ನವದೆಹಲಿ
ನಮ್ಮ ಭಾರತ ದೇಶದ 72ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿರುವ ನಾಗರಿಕರಿಗೆ ಈ ಬಾರಿ ಆರೋಗ್ಯ ಸುರಕ್ಷಾ ಯೋಜನೆ ಜಾರಿ ಮಾಡುವ ಬಗ್ಗೆ ಮೋದಿಜಿ ಘೋಷಣೆ ಮಾಡಿ ಇನ್ನಷ್ಟು ಸಂತಸ ತಂದು ಕೊಟ್ಟಿದ್ದಾರೆ.
ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ , ದೇಶದ ಹಲವೆಡೆ ಮಳೆಯ ಅತೀವೃಷ್ಠಿಯಿಂದ ಜೀವ ನಷ್ಟವಾಗಿರುವುದಕ್ಕೆ ಸಂತಾಪ ಸೂಚಿಸಿದರು. ನಂತರ ನಮ್ಮ ದೇಶದ ಭದ್ರತೆಗೆ ಹೋರಾಡುತ್ತಾ ವೀರ ಮರಣ ಹೊಂದಿಗೆ ಸೈನಿಕರನ್ನು ಸ್ಮರಿಸಿ, ನಮ್ಮ ತ್ರಿವರ್ಣ ಧ್ವಜ ಎತ್ತರಕ್ಕೆ ಹಾರಾಡಲು ಸೈನಿಕರೇ ಕಾರಣ ಎಂದು ಸೇನೆಯನ್ನು ನೆನೆಪಿಸಿಕೊಂಡರು.
ಭಾಷಣ ಮುಂದುವರೆಸಿದ ಮೋದಿಜಿ, ದೇಶದ ಆರ್ಥಿಕತೆ ಬಗ್ಗೆ ಭರವಸೆ ಇರುವ ಸನ್ನಿವೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತಿದ್ದೇವೆ. ಈಗ ಭಾರತವು ವಿಶ್ವದ ಆರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ನೂರಾ ಇಪ್ಪತ್ತೈದು ಕೋಟಿ ಜನ ನಿರ್ಧಾರ ಮಾಡಿದರೆ ಎಲ್ಲವೂ ಸಾಧ್ಯವಿದೆ. 2014ರಲ್ಲಿ ಜನರು ಸರಕಾರ ರಚಿಸಲು ತೀರ್ಮಾನಿಸಲಿಲ್ಲ. ಅವರು ದೇಶ ನಿರ್ಮಾಣದ ನಿರ್ಧಾರ ಮಾಡಿದ್ದರು. ಹಾಗಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. 2014ರ ನಂತರ ದೇಶವು ತೀವ್ರ ವೇಗದಲ್ಲಿ ಅಭಿವೃದ್ಧಿ ಆಗಿದೆ. ಶೌಚಾಲಯ ನಿರ್ಮಾಣ, ಗ್ರಾಮೀಣ ಭಾಗಕ್ಕೆ ವಿದ್ಯುತ್ ಸಂಪರ್ಕ, ಅಡುಗೆ ಅನಿಲ ಸಂಪರ್ಕ…ಇವೆಲ್ಲದರಲ್ಲೂ ಅಭಿವೃದ್ಧಿ ಕಂಡಿದೆ ಎಂದರು.
ಕಪ್ಪು ಹಣದ ನಿರ್ನಾಮ ಮಾಡಲು ನಾವು ಬದ್ಧರಾಗಿದ್ದೇವೆ. ಅದಕ್ಕಾಗಿ ನಾವು ಕಾನೂನು ತಂದಿದ್ದೇವೆ. ಆರ್ಥಿಕ ಅಪರಾಧಗಳ ಕಾಯ್ದೆ ತಂದಿದ್ದೇವೆ. ನಾವು ಬೇನಾಮಿ ಆಸ್ತಿಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ. ನಾವು ಸಾಧಿಸಿದ್ದರ ಬಗ್ಗೆ ಹೆಮ್ಮೆ ಇದೆ.
ಇದೇ ವೇಳೆ ನಾವು ಎಲ್ಲಿಂದ ಬಂದಿದ್ದೇವೆ ಅನ್ನೋದನ್ನು ನೋಡಬೇಕು. ಒಂದು ಕಾಲವಿತ್ತು, ಭಾರತದ ಆರ್ಥಿಕತೆ ಬಹಳ ಅಪಾಯಕಾರಿ ಎಂದು ನೋಡುತ್ತಿದ್ದರು. ಈಗ ಅದೇ ಜನರು ಸಕಾರಾತ್ಮಕವಾಗಿ ಕಾಣುತ್ತಿದ್ದಾರೆ. ಉದ್ಯಮಿಸ್ನೇಹಿ ವಾತಾವರಣ ನಿರ್ಮಾಣದ ಶ್ರೇಯಾಂಕದಲ್ಲಿ ಮೇಲಕ್ಕೆ ಏರಿದ್ದೇವೆ. ಈಶಾನ್ಯ ಭಾರತದ ಜನರು ದೆಹಲಿಯು ಬಹಳ ದೂರ ಇದೆ ಎಂಬ ಭಾವದಲ್ಲಿದ್ದರು. ನಾವು ದೆಹಲಿಯನ್ನು ಅವರ ಬಳಿಗೆ ತೆಗೆದುಕೊಂಡು ಹೋಗಿದ್ದೇವೆ
ಇಂದು ನಾನು ಘೋಷಣೆ ಮಾಡುತ್ತಿದ್ದೇನೆ 2022ಕ್ಕೂ ಮುನ್ನ ಭಾರತೀಯರು ಬಾಹ್ಯಾಕಾಶದಲ್ಲಿ ಇರುತ್ತಾರೆ. ನಮ್ಮಲ್ಲಿ ಒಬ್ಬರು ತ್ರಿವರ್ಣ ಧ್ವಜವನ್ನು ತೆಗೆದುಕೊಂಡು ಹೋಗುತ್ತಾರೆ. ಅದು ನಮ್ಮದೇ ಯೋಜನೆಯಾಗಿರುತ್ತದೆ. 2022ರಲ್ಲಿ ಮಾನವ ಸಹಿತ ಮಂಗಳಯಾನದ ಮಾಡಲಿದ್ದೇವೆ ಎಂದು ಘೋಷಣೆ ಮಾಡಿದರು.
ಕೃಷಿ ವಲಯದಲ್ಲಿ ಯೋಜನಾಬದ್ಧವಾಗಿ ಪ್ರಗತಿ ಸಾಧಿಸುತ್ತಿದ್ದೇವೆ. ನಾವು ರೂಪಿಸಿದ ನೀತಿಗಳಿಂದ ನಿಜವಾಗಿಯೂ ರೈತರಿಗೆ ಅನುಕೂಲವಾಗಿದೆ. ಬಾಪೂ ಖಾದಿಗೆ ಒತ್ತು ನೀಡಿದ್ದರು. ಈ ಹಿಂದೆಂದಿಗಿಂತ ಖಾದಿ ರಫ್ತು ಹೆಚ್ಚಾಗಿದೆ. ಸೌರಶಕ್ತಿ ಬಳಸಿಕೊಂಡು ಕೃಷಿ ಮಾಡುವ ಬಗ್ಗೆ ರೈತರು ಆಲೋಚನೆ ಮಾಡುತ್ತಿದ್ದಾರೆ ಎಂದರು.
ಮೊದಲ ಬಾರಿಗೆ ಸ್ವಚ್ಛ ಭಾರತದ ಬಗ್ಗೆ ಮಾತನಾಡಿದಾಗ ನನ್ನ ಬಗ್ಗೆ ತಮಾಷೆ ಮಾಡಿದ್ದರು. ಈಗ ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದಂತೆ ಸ್ವಚ್ಛ ಭಾರತ ಯೋಜನೆಯಿಂದಾಗಿ ಪರಿಸ್ಥಿತಿ ಬದಲಾವಣೆಯಾಗಿದೆ. ಮೂರು ಲಕ್ಷದಷ್ಟು ಮಕ್ಕಳ ಜೀವ ಉಳಿದಿದೆ. ಮಹಾತ್ಮ ಗಾಂಧಿ ಸ್ವಚ್ಛತೆ ಬಗ್ಗೆ ಒತ್ತು ನೀಡಿದ್ದರು. ದೇಶ ಸ್ವಚ್ಛ ಇರುವುದನ್ನು ಖಾತ್ರಿ ಪಡಿಸಿ ಬಾಪೂ ನೂರಾಐವತ್ತನೇ ಜನ್ಮ ವರ್ಷಾಚರಣೆಗೆ ನಾವು ಕೊಡುಗೆ ನೀಡಬೇಕಿದೆ.
