ಅಪಾಯದ ಮಟ್ಟಮೀರಿದ ತುಂಗಾ-ಭದ್ರಾ ನದಿ : ತೋಟಗಳು ಜಾಲಾವೃತ; ಜನಜೀವನ ತತ್ತರ

  ಹೊನ್ನಾಳಿ :

      ಕಳೆದ ನಾಲ್ಕೈದು ದಿನಗಳಿಂದ ತುಂಗಾ ಮತ್ತು ಭದ್ರಾ ನದಿ ಪಾತ್ರಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಾಗೂ ಲಕ್ಕವಳ್ಳಿಯ ಭದ್ರಾ-ಗಾಜನೂರಿನ ತುಂಗಾ ಜಲಾಶಯಗಳಿಂದ ಲಕ್ಷಾವಧಿ ಕ್ಯೂಸೆಕ್ಸ್‍ಗಳಷ್ಟು ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಹೊನ್ನಾಳಿ ತಾಲೂಕು ವ್ಯಾಪ್ತಿಯಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಕಾರಣಕ್ಕಾಗಿ ತಾಲೂಕಿನ ಸಾಸ್ವೇಹಳ್ಳಿ, ಹೊಟ್ಯಾಪುರ, ಚೀಲೂರು ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಹೆಕ್ಟೇರ್‍ಗಳಷ್ಟು ಜಮೀನು ಜಲಾವೃತಗೊಂಡಿದೆ.

      ತಾಲೂಕಿನ ಬೇಲಿಮಲ್ಲೂರು ಗ್ರಾಮದ ಸುಮಾರು 300ಕ್ಕೂ ಅಧಿಕ ಹೆಕ್ಟೇರ್‍ಗಳಷ್ಟು ಪ್ರದೇಶದಲ್ಲಿ ಭತ್ತದ ನಾಟಿ ಮಾಡಿದ ಗದ್ದೆಗಳು, ಮೆಕ್ಕೆಜೋಳದ ಹೊಲಗಳು ಹಾಗೂ ಅಡಕೆ-ತೆಂಗಿನ ತೋಟಗಳು ಜಲಾವೃತಗೊಂಡಿದ್ದು, ಬೇಲಿಮಲ್ಲೂರು ಗ್ರಾಮದ ಬಳಿ ಮುಂದಿನ ಗ್ರಾಮಗಳಾದ ಕೋಟೆಮಲ್ಲೂರು, ಹಿರೇಗೋಣಿಗೆರೆ, ಚಿಕ್ಕಗೋಣಿಗೆರೆ, ಹರಗನಹಳ್ಳಿ, ಕೋಣನತಲೆ ಮತ್ತಿತರ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಈ ಭಾಗದಲ್ಲಿ ಸಂಚರಿಸುವ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

      ಭತ್ತದ ಗದ್ದೆಗಳಲ್ಲಿ ನಾಟಿ ಮಾಡಿ ಹದಿನೈದು ದಿನಗಳು ಕಳೆದಿಲ್ಲ, ಇದೀಗ, ತುಂಗಭದ್ರಾ ನದಿ ನೀರು ನುಗ್ಗಿದ್ದು, ದಿಕ್ಕುತೋಚದಂತಾಗಿದೆ ಎಂದು ಹೇಳುತ್ತಾರೆ ಬೇಲಿಮಲ್ಲೂರು ಗ್ರಾಮದ ರೈತರಾದ ಟಿ. ಕೆಂಚಪ್ಪ, ಎಂ.ಬಿ. ನಿಂಗಪ್ಪ, ಟಿ.ಎಂ. ಶಿವಾನಂದ್, ಟಿ.ಬಿ. ರಂಗಪ್ಪ, ಭದ್ರಾ ನೀರು ಬಳಕೆದಾರರ ಸಂಘದ ಕಾರ್ಯದರ್ಶಿ ಎಂ.ಎನ್. ಉಮೇಶ್ ಇತರರು. ಹಾಲುಗಾಳು ಕಟ್ಟುವ ಹಂತದಲ್ಲಿರುವ ಮೆಕ್ಕೆಜೋಳದ ಹೊಲಗಳಿಗೂ ನೀರು ನುಗ್ಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ರೈತರ ಸ್ಥಿತಿ.

      ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಈ ಭಾಗದ ಗ್ರಾಮಗಳಿಂದ ಹೊನ್ನಾಳಿಯ ಶಾಲಾ-ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಹೊನ್ನಾಳಿಯಲ್ಲಿ ಬುಧವಾರ ನಡೆದ ಪ್ರಸಕ್ತ ಸಾಲಿನ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವ ಭಾಗ್ಯ ಲಭಿಸಲಿಲ್ಲ. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಬಸ್‍ಗಳ ಓಡಾಟ ಮಂಗಳವಾರ ರಾತ್ರಿಯಿಂದಲೇ ಸ್ಥಗಿತಗೊಂಡಿದೆ.

      ಒಂದೆಡೆ ತಮ್ಮ ಜಮೀನುಗಳಿಗೆ ನೀರು ನುಗ್ಗಿದ ಕಾರಣ ನಷ್ಟ ಅನುಭವಿಸುತ್ತಿರುವ ರೈತರು, ಮತ್ತೊಂದೆಡೆ ತುಂಗಭದ್ರಾ ನದಿ ದಂಡೆಯ ಮೇಲಿನ ಕೃಷಿ ಪಂಪ್‍ಸೆಟ್‍ಗಳು ಜಲಾವೃತಗೊಳ್ಳುವ ಭೀತಿಯಲ್ಲಿದ್ದಾರೆ. ಬೇಲಿಮಲ್ಲೂರು ಗ್ರಾಮದ ನದಿ ತೀರದಲ್ಲಿನ ಅನೇಕ ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಟ್ರಾನ್ಸ್‍ಫಾರ್ಮರ್‍ಗಳೂ ಮುಳುಗಡೆ ಭೀತಿಯಲ್ಲಿವೆ. ಬೇಲಿಮಲ್ಲೂರು ಗ್ರಾಮದ ರೈತರ ಸುಮಾರು ಮೂವತ್ತಕ್ಕೂ ಅಧಿಕ ಭತ್ತದ ಹುಲ್ಲಿನ ಬಣವೆಗಳು ಜಲಾವೃತಗೊಂಡಿದ್ದು, ಮುಂದಿನ ದಿನಗಳಲ್ಲಿ ಜಾನುವಾರುಗಳ ಮೇವಿಗೆ ಏನು ಮಾಡುವುದು ಎಂಬ ಚಿಂತೆಯಲ್ಲಿ ಅನ್ನದಾತ ಕಂಗಾಲಾಗಿದ್ದಾನೆ.

      ಬೇಲಿಮಲ್ಲೂರು ಗ್ರಾಮದ ಸುಮಾರು ಇಪ್ಪತ್ತಕ್ಕೂ ಅಧಿಕ ಮನೆಗಳು, ಕೋಟೆಮಲ್ಲೂರು ಗ್ರಾಮದ ಸುಮಾರು 40 ಮನೆಗಳು ತುಂಗಭದ್ರಾ ನದಿ ನೀರಿನ ಪ್ರವಾಹದಲ್ಲಿ ಮುಳುಗಡೆ ಭೀತಿಯಲ್ಲಿದ್ದು, ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಬೇಲಿಮಲ್ಲೂರು ಗ್ರಾಮದ ಮೀನುಗಾರರ ಸುಮಾರು ಹದಿನೈದು ಮನೆಗಳ ಸಂಪರ್ಕ ಕಡಿತಗೊಂಡಿದೆ. ನದಿ ನೀರಿನಲ್ಲಿ ತೆಪ್ಪ ಬಳಸಿ ಅವರು ತಮ್ಮ ಮನೆಗಳಿಗೆ ತೆರಳುವ ಸ್ಥಿತಿ ಉಂಟಾಗಿದೆ. 

Recent Articles

spot_img

Related Stories

Share via
Copy link