ಅಗ್ನಿಪರೀಕ್ಷೆಯ ಸುಳಿಗೆ ಸಿಲುಕಿದ ಬಿ.ವೈ.ವಿಜಯೇಂದ್ರ : ದೆಹಲಿ ಹಾದಿ ತುಳಿದ ನಾಯಕರು
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮುನ್ನಲೆಗೆ ಬಂದ ಆಣೆ – ಪ್ರಮಾಣದ ವಿಚಾರ ಸಂಚಲನ ಮೂಡಿಸುತ್ತಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನ ಪ್ರಕರಣವು ಇದೀಗ ಬಿಜೆಪಿ ಪಾಳಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸುತ್ತಿರುವ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಇದು ಕೇವಲ ಒಂದು ರಾಜಕೀಯ ಮುಜುಗರವಲ್ಲ, ಬದಲಾಗಿ ಅವರ ನಾಯಕತ್ವದ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡುವ ಅಗ್ನಿ ಪರೀಕ್ಷೆಯಾಗಿದೆ. ಇದರ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ಆಣೆ ಪ್ರಮಾಣ ಮಾಡುವ ವಿಚಾರ ಸಂಚಲನವನ್ನು ಸೃಷ್ಠಿ ಮಾಡಿದೆ. ಅದರಂತೆ ಪ್ರಕರಣ ಕುರಿತು ವಿವರಣೆ ನೀಡಲು ರಾಜ್ಯ ಬಿಜೆಪಿ ನಾಯಕರು ದೆಹಲಿಗೆ ತೆರಳಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಡಾ. ರಾಧಾ ಮೋಹನ್ ಅಗರ್ವಾಲ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರುಗಳು ದೆಹಲಿಗೆ ತೆರಳಿದ್ದು ಪಕ್ಷದ ಪ್ರಮುಖರನ್ನು ಭೇಟಿಯಾಗಿ ಮಾಹಿತಿ ನೀಡಲಿದ್ದಾರೆ.
ಎರಡನೇ ಬಾರಿಗೆ ಪಕ್ಷದ ಚುಕ್ಕಾಣಿ ಹಿಡಿಯುವ ನಿರೀಕ್ಷೆಯಲ್ಲಿದ್ದ ಬಿ.ವೈ. ವಿಜಯೇಂದ್ರ ಅವರಿಗೆ ಈ ಬೆಳವಣಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಪಕ್ಷದ ಶಾಸಕರ ಮೇಲೆ ಹಿಡಿತ ಸಾಧಿಸುವಲ್ಲಿ ಮತ್ತು ಒಗ್ಗಟ್ಟನ್ನು ಕಾಪಾಡುವಲ್ಲಿ ಅವರು ಎಡವಿದ್ದಾರೆಯೇ ಎಂಬ ಪ್ರಶ್ನೆಗಳು ವರಿಷ್ಠರ ಮಟ್ಟದಲ್ಲಿ ಉದ್ಭವಿಸಿವೆ.
ಚುನಾವಣೆಗಳಲ್ಲಿ ಶಿಸ್ತಿನ ಮಂತ್ರ ಜಪಿಸುವ ಬಿಜೆಪಿ ಪಾಲಿಗೆ, ತನ್ನದೇ ಪಕ್ಷದ ಶಾಸಕರಿಂದ ಅಡ್ಡ ಮತದಾನ ನಡೆದಿರುವುದು ಪಕ್ಷದ ಆಂತರಿಕ ಭಿನ್ನಮತವನ್ನು ಮತ್ತು ನಾಯಕತ್ವದ ಮೇಲಿನ ಅವಿಶ್ವಾಸವನ್ನು ಜಗಜ್ಜಾಹೀರು ಮಾಡಿದೆ. ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಬಳಿಕ ಉಂಟಾಗಿರುವ ಈ ಬೆಳವಣಿಗೆಯು, ವಿಜಯೇಂದ್ರ ಅವರ ಮುಂದಿನ ರಾಜಕೀಯ ಭವಿಷ್ಯದ ಮೇಲೆ ನೇರ ಪರಿಣಾಮ ಬೀರಲಿದೆ.
ಒಂದು ಕಡೆ ವಿರೋಧ ಪಕ್ಷಗಳು ಈ ಘಟನೆಯನ್ನು ಬಳಸಿಕೊಂಡು ಬಿಜೆಪಿ ನಾಯಕತ್ವದ ವೈಫಲ್ಯವನ್ನು ಬೊಟ್ಟು ಮಾಡುತ್ತಿದ್ದರೆ, ಮತ್ತೊಂದೆಡೆ ಪಕ್ಷದೊಳಗಿನ ಅಸಮಾಧಾನಿತರು ಈ ಅವಕಾಶವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಬಿ.ವೈ.ವಿಜಯೇಂದ್ರ ಅವರು ಈ ಸಂದಿಗ್ಧ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ಪಕ್ಷದೊಳಗಿನ ಅಸಮಾಧಾನವನ್ನು ಶಮನಗೊಳಿಸಿ ಮತ್ತೆ ಹೇಗೆ ಸದೃಢವಾಗಿ ಹೊರಹೊಮ್ಮತ್ತಾರೆ ಎಂಬುದು ರಾಜ್ಯ ರಾಜಕಾರಣದ ಕುತೂಹಲದ ವಿಷಯವಾಗಿದೆ.
ಪ್ರಸ್ತುತ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ, ಈ ಅಡ್ಡ ಮತದಾನದ ಪ್ರಕರಣವು ಬಿಜೆಪಿ ಹೈಕಮಾಂಡ್ ವಿಜಯೇಂದ್ರ ಅವರ ಮೇಲೆ ತೆಗೆದುಕೊಳ್ಳುವ ಮುಂದಿನ ಕ್ರಮದ ಮೇಲೆ ಯಾವ ರೀತಿ ಪ್ರಭಾವ ಬೀರಬಹುದು. ವಿಜಯೇಂದ್ರ ಅವರಿಗೆ ಇದು ಮೊದಲ ಪ್ರಮುಖ ಚುನಾವಣಾ ಸವಾಲುಗಳಲ್ಲಿ ಒಂದಾಗಿದೆ. ಪಕ್ಷದ ಶಾಸಕರ ಮೇಲೆ ಹಿಡಿತ ಸಾಧಿಸುವಲ್ಲಿ ಆದ ವೈಫಲ್ಯದಂತೆ ಇದು ಬಿಂಬಿತವಾಗುತ್ತಿದ್ದು, ಇದನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು ಅವರ ನಾಯಕತ್ವದ ಸಾಮರ್ಥ್ಯವನ್ನು ನಿರ್ಧರಿಸಲಿದೆ.
ಮೈತ್ರಿ ಉಳಿಸಿಕೊಳ್ಳುವ ಸವಾಲು : ಜೆಡಿಎಸ್ ಜೊತೆಗಿನ ಮೈತ್ರಿಯಲ್ಲಿ ಉಂಟಾಗಿರುವ ಬಿರುಕು ಮತ್ತು ಅಸಮಾಧಾನವನ್ನು ಸರಿಪಡಿಸುವುದು ವಿಜಯೇಂದ್ರ ಅವರಿಗೆ ಇರುವ ಮತ್ತೊಂದು ದೊಡ್ಡ ಸವಾಲು. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಎದುರಿಸಲು ಬಲವಾದ ವಿರೋಧ ಪಕ್ಷವಾಗಿ ಬಿಜೆಪಿಯನ್ನು ಬಲಪಡಿಸುವುದು ಹಾಗೂ ಸರ್ಕಾರಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ಅವರು ಮಾಡಬೇಕಿದೆ.