ಜನರ ಆರೋಗ್ಯ ದೃಷ್ಠಿಯಿಂದ ಆಯುಷ್ಮಾನ್ ಭಾರತ ಆರೋಗ್ಯ ಸುರಕ್ಷೆ ಯೋಜನೆ ಪ್ರಧಾನಿ ಘೋಷಣೆ ಮಾಡಿದರು. ಈ ಹಿಂದೆ ಹಲವು ಯೋಜನೆಗಳು ಆರಂಭವಾಗಿವೆ. ಆದರೆ ಅವು ಜನರನ್ನು ತಲುಪಿಲ್ಲ. ಅಲ್ಲಿ ಮಧ್ಯವರ್ತಿಗಳು ಬಡವರ ಪಾಲಿನ ಅನುಕೂಲವನ್ನು ಪಡೆದುಕೊಂಡಿದ್ದಾರೆ. ಸರಕಾರದ ಯೋಜನೆಗಳು ಬಡವರನ್ನು ತಲುಪುವುದರಲ್ಲಿ ಅಡೆತಡೆಗಳಿದ್ದವು. ನಾವು ಅದನ್ನು ನಿವಾರಿಸಿ ಎಲ್ಲಾ ಯೋಜನೆಗಳು ಬಡವರಿಗೆ ತಲುಪುವಂತೆ ಮಾಡಿದ್ದೇವೆ. ಆರೋಗ್ಯ ಸುರಕ್ಷೆ ಯೋಜನೆಯು ಐವತ್ತು ಕೋಟಿ ಭಾರತೀಯರಲ್ಲಿ ಸಕಾರಾತ್ಮಕ ಪ್ರಭಾವ ಬೀರಲಿದೆ. ಬಡತನದ ಕಾರಣಕ್ಕೆ ಆರೋಗ್ಯ ಸುರಕ್ಷೆ ಪಡೆಯಲಾಗದ ಬಡವರಿಗೆ ಇದರಿಂದ ಅನುಕೂಲ ಆಗಲಿದೆ ಎಂದಿದ್ದಾರೆ.
ಪ್ರಾಮಾಣಿಕ ತೆರಿಗೆದಾರರ ಹಣವನ್ನು ಜನ ಕಲ್ಯಾಣ ಯೋಜನೆಗೆ ಬಳಸುತ್ತಿದ್ದೇವೆ. ಒಬ್ಬ ತೆರಿಗೆದಾರ ಊಟ ಮಾಡುವಾಗ ಮನಸ್ಸಲ್ಲಿ ಅಂದುಕೊಳ್ಳಬಹುದು, ತಾನು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿರುವುದರಿಂದ ಮೂರು ಬಡ ಕುಟುಂಬಗಳು ಊಟ ಮಾಡುತ್ತಿವೆ ಎಂದು ಖುಷಿ ಪಡಬಹುದಾಗಿದೆ.
