ದಾವಣಗೆರೆ:
ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿ, ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ (ವಾಸು) ಕರೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ 72ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ಜಿಲ್ಲೆಯು ಉತ್ತಮ ಜನಪರ ಮತ್ತು ಅಭಿವೃದ್ಧಿ ಯೋಜನೆಗಳೊಂದಿಗೆ ಸರ್ವತೋಮುಖ ಅಭಿವೃದ್ಧಿಯಾಗಲಿ ಎಂದು ಆಶಿಸಿದ ಅವರು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿಗಾಗಿ ಶ್ರಮಿಸಲು ಪ್ರತಿಯೊಬ್ಬರೂ ಕಟೀಬದ್ಧರಾಗುವುದರ ಜೊತೆಗೆ, ನಮ್ಮ ಕರ್ತವ್ಯಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸುವ ಮೂಲಕ ದೇಶಪ್ರೇಮದ ಧ್ಯೋತಕವಾಗಿ ಸೌಹಾರ್ದತೆಯಿಂದ ಬಾಳುವೆ ನಡೆಸೋಣ ಎಂದು ಕಿವಿಮಾತು ಹೇಳಿದರು.
ವಿಶ್ವಕ್ಕೇ ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರುತ್ತಿರುವ ಭಾರತೀಯರಾದ ನಾವುಗಳು, ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳನ್ನು ಸ್ಮರಿಸುತ್ತಾ, ಪ್ರಸ್ತುತದ ಸವಾಲುಗಳನ್ನು ಸ್ವೀಕರಿಸಿ ಎದುರಿಸುವ ಮೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡ್ಡೊಯ್ಯೋಣ ಎಂದು ಕಿವಿಮಾತು ಹೇಳಿದರು.
ಅಂದಿನ ಬಲಿಷ್ಠ ಬ್ರಿಟೀಷ್ ಸಾಮ್ರಾಜ್ಯದ ಎದುರು ಹೋರಾಡಲು ಭಾರತೀಯರು ಜಾತಿ, ಮತ, ಭಾಷೆ, ಪ್ರದೇಶಗಳ ಭೇದ ಮರೆತು ಒಂದಾಗಿ ಹೋರಾಟಕ್ಕೆ ನಿಂತ ಕಾರಣದಿಂದ ತ್ಯಾಗ-ಬಲಿದಾನದಂಥಹ ಉನ್ನತ ಮಾನವೀಯ ಗುಣಗಳು ಭಾರತೀಯರಲ್ಲಿ ಪಸರಿಸಲು ಈ ಸ್ವಾತಂತ್ರ್ಯ ಸಂಗ್ರಾಮ ಪ್ರಚೋದನೆ ನೀಡಿತ್ತು. ಅದರಲ್ಲೂ ಮಹಾತ್ಮ ಗಾಂಧೀಜಿ ಅವರ ಅಹಿಂಸಾ ತತ್ವದಡಿಯಲ್ಲಿ ನಡೆದ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿಗಳು ದೇಶ ಸ್ವಾತಂತ್ರ್ಯಗೊಳ್ಳಲು ಬಹು ದೊಡ್ಡ ಕೊಡುಗೆ ನೀಡಿದೆ ಎಂದು ಸ್ಮರಿಸಿದರು.
