ಹಾಸನ: ಮೀನು ಹಿಡಿಯಲು ಹೋಗಿದ್ದ ಇಬ್ಬರು – ದುರಂತಗಳಲ್ಲಿ ಐವರು ಸಾವು

ಹಾಸನ: ಮೀನು ಹಿಡಿಯಲು ತೆರಳಿದ್ದ ಇಬ್ಬರು, ಮ್ಯಾನ್‌ಹೋಲ್‌ಗೆ ಬಿದ್ದು ಓರ್ವ, ಬೈಕ್ ಹಾಗೂ ಸಾರಿಗೆ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಮತ್ತಿಬ್ಬರು ಸೇರಿ ಜಿಲ್ಲೆಯ ವಿವಿಧೆಡೆ ಸಂಭವಿಸಿದ ದುರಂತಗಳಲ್ಲಿ ಒಟ್ಟು ಐವರು ಮೃತಪಟ್ಟಿದ್ದಾರೆ.

ಘಟನೆ 1: ಮೀನು ಹಿಡಿಯಲು ತೆರಳಿದ್ದ ಇಬ್ಬರು ವ್ಯಕ್ತಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹಾಸನ ತಾಲೂಕಿನ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ನಡೆದಿದೆ. ಮೃತರನ್ನು ಸಿಡ್ಲು ಹೊಸಳ್ಳಿ ಗ್ರಾಮದ ಪರಮೇಶ್ (43) ಹಾಗೂ ಹಿರಗನಹಳ್ಳಿ ಗ್ರಾಮದ ಪುಟ್ಟರಾಜು (45) ಎಂದು ಗುರುತಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಗುರುವಾರ ಸಂಜೆ ಇಬ್ಬರೂ ಮೀನು ಹಿಡಿಯಲು ಹೇಮಾವತಿ ಜಲಾಶಯದ ಹಿನ್ನೀರಿಗೆ ತೆರಳಿದ್ದರು. ರಾತ್ರಿ ವೇಳೆಯೂ ಮೀನು ಹಿಡಿಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.

ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಒಂದು ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ. ಪುಟ್ಟರಾಜು ಮೃತ ದೇಹಕ್ಕಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳೀಯ ಈಜುಗಾರರ ಸಹಾಯದಿಂದ ಹುಡುಕಾಟ ನಡೆಸುತ್ತಿದ್ದಾರೆ.

ಗ್ರಾಮಸ್ಥರು ಹಾಗೂ ಕುಟುಂಬಸ್ಥರಲ್ಲಿ ತೀವ್ರ ದುಃಖ ಮೂಡಿಸಿದೆ. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ 2: ಮ್ಯಾನ್‌ಹೋಲ್‌ಗೆ ಬಿದ್ದ ಮೇಕೆಯನ್ನು ರಕ್ಷಿಸಲು ಹೋದ ಯುವಕನೋರ್ವ ಅದೇ ಮ್ಯಾನ್‌ಹೋಲ್‌ಗೆ ಬಿದ್ದು ಮೃತಪಟ್ಟಿರುವ ಘಟನೆ ಹೊಳೆನರಸೀಪುರ ತಾಲೂಕಿನ ಮಲ್ಲಪ್ಪಹಳ್ಳಿ ಗ್ರಾಮದ ಸಮೀಪದ ಖಾಸಗಿ ಲೇಔಟ್‌ನಲ್ಲಿ ನಡೆದಿದೆ. ಪಟ್ಟಣದ ಹೊರವಲಯದಲ್ಲಿರುವ ಶ್ರೀ ಎಣ್ಣೆ ಹೊಳೆ ರಂಗನಾಥಸ್ವಾಮಿ ಲೇಔಟ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಗಿರೀಶ್ (30) ಮೃತಪಟ್ಟ ದುರ್ದೈವಿ ಯುವಕ.

ಏನಿದು ಘಟನೆ?: ರಂಗನಾಥಸ್ವಾಮಿ ಲೇಔಟ್‌ನೊಳಗೆ ಸುಮಾರು 30 ಅಡಿ ಆಳದ ಮ್ಯಾನ್‌ಹೋಲ್ ಇದ್ದು, ಗಿರೀಶ್ ಮೇಕೆಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಒಂದು ಮೇಕೆ ಆಕಸ್ಮಿಕವಾಗಿ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದಿದೆ. ಇದನ್ನು ಗಮನಿಸಿದ ಗಿರೀಶ್, ಮೇಕೆಯನ್ನು ಹೇಗಾದರೂ ಮಾಡಿ ರಕ್ಷಿಸಬೇಕೆಂಬ ಉದ್ದೇಶದಿಂದ ಮ್ಯಾನ್‌ಹೋಲ್ ಒಳಗೆ ಇಳಿದಿದ್ದಾನೆ. ಆದರೆ, ದುರದೃಷ್ಟವಶಾತ್ ಆಯತಪ್ಪಿ ಮ್ಯಾನನ್​ಹೋಲ್‌ಗೆ ಬಿದ್ದ ಪರಿಣಾಮ ಕೊಳಚೆ ನೀರು ತುಂಬಿ ಹರಿಯುತ್ತಿದ್ದ ಆಳವಾದ ಮ್ಯಾನ್‌ಹೋಲ್‌ನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.

ಯುವಕನ ಸಾವಿನಿಂದ ಕುಟುಂಬಸ್ಥರು ಕಂಗಾಲಾಗಿದ್ದು, ಮ್ಯಾನ್‌ಹೋಲ್‌ನ್ನು ಮುಚ್ಚದೆ ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿರುವ ಲೇಔಟ್ ಮಾಲೀಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೂಕ್ತ ಸುರಕ್ಷತಾ ಕ್ರಮ ಕೈಗೊಂಡಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತು ಎಂದು ಕುಟುಂಬಸ್ಥರು ಅಸಮಾಧಾನ ಹೊರಹಾಕಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ 3: ಬೈಕ್‌ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ವೈಭವ್ ಲೇಔಟ್ ಸಮೀಪ ನಡೆದಿದೆ.

ಹಾಸನ ಮೂಲದ ವಿನಾಯಕ (30) ಹಾಗೂ ಹಿಂಬದಿ ಸವಾರ ಸುನಿಲ್ (25) ಮೃತರು. ವಿನಾಯಕ ಜೆಸಿಬಿ ಮೆಕ್ಯಾನಿಕ್ ಆಗಿದ್ದು, ಇಬ್ಬರು ಬೈಕ್‌ನಲ್ಲಿ ಬಾಳ್ಳುಪೇಟೆಯಿಂದ ಸಕಲೇಶಪುರದತ್ತ ತೆರಳುತ್ತಿದ್ದರು. ಈ ವೇಳೆ, ಅಪಘಾತ ಸಂಭವಸಿದೆ.

ವಿನಾಯಕ ಸ್ಥಳದಲ್ಲಿಯೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಸುನಿಲ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recent Articles

spot_img

Related Stories

Share via
Copy link