ದಾವಣಗೆರೆ:
ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ನಗರದ ಎಸ್‍ಬಿಐ ಮಂಡಿಪೇಟೆ ಶಾಖೆಯಲ್ಲಿ ಇಂದು (ಆ.19ರಂದು) ಮತ್ತು ನಾಳೆ (ಆ.20ರಂದು) ಎಸ್‍ಬಿಐ ಶ್ರಾವಣ ಸಂಭ್ರಮ, ಬೃಹತ್ ಗೃಹ ಮತ್ತು ವಾಹನ ಸಾಲ ಉತ್ಸವ ಏರ್ಪಡಿಸಲಾಗಿದೆ ಎಂದು ಎಸ್‍ಬಿಐ ಆಡಳಿತ ಕಚೇರಿ ದಾವಣಗೆರೆಯ ಉಪ ಮಹಾಪ್ರಬಂಧಕ ಅಸಿತ್ ಕುಮಾರ್ ನಂದಿ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಬೆಳಿಗ್ಗೆ 10 ಗಂಟೆಗೆ ಈ ಉತ್ಸವವನ್ನು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಉದ್ಘಾಟಿಸಲಿದ್ದಾರೆ. ತಾವು ಹಾಗೂ ಎಸ್‍ಬಿಐ ಪ್ರಾದೇಶಿಕ ವ್ಯವಸ್ಥಾಪಕ ರಾಜೀವ್‍ಕುಮಾರ್ ಮಿತ್ತಿಲ್ ಉಪಸ್ಥಿತರಿರಲಿದ್ದೇವೆ. ಇಂದು ಮತ್ತು ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ ಸಾಲ ಉತ್ಸವ ನಡೆಯಲಿದೆ ಎಂದು ಹೇಳಿದರು.
ಈ ಗೃಹ ಮತ್ತು ವಾಹನ ಸಾಲ ಉತ್ಸವದಲ್ಲಿ ಆಕರ್ಷಕ ಬಡ್ಡಿದರಗಳ ಮೂಲಕ ಗೃಹ ನಿರ್ಮಾಣಕ್ಕೆ, ಖರೀದಿಗೆ ಹಾಗೂ ಕಾರು ಖರೀದಿಗೆ ಸಾಲ ಸೌಲಭ್ಯ ನೀಡಲಾಗುವುದು. ಗೃಹ ನಿರ್ಮಾಣ ಉದ್ದೇಶಕ್ಕೆ ಮಹಿಳೆಯರಿಗೆ ಶೇ.8.45 ರಷ್ಟು ಹಾಗೂ ಪುರುಷರಿಗೆ ಶೇ.8.5ರಷ್ಟು ಹಾಗೂ ಕಾರು ಖರೀದಿಗೆ ಶೇ.9.20 ರಷ್ಟು ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಇಲ್ಲಿ ಸಾಲ ಪಡೆಯಲು ಗುರುತಿನ ಚೀಟಿ, ಆದಾಯ ಪ್ರಮಾಣಪತ್ರ ನೀಡಿದರೆ, ದಾಖಲೆಗಳನ್ನು ಪರಿಶೀಲಿಸಿ, ಸ್ಥಳದಲ್ಲಿಯೇ ಸಾಲ ಮಂಜೂರಾತಿ ಪತ್ರ ವಿತರಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಎಸ್‍ಬಿಐ ಮಂಡಿ ಪೇಟೆ ಶಾಖೆಯ ವ್ಯವಸ್ಥಾಪಕ ಮಠದ್, ಎಡಿಬಿ ವ್ಯವಸ್ಥಾಪಕ ಶಿಬು ಥಾಮಸ್ ಮತ್ತಿತರರು ಹಾಜರಿದ್ದರು.