ಪ್ರಾಮಾಣಿಕ ಜನರೇ, ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಿ. ಭಷ್ಟರನ್ನು ನಾನು ಸುಮ್ಮನೆ ಬಿಡುವುದಿಲ್ಲ. ಈಗಾಗಲೇ ದೆಹಲಿ ಬೀದಿಗಳಿಂದ ರಾಜಕೀಯ ದಲ್ಲಾಳಿಗಳು ನಾಪತ್ತೆಯಾಗಿದ್ದಾರೆ. ಮಹಿಳೆಯರು ದೇಶದ ಎಲ್ಲ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಪಾರ್ಲಿಮೆಂಟ್ ನಿಂದ ಪಂಚಾಯತ್ ತನಕ ಎಲ್ಲೆಡೆ ಮಹಿಳೆಯರಿದ್ದಾರೆ. ಅತ್ಯಾಚಾರ ಪ್ರಕರಣಗಳನ್ನು ನೋಡುತ್ತಿರುವುದು ನೋವಿನ ಸಂಗತಿ. ಈ ಪ್ರಕರಣಗಳಿಂದ ದೇಶವನ್ನು ಮುಕ್ತಗೊಳಿಸಬೇಕಿದೆ. ಇಂಥ ಪೈಶಾಚಿಕ ಕೃತ್ಯ ಎಸಗುವವರನ್ನು ನಾವು ಕಠಿಣ ಶಿಕ್ಷೆಗೆ ಗುರಿಪಡಿಸುತ್ತೇವೆ. ಕಾನೂನು ಸುವ್ಯವಸ್ಥೆ ಪ್ರಬಲವಾಗಿದೆ. ತ್ವರಿತ ಗತಿಯಲ್ಲಿ ಕೋರ್ಟ್ ಕಲಾಪಗಳು ನಡೆಯುತ್ತಿವೆ. ಅದಕ್ಕೆ ಮಧ್ಯಪ್ರದೇಶದಲ್ಲಿ ನಡೆದ ಪ್ರಕರಣದ ವಿಚಾರಣೆಯೇ ನಿದರ್ಶನ.
ತ್ರಿವಳಿ ತಲಾಖ್ ಒಂದು ಸಾಮಾಜಿಕ ಪಿಡುಗು. ಇದನ್ನು ಹೋಗಲಾಡಿಸಲು ಕಾನೂನು ತಂದಿದ್ದೇವೆ. ಆದರೆ ಕೆಲವರು ವಿರೋಧಿಸಿದ್ದಾರೆ. ಆದರೆ ಈ ಕಾನೂನು ಅಂಗೀಕಾರ ಆಗುವಂತೆ ಮಾಡುತ್ತೇವೆ ಎಂದು ಮುಸ್ಲಿಂ ಸಹೋದರಿಯರಿಗೆ ಭರವಸೆ ನೀಡಿದ್ದಾರೆ ಮೋದಿ.
ತ್ರಿಪುರಾ, ಮೇಘಾಲಯ ಹಾಗೂ ಅರುಣಾಚಲ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ವಿಶೇಷ ಕಾಯ್ದೆಯನ್ನು (ಎ ಎಫ್ ಎಸ್ ಪಿಎ) ತೆಗೆದಿದ್ದೇವೆ. ಮಾವೋವಾದಿಗಳು ರಕ್ತ ಹರಿಸಿ, ಆ ನಂತರ ಓಡಿಹೋಗಿ ಕಾಡಿನಲ್ಲಿ ಅಡಗಿಕೊಳ್ಳುತ್ತಾರೆ. ಎಡಪಂಥೀಯ ಉಗ್ರವಾದದಿಂದ ನೂರಾ ಇಪ್ಪತ್ತಾರು ಜಿಲ್ಲೆಗಳು ಬಾಧೆಗೊಳಗಾಗಿದ್ದವು. ಅದೀಗ ತೊಂಬತ್ತಕ್ಕೆ ಇಳಿಕೆಯಾಗಿದೆ.
ಕೊನೆಯದಾಗಿ ನಾವು ನಿಲ್ಲುವುದಿಲ್ಲ, ಬಾಗುವುದಿಲ್ಲ, ದಣಿಯುವುದಿಲ್ಲ. ನಮ್ಮ ಗಮ್ಯವನ್ನು ನಾವೇ ಬರೆಯುತ್ತೇವೆ. ಇದು ನವ ಭಾರತ. ನಾವು ಆಗಸವನ್ನು ಮುಟ್ಟಲು ಮತ್ತು ಹೊಸ ಭಾರತವನ್ನು ಸೃಷ್ಟಿಸಲು ಬಯಸುತ್ತೇವೆ ಎಂದು ತಮ್ಮ ಭಾಷಣವನ್ನು ಮುಗಿಸಿದರು.
ಗಮನ ಸೆಳೆದ ಮೋದಿಯ ಉಡುಪು
ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರದಂದು ತಮ್ಮ ಸಾಂಪ್ರದಾಯಿಕ ದಿರಿಸು ಧರಿಸುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ತಲೆಗೆ ಕೇಸರಿ ಬಣ್ಣದ ಟರ್ಬನ್ ಸುತ್ತಿಕೊಂಡಿದ್ದ ನರೇಂದ್ರ ಮೋದಿ, ಗಮನ ಸೆಳೆದರು. ನರೇಂದ್ರ ಮೋದಿ ಪ್ರಧಾನಿಯಾಗಿ ತಮ್ಮ ಮೊದಲ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಕೇಸರಿ ಮತ್ತು ಹಸಿರು ಬಣ್ಣದ ಜೋಧ್ ಪುರಿ ಬಂಧೇಜ್ ಸಫಾ ಧರಿಸಿದ್ದರು. ಟರ್ಬನ್ ಧರಿಸುವ ಸಂಪ್ರದಾಯವನ್ನು ಆ ನಂತರದ ವರ್ಷಗಳಲ್ಲೀ ಕೂಡ ಅವರು ಮುಂದುವರಿಸಿಕೊಂಡು ಬಂದರು. ಕೆಂಪು ಮತ್ತು ಹಸಿರು ಗೆರೆಯ ಉದ್ದ ಸಫಾವನ್ನು 2015ರಲ್ಲಿ ಧರಿಸಿದ್ದರು. ಕೆಂಪು-ಗುಲಾಬಿ-ಹಳದಿ ಬಣ್ಣದ ರಾಜಸ್ತಾನಿ ಸಫಾದೊಂದಿಗೆ 2016ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ವೇಳೆ ಕಾಣಿಸಿಕೊಂಡಿದ್ದರು. 2017ರಲ್ಲಿ ಬಿಳಿ ಹಾಗೂ ಹಳದಿ- ಕೆಂಪು ಬಣ್ಣದ ಟರ್ಬನ್ ನೊಂದಿಗೆ ಪಾಲ್ಗೊಂಡಿದ್ದರು.
ಈ ಹಿಂದೆ ಮಾಡಿದ್ದ ಭಾಷಣಗಳ ಹೈಲೆಟ್ಸ್
2014ರಲ್ಲಿ ತಮ್ಮ ಮೊದಲ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ್, ಜನಧನ್ ಯೋಜನೆ, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಬಗ್ಗೆ ಪ್ರಸ್ತಾವ ಮಾಡಿದ್ದರು.
2015ರಲ್ಲಿ ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಗ್ರಾಮೀಣ ವಿದ್ಯುದ್ದೀಕರಣ, ಒಂದು ಶ್ರೇಣಿ ಒಂದು ಪಿಂಚಣಿ ಬಗ್ಗೆ ಘೋಷಿಸಿದ್ದರು.
2016ರಲ್ಲಿ ಗ್ರಾಮೀಣ ರಸ್ತೆ ನಿರ್ಮಾಣ, ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಮತ್ತು ಛಬಾರ್ ಬಂದರಿನ ಬಗ್ಗೆ ಭಾಷಣದಲ್ಲಿ ಪ್ರಸ್ತಾವ ಮಾಡಿದ್ದರು.
2017ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ನವಭಾರತ ಹಾಗೂ ಗೋ ರಕ್ಷಣೆ ವಿಚಾರವನ್ನು ಪ್ರಸ್ತಾಪ ಮಾಡಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿಗಳಾದ ಮನ್ ಮೋಹನ್ ಸಿಂಗ್, ಎಚ್.ಡಿ.ದೇವೇಗೌಡ , ಕೇಂದ್ರ ಸಚಿವ ಜೆ.ಪಿ.ನಡ್ಡಾ ಮತ್ತು ಬಿಜೆಪಿಯ ಹಿರಿಯ ನಾಯಕ ಎಲ್.ಅಡ್ವಾಣಿ ಸೇರಿದಂತೆ ಹಲವಾರು ಹಿರಿಯ ಮುಖಂಡರುಗಳು ಭಾಗವಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