ಪಕ್ಷದ ಸಾಂಸ್ಥಿಕ ಚುನಾವಣೆಗಳು ಮತ್ತು ಮುಂದಿನ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗೆಲ್ಲುವ ಮೂಲಕ ತಮ್ಮ ನಾಯಕತ್ವವನ್ನು ಸಾಬೀತುಪಡಿಸಬೇಕಾದ ಒತ್ತಡ ಅವರ ಮೇಲಿದೆ. ಕೇಂದ್ರ ನಾಯಕತ್ವದ ವಿಶ್ವಾಸವನ್ನು ಉಳಿಸಿಕೊಳ್ಳುತ್ತಲೇ, ರಾಜ್ಯದಲ್ಲಿ ಹಿಡಿತ ಸಾಧಿಸುವುದು ಅವರ ಪಾಲಿಗೆ ಅಗ್ನಿಪರೀಕ್ಷೆಯಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುವ ಮೂಲಕ ತಳಮಟ್ಟದಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ವಿಜಯೇಂದ್ರ ಅವರು ರಾಜ್ಯದಾದ್ಯಂತ ಸಂಚರಿಸಿ ಪಕ್ಷವನ್ನು ಬಲಪಡಿಸುವ ಪ್ರಯತ್ನದಲ್ಲಿದ್ದಾರೆ. ಆದರೆ, ರಾಜ್ಯ ಬಿಜೆಪಿಯ ಹಿರಿಯ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಇತರರ ಟೀಕೆಗಳು ಅವರ ನಾಯಕತ್ವಕ್ಕೆ ಪದೇ ಪದೇ ಅಡ್ಡಿಯಾಗುತ್ತಿವೆ. ಈ ಭಿನ್ನಮತವನ್ನು ಶಮನಗೊಳಿಸುವುದು ಅವರ ಪಾಲಿನ ದೊಡ್ಡ ಸವಾಲಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ, ಅವರ ನಾಯಕತ್ವವು ರಾಜ್ಯದಲ್ಲಿ ಬಿಜೆಪಿ ಎಷ್ಟು ಬಲವಾಗಿ ಸಂಘಟಿತವಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಾಸಕರಿಗೆ ಖಡಕ್ ಸಂದೇಶ ನೀಡಬೇಕಾದ ಅನಿವಾರ್ಯತೆ ಅವರ ಮೇಲಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಪರವಾಗಿ ಚಲಾವಣೆಯಾಗಬೇಕಿದ್ದ ಮತಗಳು ಅನ್ಯ ಅಭ್ಯರ್ಥಿಗಳ ಪಾಲಾಗಿವೆ.
ವರದಿಗಳ ಪ್ರಕಾರ, ಬಿಜೆಪಿಯ ಸುಮಾರು 4-5 ಮತಗಳು ಮತ್ತು ಜೆಡಿಎಸ್‌ನ ಸುಮಾರು 6-7 ಮತಗಳು ಅಡ್ಡ ಮತದಾನವಾಗಿವೆ ಎಂದು ಅಂದಾಜಿಸಲಾಗಿದೆ. ಈ ಅಡ್ಡ ಮತದಾನದಿಂದ ಮೈತ್ರಿಕೂಟಕ್ಕೆ ಮುಜುಗರ ಉಂಟಾಗಿದ್ದು, ಕಾಂಗ್ರೆಸ್ ತನ್ನ ತಂತ್ರಗಾರಿಕೆಯಲ್ಲಿ ಯಶಸ್ವಿಯಾಗಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ. ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಅಡ್ಡ ಮತದಾನ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಇಂತಹ ಕೃತ್ಯವನ್ನು ಎಸಗಿದ ಶಾಸಕರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಪಕ್ಷದ ಮೀರ್ ಸಾಧಿಕ್‌ಗಳ (ದ್ರೋಹ ಬಗೆದವರ) ವಿರುದ್ಧ ಕ್ರಮ ಖಚಿತ ಎಂದು ಅವರು ಎಚ್ಚರಿಸಿದ್ದಾರೆ. ಯಾರು, ಏಕೆ ಅಡ್ಡ ಮತದಾನ ಮಾಡಿದ್ದಾರೆ ಎಂಬ ಬಗ್ಗೆ ಪಕ್ಷದ ಮಟ್ಟದಲ್ಲಿ ಸಮಗ್ರ ಪರಿಶೀಲನೆ ನಡೆಸಲಾಗುತ್ತಿದೆ.
ಈ ಪ್ರಕರಣದ ಸಂಪೂರ್ಣ ವಿವರಗಳನ್ನು ಬಿಜೆಪಿ ರಾಷ್ಟಿçÃಯ ಅಧ್ಯಕ್ಷರಿಗೆ ಸಲ್ಲಿಸಲು ವಿಜಯೇಂದ್ರ ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯ, ವಿಜಯೇಂದ್ರ ಅವರು ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ಭರವಸೆ ನೀಡಿದ್ದಾರೆ. ಅಡ್ಡ ಮತದಾನ ಮಾಡಿದ ಶಾಸಕರ ಮೇಲೆ ಪಕ್ಷವು ಯಾವ ರೀತಿಯ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವಿಜಯೇಂದ್ರ ಅವರ ಮುಂದಿರುವ ಅತಿ ದೊಡ್ಡ ಸವಾಲು ಎಂದರೆ, ಭಿನ್ನಮತೀಯ ಶಾಸಕರನ್ನು ಮತ್ತು ಪಕ್ಷದ ಸಂಘಟನೆಯನ್ನು ಸಮತೋಲನದಲ್ಲಿ ಕೊಂಡೊಯ್ಯುವುದು. ಅಡ್ಡ ಮತದಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವರೇ ಅಥವಾ ಪಕ್ಷದ ಹಿತದೃಷ್ಟಿಯಿಂದ ಎಚ್ಚರಿಕೆ ನೀಡಿ ಸುಮನಾಗುವರೇ ಎಂಬುದು ಅವರ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಹಿರಿಯ ನಾಯಕರು ಮತ್ತು ತಮ್ಮ ಆಪ್ತ ವಲಯದ ನಡುವಿನ ಕಂದಕವನ್ನು ಮುಚ್ಚುವುದು ವಿಜಯೇಂದ್ರರಿಗೆ ಅನಿವಾರ್ಯವಾಗಿದೆ. ಮುಂಬರುವ ದಿನಗಳಲ್ಲಿ ಪಕ್ಷವನ್ನು ಒಗ್ಗಟ್ಟಾಗಿ ಮುನ್ನಡೆಸುವ ಮೂಲಕ, ಹೈಕಮಾಂಡ್ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾದ ಒತ್ತಡ ಅವರ ಮೇಲಿದೆ.
ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸಮನ್ಸ್ : ಹೈ ಕಮಾಂಡ್ ಬುಲಾವೋ
ಅಡ್ಡಮತದಾನದ ಹಿಂದಿನ ವಾಸ್ತವಾಂಶಗಳು, ಯಾವ ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ ಎಂಬಿತ್ಯಾದಿ ವಿಷಯಗಳ ಬಗ್ಗೆ ವರಿಷ್ಠರು ಮಾಹಿತಿ ಪಡೆಯಲಿದ್ದಾರೆ. ಇದರ ಆಧಾರದ ಮೇಲೆ ಮುಂದಿನ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಪಕ್ಷದ ಹೈಕಮಾಡ್ ಪಕ್ಷದಲ್ಲಿ ಶಿಸ್ತನ್ನು ಮರುಸ್ಥಾಪಿಸುವ ಮತ್ತು ಅಡ್ಡಮತದಾನ ಮಾಡಿದವರ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳುವ ಸಂದೇಶವನ್ನು ನೀಡಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ವಿಷಯವು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಈ ಸಂಬAಧ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸಮನ್ಸ್ ನೀಡಿತ್ತು. ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಬಗ್ಗೆ ವಿವರಣೆ ನೀಡಲು ಹಾಗೂ ಈ ಹಿನ್ನಡೆಗೆ ಕಾರಣಗಳನ್ನು ವಿವರಿಸಲು, ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ನಿತಿನ್ ನಬಿನ್ ಅವರು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರಿಗೆ ದೆಹಲಿಗೆ ಬರುವಂತೆ ಸೂಚಿಸಿದ್ದರು.









