ಮಹಾತ್ಮರನ್ನು ಸ್ಮರಿಸಿಸುವುದು ಎಲ್ಲರ ಕರ್ತವ್ಯ

 ಚಿತ್ರದುರ್ಗ:

      ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹೋರಾಟ, ತ್ಯಾಗ, ಬಲಿದಾನ ಮಾಡಿದ ಮಹಾತ್ಮರನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟರಮಣಪ್ಪ ತಿಳಿಸಿದರು.

      ಇಲ್ಲಿನ ವಿಜ್ಞಾನ ಕಾಲೇಜು ಮೈದಾನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ 72 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಹಾಗೂ ವಿವಿಧ ತುಕಡಿಗಳಿಂದ ಪಥ ಸಂಚಲನದ ವೇಳೆ ಗೌರವ ವಂದನೆ ಸ್ವೀಕರಿಸಿ ತಮ್ಮ ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ತಿಳಿಸಿದರು.

      ಸ್ವಾತಂತ್ರ್ಯ ಚಳುವಳಿ ರಾಷ್ಟ್ರೀಯ ವಿಮೋಚನಾ ಹೋರಾಟದಲ್ಲಿ ತೊಡಗಿ, ಜನ ಸಮುದಾಯವನ್ನು ಸಂಘಟಿಸುವ ಮೂಲಕ ಜಾಗೃತಗೊಳಿಸಿದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಅನೇಕ ಮಹಾತ್ಮರು ಶ್ರಮಿಸಿದ್ದಾರೆ. ಅವರ ಪರಿಶ್ರಮದ ಫಲವಾಗಿ ನಾವೆಲ್ಲರೂ 72 ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ತೊಡಗಿದ್ದೇವೆ ಎಂದರು.

      ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಬಾಯ್ ಪಟೇಲ್, ಪಂಡಿತ್ ಜವಾಹರಲಾಲ್ ನೆಹರು, ಸುಭಾಷ್ ಚಂದ್ರಬೋಸ್, ಭಗತ್‍ಸಿಂಗ್, ಚಂದ್ರಶೇಖರ್ ಆಜಾದ್, ಬಿಪಿನ್ ಚಂದ್ರಪಾಲ್, ಬಾಲ ಗಂಗಾಧರ ತಿಲಕ್, ದಾದಾಬಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ ಹಾಗೂ ಸ್ವಾತಂತ್ರ್ಯಕ್ಕಾಗಿ ಸಾವಿರಾರು ವೀರಯೋಧರು ಬ್ರಿಟಿಷರ ವಿರುದ್ದ ಹೋರಾಟ ಮಾಡಿದ್ದಾರೆ.

      ಟಿಪ್ಪು ಸುಲ್ತಾನ್ ಸೇರಿದಂತೆ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕದೇವಿ, ಬೆಳವಡಿ ಮಲ್ಲಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕಸೇರಿದಂತೆ ಚಿತ್ರದುರ್ಗ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿರುವ ವೀರವನಿತೆ ಒನಕೆ ಓಬವ್ವ ಮತ್ತು ಮಹಾನ್ ಹೋರಾಟಗಾರರಾದ ಇದೇ ಜಿಲ್ಲೆಯವರಾದ ಎಸ್.ನಿಜಲಿಂಗಪ್ಪನವರು ಹಾಗೂ ದುಮ್ಮಿ ಮುರಿಗೆಪ್ಪ, ಮುಲ್ಕಾ ಗೋವಿಂದರೆಡ್ಡಿ, ಕೆ.ಹನುಮಂತಪ್ಪ ಹಾಗೂ ಇನ್ನೂ ಅನೇಕ ಮಹಾನ್ ನಾಯಕರನ್ನು ಸ್ಮರಿಸಬೇಕಾಗಿದೆ. ಮತ್ತು ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಿ ದೇಶಕ್ಕಾಗಿ ಮಡಿದ ಮಹಾನ್ ವ್ಯಕ್ತಿಗಳನ್ನು ನೆನೆಯುವ ಸುಸಂದರ್ಭ ಒದಗಿರುವುದು ನನ್ನ ಭಾಗ್ಯವೆಂದರು.

      ಸರ್ಕಾರ ಕಾರ್ಮಿಕರು, ರೈತರು, ಬಡವರು ಹಾಗೂ ದೀನ ದಲಿತರ, ಮಹಿಳೆಯರ ಹಾಗೂ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ. ಹಾಗೂ ಇವರ ಅಭಿವೃದ್ದಿಗಾಗಿ ಯೋಜನೆಗಳ ಅನುಷ್ಟಾನಗೊಳಿಸಲು ಎಲ್ಲಾ ಇಲಾಖೆಗಳ ಸಂಯೋಜನೆ ಹಾಗೂ ಸಹಕಾರೊಂದಿಗೆ ಮುನ್ನಡೆಸೋಣವೆಂದರು.

      ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಸಂಸದರಾದ ಬಿ.ಎನ್.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಜಯಮ್ಮ ಬಾಲರಾಜ್, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ, ಜಿಲ್ಲಾ ರಕ್ಷಣಾಧಿಕಾರಿ ಶ್ರೀನಾಥ್ ಎಂ.ಜೋಷಿ ಹಾಗೂ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

      ಸಮಾರಂಭದಲ್ಲಿ ಮಾಜಿ ಸ್ವಾತಂತ್ರ್ಯ ಯೋಧರು ಹಾಗೂ ಅವರ ಅವಲಂಭಿತರನ್ನು ಸನ್ಮಾನಿಸಲಾಯಿತು. ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap