ತುಮಕೂರು:
ತುಮಕೂರು ಮಹಾನಗರ ಪಾಲಿಕೆಗೆ ಆಗಸ್ಟ್ 31 ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಗೆ ಆಗಸ್ಟ್ 20 ಕೊನೆಯ ದಿನವಾಗಿದ್ದು, ಗುರುವಾರ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಕಾರ್ಯ ಮಂದಗತಿಯಲ್ಲಿ ಆರಂಭವಾಯಿತು.
3 ನೇ ವಾರ್ಡ್ನಿಂದ 2 ನಾಮಪತ್ರ, 11 ನೇ ವಾರ್ಡ್ನಲ್ಲಿ ಒಬ್ಬರಿಂದ ಎರಡು ನಾಮಪತ್ರ, 12 ನೇ ವಾರ್ಡ್ನಿಂದ ಒಂದು ನಾಮಪತ್ರ, 28 ನೇ ವಾರ್ಡ್ನಿಂದ ಒಂದು ನಾಮಪತ್ರ, 34 ನೇ ವಾರ್ಡ್ನಿಂದ ಒಂದು ನಾಮಪತ್ರ – ಹೀಗೆ ಒಟ್ಟು 7 ನಾಮಪತ್ರಗಳು ಸಲ್ಲಿಕೆಯಾದವು.
ಈಗ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರೂ, ಪಕ್ಷದ ಬಿ ಫಾರಂ ನೀಡಿದರಷ್ಟೇ ಅವರು ಆ ಪಕ್ಷದ ಅಧಿಕೃತ ಅಭ್ಯರ್ಥಿ ಆಗುತ್ತಾರೆ. ಉಳಿದಂತೆ ಸ್ವತಂತ್ರ ಅಭ್ಯರ್ಥಿ ಆಗಿ ಸಲ್ಲಿಸಬಹುದು.
ಆಗಸ್ಟ್ 13 ರಿಂದ ತುಮಕೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ವ್ಯವಸ್ಥೆಗೊಳಿಸಿರುವ 7 ಚುನಾವಣಾಧಿಕಾರಿಗಳ ಕಚೇರಿಗಳಲ್ಲಿ ನಾಮಪತ್ರ ನಮೂನೆ ವಿತರಿಸುವ ಕಾರ್ಯ ಆರಂಭವಾಗಿತ್ತು. ಆಗಸ್ಟ್ 13 ಮತ್ತು 14 ರಂದು ಸ್ಪರ್ಧಾಕಾಂಕ್ಷಿಗಳು ಆಗಮಿಸಿ ನಾಮಪತ್ರ ನಮೂನೆ ಪಡೆದುಕೊಂಡು ಹೋಗಿದ್ದರು. ಇವೆರಡು ದಿನಗಳಲ್ಲಿ ಅಭ್ಯರ್ಥಿಗಳಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಆಗಸ್ಟ್ 15 ರಂದು ಸ್ವಾತಂತ್ರೃ ದಿನದ ಅಂಗವಾಗಿ ಸಾರ್ವತ್ರಿಕ ರಜೆ ಇದ್ದುದರಿಂದ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ. ಆದರೆ ಗುರುವಾರ ಚಟುವಟಿಕೆ ಪ್ರಾರಂಭಿಸಿತು.
ಹಾಲಿ ಜೆಡಿಎಸ್ ಸದಸ್ಯ ರಾಮಕೃಷ್ಣ ಅವರು ಬೆಳಗ್ಗೆ ಸುಮಾರು 11-30 ರಲ್ಲಿ ಆಗಮಿಸಿ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಇದೇ ರೀತಿ ಹಲವರು ಆಗಮಿಸಿ ನಾಮಪತ್ರ ಸಲ್ಲಿಸಿದರು.
ಆಗಸ್ಟ್ 17 ಶುಕ್ರವಾರ ಮತ್ತು ಕೊನೆಯ ದಿನವಾದ ಆಗಸ್ಟ್ 20 ರಂದು ಸೋಮವಾರ ನಾಮಪತ್ರ ಸಲ್ಲಿಸುವವರ ಸಂಖ್ಯೆ ಅಧಿಕವಾಗಲಿದೆಯೆಂದು ನಿರೀಕ್ಷಿಸಲಾಗಿದೆ.
