ಸಿಇಸಿ ರಾಜೀನಾಮೆಗೆ ಸಿಜೆಪಿ ಪಟ್ಟು : ದೇಶಾದ್ಯಂತ ಹೋರಾಟದ ಎಚ್ಚರಿಕೆ – ಎಸ್‌ಐಆರ್ ವಿರುದ್ಧ ರಣಕಹಳೆ

ಬೆಂಗಳೂರು: ದೇಶದಲ್ಲಿ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಗಳು ಬಿರುಸಾಗಿದ್ದು, ದೆಹಲಿ ನಂತರ ಕಾಕ್ರೋಚ್ ಜನತಾ ಪಕ್ಷ ಬೆಂಗಳೂರಿನಲ್ಲಿ ಕೇಂದ್ರ ಚುನಾವಣಾ ಮುಖ್ಯ ಆಯುಕ್ತರ ರಾಜೀನಾಮೆ, ಎಸ್‌ಐಆರ್ ರದ್ಧತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿತು.

ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಜನತಾ ನ್ಯಾಯಾಲಯ ಹೆಸರಿನಲ್ಲಿ ಸಿಜೆಪಿ ನೇತೃತ್ವದಲ್ಲಿ ಈ ಬೃಹತ್ ಪ್ರತಿಭಟನೆ ನಡೆದಿದೆ. ದೇಶದಲ್ಲಿ ನಡೆದಿರುವ ಎಸ್‌ಐಆರ್ ರದ್ದು ಪಡಿಸಬೇಕು. ಎಸ್‌ಐಆರ್ ಅಕ್ರಮ ಆರೋಪ ಹೊತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಈ ಪ್ರತಿಭಟನೆ ನಡೆಸಿತು.

ಎರಡು ದಿನಗಳ ಹಿಂದೆಯಷ್ಟೇ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದ ಸಿಜೆಪಿ ಈಗ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ದೇಶಾದ್ಯಂತ ಸಿಇಸಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಮುಂದಾಗಿದೆ.

ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಜಸ್ಟಿಸ್ ಗೋಪಾಲಗೌಡರ ಸಮ್ಮುಖದಲ್ಲಿ ಜನತಾ ನ್ಯಾಯಾಲಯ ಕಾರ್ಯಕ್ರಮವೂ ನಡೆಯಿತು.ಕಾರ್ಯಕ್ರಮದಲ್ಲಿ ಎಸ್‌ಐಆರ್ ಸಂತ್ರಸ್ತರ ಅಹವಾಲು ಆಲಿಕೆಗೂ ವೇದಿಕೆ ಕಲ್ಪಿಸಿ ಅವರ ಅಹವಾಲು ಆಲಿಸಿ ತೀರ್ಪು ನೀಡಿದ್ದು ಎಲ್ಲರ ಗಮನ ಸೆಳೆಯಿತು.

ಹಲವು ಜಿಲ್ಲೆಗಳಿಂದ ಯುವಸಮೂಹ ಆಗಮನ : ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ ಯುವಕ-ಯುವತಿಯರು ಹಾಗೂ ಎಸ್‌ಆರ್‌ಐನಿಂದ ಮತದಾನದ ಹಕ್ಕು ಕಳೆದುಕೊಂಡಿದ್ದೇವೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ಯೂಟ್ಯೂಬರ್ ಧ್ರುವ ರಾಠಿ ಸೇರಿದಂತೆ ಹಲವು ಗಣ್ಯರು ಆಗಮಿಸುತ್ತಿದ್ದಂತೆ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಿದರು. ಎಸ್‌ಐಆರ್‌ನಿಂದ ಕೋಟ್ಯಂತರ ಮತದಾರರ ಮೇಲೆ ಪರಿಣಾಮ ಬೀರಿದೆ.ಬುಡಕಟ್ಟು ಜನರು, ಮುಸ್ಲಿಮರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ತೆಗೆದುಹಾಕುವ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು.