ಅದರಲ್ಲೂ 1942ರ ಆಗಸ್ಟ್ 9ರಂದು ಗಾಂಧೀಜಿಯವರು ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಆರಂಭಿಸಿದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ದೇಶದ ವಿದ್ಯಾರ್ಥಿ-ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಈ ಚಳವಳಿಯಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನು ಬಹಿಷ್ಕರಿಸಿ ಬ್ರಿಟೀಷರ ದೌರ್ಜನ್ಯದ ವಿರುದ್ಧ ವೀರಾವೇಶದಿಂದ ಹೋರಾಡಿ, ಬ್ರಿಟೀಷರ ಲಾಠಿ ಏಟುಗಳನ್ನು ಎದುರಿಸಿದ್ದಲ್ಲೆ, ಗುಂಡೇಟಿಗೆ ಬಲಿಯಾಗಿ ಹುತಾತ್ಮರಾಗಿ ತ್ಯಾಗ-ಬಲಿದಾನ ಗೈದಿದ್ದಾರೆ. ಇದರ ಜೊತೆ, ಜೊತೆಗೆ ಸಶಸ್ತ್ರ ಹೋರಾಟದ ಮೂಲಕ ಬ್ರಿಟೀಷರನ್ನು ಬಗ್ಗು ಬಡಿಯಲು ಆರಂಭಿಸಿದ ಕ್ರಾಂತಿಕಾರಿಗಳ ಹೋರಾಟವೂ ಸಣ್ಣದಲ್ಲ. ಅಲ್ಲದೆ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಮಾಜದಲ್ಲಿ ಮನೆ ಮಾಡಿದ್ದ ಅಸ್ಪøಶ್ಯತೆಯ ವಿರುದ್ಧ ದನಿ ಎತ್ತುತ್ತಲೇ ನಿಜವಾದ ಸ್ವಾತಂತ್ರ್ಯ ಪರಿಕಲ್ಪನೆಗೆ ತಮ್ಮದೇಯಾದಂತ ಕೊಡುಗೆ ನೀಡಿದ್ದಾರೆ. ಹೀಗೆ ಭಾರತವನ್ನು ಬ್ರಿಟೀಷರ ದಾಸ್ಯದಿಂದ ಮುಕ್ತಿಗೊಳಿಸಲು ಸುಮಾರು ಒಂದೂವರೆ ಶತಮಾನಗಳ ಕಾಲ ವಿದ್ಯಾರ್ಥಿ-ಯುವಜನರು, ರೈತ-ಕಾರ್ಮಿರು ಸೇರಿದಂತೆ ಅಸಂಖ್ಯಾತರ ಹೋರಾಟದ ಪ್ರತಿಫಲವಾಗಿ ಇಂದು ನಾವು ಸ್ವಾತ್ಯಂತ್ರವನ್ನು ಅನುಭವಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಭಾರತ ಸ್ವಾತಂತ್ರ್ಯ ಚಳವಳಿಗೆ ಕರ್ನಾಟಕವೂ ಅಪಾರವಾದ ಕೊಡುಗೆ ನೀಡಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಇದ್ದ ರಾಜರು ಬ್ರಿಟೀಷರ ವಿರುದ್ಧ ತೀವ್ರತರ ಸಶಸ್ತ್ರ ಬಂಡಾಯ ನಡೆಸಿದವರಲ್ಲಿ ಧೋಂಡಿಯಾವಾಘ್, ಕಿತ್ತೂರುರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಮುಂಡರಗಿ ಭೀಮರಾವ್, ಬಾಲಾಜಿ ನಿಂಬಾಳ್ಕರ್ ನೇತೃತ್ವದಲ್ಲಿ ಹಡಗಲಿಯ ಬೇಡರು, 1814ರಲ್ಲಿ ಬದಾಮಿಯಲ್ಲಿ ಹೋರಾಟ ನಡೆಸಿದ ನರಸಿಂಹ ದತ್ತಾತ್ರೇಯ, 1834ರಲ್ಲಿ ಕೊಡಗಿನಲ್ಲಿ ಹೋರಾಡಿದ ಚಿಕ್ಕವೀರರಾಜ, 1857ರಿಂದ 58ರಲ್ಲಿ ಹೋರಾಟ ನಡೆಸಿದ ಸುರಪುರದ ವೆಂಕಟಪ್ಪ ನಾಯಕ, ನರಗುಂದದ ಬಾಬಾಸಾಹೇಬ್ ಮತ್ತಿತರರು ನಮ್ಮ ನಾಡಿನ ಪ್ರಮುಖರಾಗಿದ್ದಾರೆ. ಅಲ್ಲದೆ, 1924ರಲ್ಲಿ ಗಾಂಧೀಜಿ ನೇತೃತ್ವದಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಕರ್ನಾಡ್ ಸದಾಶಿವರಾವ್, ಹರ್ಡೇಕರ್ ಮಂಜಪ್ಪ ಮತ್ತಿತರರು ಭಾಗವಹಿಸಿರುವುದು ಕರ್ನಾಟಕ ಭಾರತ ಸ್ವಾತಂತ್ರ್ಯ ಚಳವಳಿಗೆ ನೀಡಿರುವ ಕೊಡುಗೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.