ಟಿಕೆಟ್ದೇ ಎಲ್ಲರ ಚಿಂತೆ:
ತುಮಕೂರು ಮಹಾನಗರ ಪಾಲಿಕೆ ಕಚೇರಿ ಹಾಗೂ ಸುತ್ತಮುತ್ತ ಗುರುವಾರ ಬೆಳಗ್ಗೆ ಸೇರಿದವರೆಲ್ಲರ ಮಾತಿನಲ್ಲೂ ‘‘ಟಿಕೆಟ್ ಚಿಂತೆ’’ಯೇ ಕಾಡುತ್ತಿತ್ತು. ‘‘ಈ ವಾರ್ಡ್ನಿಂದ ಯಾರಿಗೆ ಟಿಕೆಟ್?’’ ಎಂಬುದೇ ಎಲ್ಲರ ಕುತೂಹಲದ ಚರ್ಚಾ ವಿಷಯವಾಗಿತ್ತು. ‘‘ಇವರಿಗೆ ಟಿಕೆಟ್ ಇಲ್ಲ… ಇವರಿಗೆ ಬಿಟ್ಟು ಇಂಥವನಿಗೆ ಟಿಕೆಟ್ ಕೊಡುತ್ತಾರಂತೆ’’ ಎಂಬ ಬೇಸರದ ಮಾತುಗಳೂ ಕೇಳಿಬಂತು. ‘‘ಈ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆಯ ವಿಷಯದಲ್ಲಿ ವಿವಿಧ ಮಾಫಿಯಾಗಳು ಕೈವಾಡ ನಡೆಸುತ್ತಿರುವಂತಿದೆ’’ ಎಂದೂ ಕೆಲವರು ಉದ್ಗರಿಸಿದರು.
‘‘ನೋಡಿ, ಮೊನ್ನಿನ ವಿಧಾನಸಭಾ ಚುನಾವಣೆಯ ಸಂದ‘ರ್ದಲ್ಲಿ ನಮ್ಮ ಮನೆ, ವೃತ್ತಿ ಎಲ್ಲ ಬಿಟ್ಟು ಕೆಲಸ ಮಾಡಲು ಮುಖಂಡರುಗಳಿಗೆ ನಾವು ಬೇಕಾಗಿತ್ತು. ನಮ್ಮನ್ನೆಲ್ಲ ಚೆನ್ನಾಗಿ ದುಡಿಸಿಕೊಂಡರು. ಮುಂದಿನ ಪಾಲಿಕೆ ಚುನಾವಣೆಯಲ್ಲಿ ನಿಮಗೆ ಟಿಕೆಟ್ ಗ್ಯಾರಂಟಿ ಅಂತ ನಂಬಿಸಿದರು. ಈಗ ನಾವು ಟಿಕೆಟ್ ಕೇಳಿದರೆ ಈ ಮುಖಂಡರುಗಳು ಬೇರೆ ಯಾರೋ ಹೊಸಬರ ಹಾಗೂ ಪಕ್ಷಕ್ಕೆ ಹೊಸಬರಾದವರ ಹೆಸರನ್ನು ಹೇಳುತ್ತಿದ್ದಾರೆ. ವಚನಭ್ರಷ್ಟರಾಗಿ ನಡೆದುಕೊಳ್ಳುತ್ತಿದ್ದಾರೆ. ‘ಅಟ್ಟ ಏರಿದ ಮೇಲೆ ಇನ್ನು ಏಣಿ ಏಕೆ ಬೇಕು?’ ಎಂಬಂತಾಗಿದೆ ಈ ಮುಖಂಡರ ವರ್ತನೆ’’ ಎಂದು ಪಾಲಿಕೆ ಕಚೇರಿ ಹೊರಗಿದ್ದ ಗುಂಪುಗಳಲ್ಲಿ ಬಿರುಸಾಗಿ ನಡೆಯುತ್ತಿದ್ದ ಚರ್ಚೆಯು ಈ ಚುನಾವಣೆಯ ದಿಕ್ಕು ಸಾಗಿರುವ ಬಗೆಯನ್ನು ಬಿಂಬಿಸುವಂತಿತ್ತು.
‘ಸಮಾನ ಮನಸ್ಕರ’ ಸ್ಪರ್ಧೆ..?
ಈ ಮಧ್ಯೆ ಪಾಲಿಕೆ ಚುನಾವಣೆಯಲ್ಲಿ ಎಲ್ಲ 35 ವಾರ್ಡ್ಗಳಿಂದಲೂ ತಲಾ ಓರ್ವ ‘‘ಸಮಾನ ಮನಸ್ಕರು’’ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆಂಬ ಮತ್ತೊಂದು ಕುತೂಹಲದ ವಿಷಯವೂ ಪಾಲಿಕೆ ಆವರಣದಲ್ಲಿ ಸೇರಿದ್ದ ವಿವಿಧ ಗುಂಪುಗಳ ಚರ್ಚೆಯಲ್ಲಿ ಕೇಳಿಬಂದಿದೆ. ಇವರೆಲ್ಲರೂ ‘‘ಮೂಲ ಬಿಜೆಪಿ’’ಗರಾಗಿದ್ದು, ಈ ಬಾರಿ ಎಲ್ಲರೂ ಒಗ್ಗೂಡಿ ಸ್ಪರ್ಧಾ ಕಣಕ್ಕಿಳಿಯಲಿದ್ದಾರೆಂಬುದು ಈ ಮಾತಿನ ಮುಖ್ಯಾಂಶವಾಗಿದೆ. ‘‘ಪಕ್ಷಕ್ಕಾಗಿ ದಶಕಗಳಿಂದ ದುಡಿದವರು ಮೂಲೆಗುಂಪಾಗಿದ್ದಾರೆ. ವಲಸಿಗರೇ ಪ್ರಬಲರಾಗುತ್ತಿದ್ದಾರೆ. ಆದ್ದರಿಂದ ಎಲ್ಲ 35 ವಾರ್ಡ್ಗಳಲ್ಲೂ ತಲಾ ಓರ್ವರು ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ. ಇಂಥವರು ಪ್ರತಿ ವಾರ್ಡ್ನಿಂದಲೂ ಒಂದೇ ರೀತಿಯ ಚಿಹ್ನೆಯಿಂದ ಸ್ಪರ್ಧಿಸಲಿದ್ದಾರೆ’’ ಎಂದು ಅಲ್ಲಿ ಮಾತನಾಡಿಕೊಂಡರು.