ನಮಗೆ ಬೇಕಾಗಿರುವುದು ಎಸ್‌ಐಆರ್ ಸಂಪೂರ್ಣ ರದ್ದಾಗಬೇಕು. ಜ್ಞಾನೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ, ಅವರ ಹಿಂದೆ ಯಾರಿದ್ದಾರೆ ಎಂಬುದನ್ನು ತನಿಖೆ ಮೂಲಕ ಹೊರಗೆ ತರಬೇಕು. ಜ್ಞಾನೇಶ್ ಕುಮಾರ್ ಹೋದರೆ ಮತ್ತೊಬ್ಬರು ಬರುತ್ತಾರೆ.ಆದರೆ ನಮ್ಮ ಬೇಡಿಕೆ ವ್ಯಕ್ತಿಯ ಬದಲಾವಣೆ ಮಾತ್ರವಲ್ಲ.ಎಸ್‌ಐಆರ್ ಪ್ರಕ್ರಿಯೆಯೇ ಸಂಪೂರ್ಣ ರದ್ದಾಗಬೇಕು ಎಂದು ಹೇಳಿದರು.

ಇಲ್ಲಿ ಯಾರೂ ಯಾವುದೇ ರಾಜಕೀಯ ಪಕ್ಷದ ಪರವಾಗಿ ಬಂದಿಲ್ಲ.ಇದು ನಮ್ಮ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟ. ನಾವು ಶಾಂತಿಯುತವಾಗಿ ಹೋರಾಟ ಮುಂದುವರಿಸುತ್ತೇವೆ. ಎಸ್‌ಐಆರ್ ನಿಂದ ಅನ್ಯಾಯವಾಗಿದೆ ಎಂದು ಹೇಳುತ್ತಿರುವ ಮತದಾರರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದೇವೆ. ಅವರ ಅನುಭವಗಳನ್ನು ಜನರ ಮುಂದಿಡಬೇಕಿದೆ ಎಂದು ಹೇಳಿದರು.

ಇಂದು ನಡೆಯುತ್ತಿರುವ ಹೋರಾಟ ಒಂದು ಸ್ಯಾಂಪಲ್ ಅಷ್ಟೇ. ಎಸ್‌ಐಆರ್ ರದ್ದಾಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಪ್ರಕಾಶ್ ರಾಜ್ ತಿಳಿಸಿದರು.

ರಾಜೀನಾಮೆಗೆ ಆಗ್ರಹ: ಸಿಜೆಪಿ ಪಕ್ಷದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಸಿಜೆಪಿ ನಾಯಕರುಗಳು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ರಾಜೀನಾಮೆ ನೀಡಬೇಕು ಹಾಗೂ ಎಸ್‌ಐಆರ್ ರದ್ದುಪಡಿಸಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು.

ದೆಹಲಿಯಲ್ಲಿ ಈಗಾಗಲೇ ಪ್ರತಿಭಟನೆ ನಡೆಸಿದ್ದೇವೆ. ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದಿದೆ. ಮುಂದೆ ದೇಶದ ವಿವಿಧೆಡೆ ಸಿಜೆಪಿ ಪ್ರತಿಭಟನೆ ನಡೆಸಲಿದೆ. ಸಿಇಸಿ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲದು ಎಂದು ಘೋಷಿಸಿದರು.

ಬಿಗಿ ಬಂದೋಬಸ್ತ್ :

