್ಲೆ ಅಧ್ಯಕ್ಷ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.
ನಮ್ಮ ರಾಜ್ಯದ ಫಲಾನುಭವಿಗಳಿಗೆ ಮಾತ್ರ ಸಿಗಬೇಕು : ಸಿಎಂ
ನಮ್ಮ ರಾಜ್ಯದ ಯೋಜನೆಗಳು ನಮ್ಮ ರಾಜ್ಯದ ಫಲಾನುಭವಿಗಳಿಗೆ ಮಾತ್ರ ಸಿಗಬೇಕು. ಇತರ ರಾಜ್ಯದ ಮತದಾರರಿಗೆ ಯೋಜನೆಯ ಲಾಭ ಆಗುತ್ತಿದೆ. ಇದನ್ನು ತಡೆಯಬೇಕು. ಅನುಕೂಲಸ್ಥರು ಯಾರಾದರೂ ಗ್ಯಾರಂಟಿ ಯೋಜನೆಗಳನ್ನು ಸ್ವಯಂಪ್ರೇರಿತವಾಗಿ ಬಿಟ್ಟು ಕೊಡುವ ಮೂಲಕ ಇತರ ಅರ್ಹ ಫಲಾನುಭವವಿಗಳಿಗೆ ನೆರವಾಗಲು ಮುಂದಾದರೆ ಅಂಥವರನ್ನು ಪ್ರೋತ್ಸಾಹಿಸಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಸೂಚಿಸಿದರು.








