ತಿಪಟೂರು
ಸ್ವತಂತ್ರವೆಂದರೆ ಸ್ವೇಚ್ಛಾಚಾರವಲ್ಲ, ಅದು ನಮ್ಮ ಸ್ವಚ್ಛಂದವಾದ ಬದುಕಾಗಿದ್ದು, ಸಾಮಥ್ರ್ಯವಿರುವ ವ್ಯಕ್ತಿ ಸರಿಯಾಗಿ ಸ್ವತಂತ್ರವನ್ನು ಬಳಸಿಕೊಳ್ಳುತ್ತಾನೆ, ಬಳಸಿಕೊಳ್ಳದವ ದೂರುತ್ತಾನೆ. ಆದ್ದರಿಂದ ಪ್ರತಿಯೊಬ್ಬರು ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಬಳಸಿಕೊಂಡು ಸದೃಢ ವ್ಯಕ್ತಿಯಾಗಿ ರೂಪುಗೊಳ್ಳಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಎಲ್.ಎಂ. ವೆಂಕಟೇಶ್ ತಿಳಿಸಿದರು.
ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶ್ರೀ ಡಿ. ದೇವರಾಜು ಅರಸು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಉಪನ್ಯಾಸ ನೀಡುತ್ತಾ, ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ಸ್ವಾತಂತ್ರ್ಯವನ್ನು ಸಾವಿರಾರು ಮಹಾನ್ ವ್ಯಕ್ತಿಗಳ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಲಿಭಿಸಿದೆ. ಮಹಾತ್ಮಗಾಂಧಿ, ಲಾಲ್ಬಹದ್ದೂರ್ ಶಾಸ್ತ್ರಿ, ಸುಭಾಷ್ಚಂದ್ರಬೋಸ್ ಮುಂತಾದ ಮಹಾನ್ ನಾಯಕರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯವನ್ನು ಪಡೆದು ಇಂದಿಗೆ 72 ವರ್ಷಗಳು ತುಂಬಿವೆ. ಈಗ ನಾವುಗಳು ನಮ್ಮೊಳಗಿನ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ದೇಶಕ್ಕಾಗಿ ದುಡಿಯುತ್ತಿರುವ ಸೈನಿಕರು, ರೈತಾಪಿ, ಕೂಲಿಕಾರ್ಮಿಕರು, ದಲಿತ ವರ್ಗದವರ ಬದುಕನ್ನು ಹಸನುಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ದೇಶದ ಯುವಶಕ್ತಿ ಸದೃಢರಾಗಿ ದೇಶಕಟ್ಟುವ ಕೆಲಸಲ್ಲಿ ಕಾರ್ಯೋನ್ಮುಖರಾದಬೇಕೆಂದರು.
ಹಿಂದುಳಿದ ವರ್ಗಗಳ ತಾಲ್ಲೂಕು ವಿಸ್ತರಣಾಧಿಕಾರಿ ಟಿ. ಗುರುಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವತಂತ್ರ ಇಲ್ಲದಿದ್ದರೆ ಇಂದು ಗುಲಾಮರಾಗಿ ಬದುಕಬೇಕಿತ್ತು. ಆದ್ದರಿಂದ ನಮಗೆ ದೊರಕಿರುವ ಸ್ವಾತಂತ್ರ್ಯವನ್ನು ಜೋಪಾನವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ನಿಲಯದ ಕೆಂಪಣ್ಣ, ಬಸವರಾಜು ಮತ್ತಿತರರಿದ್ದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಿಲಯದ ವಿದ್ಯಾರ್ಥಿಗಳಿಗೆ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.