ಸಿಜೆಪಿ ಪಕ್ಷದ ಪ್ರತಿಭಟನೆ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ ಸುತ್ತ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಸಿಜೆಪಿ ನಡೆಸಿರುವ ಈ ಪ್ರತಿಭಟನೆಯಲ್ಲಿ ನೂರಾರು ಯುವಕರು ಭಾಗಿಯಾಗಿರುವ ಈ ಹಿನ್ನೆಲೆಯಲ್ಲಿ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಸಿಜೆಪಿ ನಡೆಸಿರುವ ಈ ಪ್ರತಿಭಟನೆಯಲ್ಲಿ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ಸೌರವ್ ದಾಸ್, ಅಸಂತೋಷ್ ರಾಂಕ, ಖ್ಯಾತ ಯೂಟೂಬರ್ ದ್ರುವರಾಟಿ, ಜನತಾ ನ್ಯಾಯಾಲಯದ ಬ್ಯಾನರ್ ಅಡಿ ನಡೆದಿರುವ ಈ ಪ್ರತಿಭಟನೆಯಲ್ಲಿ ಸಿಜೆಪಿ ನಾಯಕರ ಜತೆ ಖ್ಯಾತ ಚಿತ್ರನಟ ಪ್ರಕಾಶ್‌ರಾಜ್, ದೇವನೂರು ಮಹದೇವ, ಖ್ಯಾತ ಆರ್ಥಿಕ ತಜ್ಞ ಪರಕಾಲ ಪ್ರಭಾಕರನ್, ಸೇರಿದಂತೆ ಕೆಲವು ನಿವೃತ್ತ ನ್ಯಾಯಾಧೀಶರು ಪಾಲ್ಗೊಂಡಿದ್ದಾರೆ.

ಬಾಕ್ಸ್
ಎಸ್‌ಐಆರ್ ರದ್ದತಿಗೆ ಪ್ರಕಾಶ್ ರಾಜ್ ಆಗ್ರಹ
ಪ್ರತಿಭಟನೆಯಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್,ಇದು ಕೇವಲ ಮತ ಕಳೆದುಕೊಂಡ ವಿಚಾರವಲ್ಲ, ಪ್ರತಿಯೊಬ್ಬ ಪ್ರಜೆಯ ಗೌರವದ ಪ್ರಶ್ನೆಯಾಗಿದೆ. ಚುನಾವಣೆ ಬಂದಾಗ ಮತ ಕೇಳಲು ಜನರ ಮನೆ ಬಾಗಿಲಿಗೆ ರಾಜಕಾರಣಿಗಳು ಬರುತ್ತಾರೆ. ಆದರೆ ಈಗ ಮತದಾರರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಕಚೇರಿಗಳ ಸುತ್ತ ಓಡಾಡುವ ಪರಿಸ್ಥಿತಿ ಬಂದಿದೆ. ನಮ್ಮ ಮತವನ್ನು ಅಳಿಸಲು ಇವರು ಯಾರು? ಎಂದು ಪ್ರಶ್ನಿಸಿದರು.

ಬಾಕ್ಸ್
ವೋಟ್ ಚೋರ್ ಪ್ರಧಾನಿ ಮೋದಿ
ಪ್ರಧಾನಿ ವೋಟ್ ಚೋರ್ (ಮತ ಕಳ್ಳ). ಮತಗಳನ್ನು ಅಳಿಸಿ ಪ್ರಧಾನಿಯಾಗಿದ್ದಾರೆ. ಮತಗಳನ್ನು ಅಳಿಸುವ ಮೂಲಕ ದೇಶದ ಪ್ರಜಾಪ್ರಭುತ್ವದ ಸಾವಿಗೆ ಕಾರಣರಾಗಿದ್ದಾರೆ. ಇದರ ಹಂತಕ ನರೇಂದ್ರ ಮೋದಿ ದೇಶದಲ್ಲಿ ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಜನರು ಎಚ್ಚೆತ್ತುಕೊಂಡು ಹೋರಾಟಕ್ಕೆ ಮುಂದಾಗಬೇಕು ಎಂದು ಸಾಮಾಜಿಕ ಹೋರಾಟಗಾರ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಕರೆ ನೀಡಿದರು.

ಬಾಕ್ಸ್
ಪ್ರಜಾಪ್ರಭುತ್ವವನ್ನು ಸಾಯಲು ಬಿಡೆವು
ನಾವು ಪ್ರಸ್ತುತ ದೇಶದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದೇವೆ. ದೇಶದ ಬೆನ್ನೆಲುಬನ್ನು ಮುರಿಯಲು ಮತ್ತು ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಿತ್ತುಕೊಳ್ಳಲು ಸರ್ಕಾರ ಯತ್ನಿಸುತ್ತಿದ್ದು, ಇದನ್ನು ನಾವ್ಯಾರೂ ಸಹಿಸುವುದಿಲ್ಲ? ಎಂದು ಎಐಎಸ್‌ಎಫ್ ನಾಯಕಿ ಆಯಿಷಾ ಘೋಷ್ ಆಕ್ರೋಶ ಹೊರಹಾಕಿದ್ದಾರೆ.

ಬಾಕ್ಸ್

ಮೋದಿ, ಶಾ ಉತ್ತರಿಸಲಿ
ಸಾಮಾಜಿಕ ವಿಶ್ಲೇಷಕ ಧ್ರುವ್ ರಾಠಿ ಮಾತನಾಡಿ ದೇಶದಲ್ಲಿ ಮತದಾರರ ಪಟ್ಟಿಯಲ್ಲಿ ಬೃಹತ್ ಪ್ರಮಾಣದ ಅಕ್ರಮಗಳು ನಡೆಯುತ್ತಿವೆ ಎಂಬುದಕ್ಕೆ ಮೂರು ಪ್ರಮುಖ ಸಾಕ್ಷ÷್ಯಗಳನ್ನು ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಇದಕ್ಕೆ ಉತ್ತರಿಸಬೇಕು. ಮೊದಲನೆಯದಾಗಿ, ಪಶ್ಚಿಮ ಬಂಗಾಳದಲ್ಲಿ ಆರಂಭಿಕ ಪಟ್ಟಿಯಲ್ಲಿದ್ದ ಸುಮಾರು ೭೦ ಲಕ್ಷ ಜನರ ಹೆಸರುಗಳನ್ನು ಚುನಾವಣೆಯ ಸಮಯದಲ್ಲಿ ಮತದಾರರ ಪಟ್ಟಿಯಿಂದ ಏಕಾಏಕಿ ತೆಗೆದುಹಾಕಿ, ಚುನಾವಣೆ ಮುಗಿದ ನಂತರ ಮತ್ತೆ ಸೇರಿಸಲಾಯಿತು. ಎರಡನೆಯದಾಗಿ, ಬಿಹಾರದಲ್ಲಿ ೭೫ ಲಕ್ಷ ಜನರ ಹೆಸರುಗಳನ್ನು ತೆಗೆದುಹಾಕಲಾಯಿತು. ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡುವವರೆಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲಿಲ್ಲ. ಮೂರನೆಯದಾಗಿ, ಲಕ್ಷಾಂತರ ಹೊಸ ಹೆಸರುಗಳನ್ನು ಅನಾಮಧೇಯವಾಗಿ ಸೇರಿಸಲಾಗಿದ್ದು, ಯಾರ ಹೆಸರುಗಳನ್ನು ತೆಗೆದುಹಾಕಲಾಗಿದೆ ಮತ್ತು ಯಾರ ಹೆಸರುಗಳನ್ನು ಸೇರಿಸಲಾಗಿದೆ ಎಂಬುದರ ವಿವರಗಳನ್ನೇ ಬಹಿರಂಗಪಡಿಸಿಲ್ಲ ಎಂದು ಆರೋಪಿಸಿದರು. ಗೋವಾದಲ್ಲಿ ಸಣ್ಣಮಟ್ಟದ ಹೆಸರಿನ ತಿದ್ದುಪಡಿಯನ್ನು ಸರಿಯಾಗಿ ಮಾಡಲು ಸಹ ಸಹಾಯಕ ಚುನಾವಣಾಧಿಕಾರಿಗೆ ಸಾಧ್ಯವಾಗಿಲ್ಲ, ಆಯೋಗ ತನಗೆ ತೋಚಿದಂತೆ ನಡೆದುಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Recent Articles

spot_img

Related Stories

Share via
Copy link