1930ರಲ್ಲಿ ನಡೆದ ದಂಡಿಯಾತ್ರೆಯ ಪ್ರಯುಕ್ತ ನಮ್ಮ ರಾಜ್ಯದ ಅಂಕೋಲಾದಲ್ಲೂ ಸತ್ಯಾಗ್ರಹ ನಡೆಯಿತು. ಹುಬ್ಬಳ್ಳಿ, ಬೆಳಗಾವಿಯಲ್ಲಿ ನಡೆದ ಹೋರಾಟವೂ ನಿಧಾನವಾಗಿ ದಕ್ಷಿಣಭಾಗಕ್ಕೂ ಹರಡಿತು. ಹೈದರಾಬಾದ್ ಕರ್ನಾಟಕದಲ್ಲೂ ಹೋರಾಟದ ತೀವ್ರತೆ ಹೆಚ್ಚಿತ್ತು.
1942-43ರಲ್ಲಿ ನಡೆದ ಬೀದರ್ ಸಮಾವೇಶದ ನೇತೃತ್ವವನ್ನು ವಿಶ್ವನಾಥ್ ಮುದ್ನಾಳ್, ಸ್ವಾಮಿ ರಮಾನಂದ ಮತ್ತಿತರರು ವಹಿಸಿದ್ದರು. ಚನ್ನಬಸಪ್ಪ ಅಂಬಲಿ ಅವರ ನೇತೃತ್ವದಲ್ಲಿ ಕ್ವಿಟ್ ಇಂಡಿಯಾ ಚಳವಳಿಯು ರಾಜ್ಯದ ವಿಜಯಪುರ, ಧಾರವಾಡ, ಬೆಳಗಾವಿ, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಬಹಳಷ್ಟು ತೀವ್ರತೆ ಪಡೆದಿತ್ತು. ಅಲ್ಲದೆ, ಈ ಹೋರಾಟಗಳಲ್ಲಿ ಮಾಧ್ಯಮಗಳ ಪಾತ್ರವೂ ಅತಿ ಮುಖ್ಯವಾಗಿತ್ತು ಎಂದು ನೆನೆದರು.
ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಜಿ ಪಂ ಅಧ್ಯಕ್ಷೆ ಕೆ.ಆರ್.ಜಯಶೀಲ, ಉಪಾಧ್ಯಕ್ಷೆ ರಶ್ಮಿ ರಾಜಪ್ಪ, ಮಹಾನಗರ ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ, ಜಿ ಪಂ ಸದಸ್ಯ ಕೆ.ಎಸ್.ಬಸವಂತಪ್ಪ, ಜಿಲ್ಲಾಧಿಕಾರಿ ಡಿ ಎಸ್ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್, ಜಿ ಪಂ ಸಿಇಓ ಎಸ್ ಅಶ್ವತಿ, ಎಎಸ್‍ಪಿ ಟಿ.ಜೆ.ಉದೇಶ್, ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಮಹಾಪಾಲಿಕೆ ಆಯುಕ್ತ ಮಂಜುನಾಥ ಆರ್.ಬಳ್ಳಾರಿ, ತಹಶೀಲ್ದಾರ್ ಎಸ್.ಸಂತೋಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.