ಶ್ರೀರಾಮುಲು ಶಿಫಾರಸು!
ಇನ್ನು ಮಹಾನಗರ ಪಾಲಿಕೆ ಚುನಾವಣೆಯ ಬಿಸಿ ಯಾವ ಮಟ್ಟಕ್ಕೆ ಹೋಗುತ್ತಿದೆಯೆಂದರೆ, ಈ ಚುನಾವಣೆಯಲ್ಲಿ ತಮ್ಮ ಶಿಷ್ಯನೊಬ್ಬನಿಗೆ ಬಿಜೆಪಿಯ ಟಿಕೆಟ್ ಕೊಡಲೇಬೇಕೆಂದು ಬಳ್ಳಾರಿಯ ಬಿಜೆಪಿ ಧುರೀಣ, ಶಾಸಕ ಶ್ರೀರಾಮುಲು ಅವರು ಸ್ವತಃ ತುಮಕೂರಿನ ಬಿಜೆಪಿ ಧುರೀಣರಿಗೆ ದೂರವಾಣಿ ಮೂಲಕ ನೇರ ತಾಕೀತು ಮಾಡಿದ್ದಾರೆಂಬ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ. ಈ ವಿಷಯ ಪಾಲಿಕೆ ಹಂತದ ರಾಜಕೀಯದಲ್ಲಷ್ಟೇ ಅಲ್ಲದೆ, ಬಿಜೆಪಿ ವಲಯದಲ್ಲೂ ಬಿಸಿಬಿಸಿ ಚರ್ಚೆಗೆ ಒಳಗಾಗುತ್ತಿದೆ.
‘‘ನೋಡಿ, ಮೊನ್ನಿನ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ನಮ್ಮ ಮನೆ, ವೃತ್ತಿ ಎಲ್ಲ ಬಿಟ್ಟು ಕೆಲಸ ಮಾಡಲು ಮುಖಂಡರುಗಳಿಗೆ ನಾವು ಬೇಕಾಗಿತ್ತು. ನಮ್ಮನ್ನೆಲ್ಲ ಚೆನ್ನಾಗಿ ದುಡಿಸಿಕೊಂಡರು. ಮುಂದಿನ ಪಾಲಿಕೆ ಚುನಾವಣೆಯಲ್ಲಿ ನಿಮಗೆ ಟಿಕೆಟ್ ಗ್ಯಾರಂಟಿ ಅಂತ ನಂಬಿಸಿದರು. ಈಗ ನಾವು ಟಿಕೆಟ್ ಕೇಳಿದರೆ ಈ ಮುಖಂಡರುಗಳು ಬೇರೆ ಯಾರೋ ಹೊಸಬರ ಹಾಗೂ ಪಕ್ಷಕ್ಕೆ ಹೊಸಬರಾದವರ ಹೆಸರನ್ನು ಹೇಳುತ್ತಿದ್ದಾರೆ. ವಚನಭ್ರಷ್ಟರಾಗಿ ನಡೆದುಕೊಳ್ಳುತ್ತಿದ್ದಾರೆ. ‘ಅಟ್ಟ ಏರಿದ ಮೇಲೆ ಇನ್ನು ಏಣಿ ಏಕೆ ಬೇಕು?’ ಎಂಬಂತಾಗಿದೆ ಈ ಮುಖಂಡರ ವರ್ತನೆ’’ ಎಂದು ಪಾಲಿಕೆ ಕಚೇರಿ ಹೊರಗಿದ್ದ ಗುಂಪುಗಳಲ್ಲಿ ಬಿರುಸಾಗಿ ನಡೆಯುತ್ತಿದ್ದ ಚರ್ಚೆಯು ಈ ಚುನಾವಣೆಯ ದಿಕ್ಕು ಸಾಗಿರುವ ಬಗೆಯನ್ನು ಬಿಂಬಿಸುವಂತಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/08/IMG_20150522_123812-editing-3.gif)