ನವದೆಹಲಿ:
2022ರ ಹೊತ್ತಿಗೆ ಬಾಹ್ಯಾಕಾಶಕ್ಕೆ ಭಾರತೀಯರ ರವಾನೆ ಮಾಡುವ ಮೂಲಕ ಅಂತರಿಕ್ಷದಲ್ಲಿ ತ್ರಿವರ್ಣ ಧ್ವಜ ಹಾರಾಡುವಂತೆ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು.
ಈ ವೇಳೆ ‘ಬಾಹ್ಯಾಕಾಶ ರಂಗದಲ್ಲಿ ಅನ್ವೇಷಣೆಯಲ್ಲಿ ತೊಡಗಿರುವ ಮತ್ತು ಸಾಧನೆ ಮಾಡುತ್ತಿರುವ ವಿಜ್ಞಾನಿಗಳನ್ನು ಭಾರತ ಅಭಿನಂದಿಸುತ್ತದೆ. 2022ರ ಹೊತ್ತಿಗೆ ಅಥವಾ ಅದಕ್ಕೂ ಮೊದಲೇ ಭಾರತ ಅಂತರಿಕ್ಷದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡುವಂತೆ ನಾವು ಮಾಡುತ್ತೇವೆ’ ಎಂದು ಪ್ರಧಾನಿ ಹೇಳಿದ್ದಾರೆ.
ದೇಶದ ಅಭಿವೃದ್ಧಿಯ ವಿಚಾರಗಳನ್ನೇ ಹೆಚ್ಚು ಪ್ರಸ್ತಾಪಿಸಿದ ಮೋದಿ ಅವರು, ಭಾರತ ಈಗ ಅಭಿವೃದ್ಧಿಯ ನೆಲ ಎಂದು ಬಣ್ಣಿಸಿದರು. ಇದೇ ವೇಳೆ ದೇಶದ 50 ಕೋಟಿ ಬಡ ವರ್ಗದ ಜನರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸುವ ಯೋಜನೆಯನ್ನು ಕಾರ್ಯಕ್ರಮದಲ್ಲಿ ಪ್ರಕಟಿಸಿದರು. ಈ ಯೋಜನೆ ಸೆ. 25ರಿಂದ ಜಾರಿಗೆ ಬರುವುದಾಗಿ ಪ್ರಧಾನಿ ತಿಳಿಸಿದರು. ಇನ್ನು ಸಮಾರಂಭದಲ್ಲಿ ಹಲವು ಗಣ್ಯರು, ವಿರೋಧ ಪಕ್ಷಗಳ ನಾಯಕರು, ಸಚಿವರು ಭಾಗವಹಿಸಿದ್ದರು.