ಬೆಂಗಳೂರು:
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರನ್ನು ಭೇಟಿ ಮಾಡಲು ಹೋಗಿದ್ದ ಸಂದರ್ಭದಲ್ಲಿ ಭಾರಿ ಭೂ ಕುಸಿತ ಉಂಟಾಗಿ ಶಾಸಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಗ್ಗೆ ಮಡಿಕೇರಿಯಲ್ಲಿರುವ ಮುಕ್ಕೋಡ್ಲು ಬಳಿ ಪ್ರವಾಹದಿಂದ ಸಿಲುಕಿದ್ದ ಸಂತ್ರಸ್ತರನ್ನು ಭೇಟಿ ಮಾಡಲು ಸ್ಥಳೀಯ ಶಾಸಕ ಅಪ್ಪಚ್ಚುರಂಜನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪನ್ನೇಕರ್ ಭೇಟಿ ನೀಡಿದ್ದರು.
ಕಳೆದ ರಾತ್ರಿಯಿಂದ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿರುವುದರಿಂದ ಮತ್ತೆ ಪ್ರವಾಹ ಉಂಟಾಗಿ ಅಲ್ಲಲ್ಲಿ ಭೂ ಕುಸಿತ ಸಂಭವಿಸಿದೆ. ಮುಕ್ಕೋಡ್ಲು ಬಳಿ ಅಪ್ಪಚ್ಚುರಂಜನ್ ಮತ್ತು ಪನ್ನೇಕರ್ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ಭೂ ಕುಸಿತ ಉಂಟಾಗಿ ಅಪಾಯಕ್ಕೆ ಸಿಲುಕಿದರು. ತಕ್ಷಣವೇ ಅಗ್ನಿಶಾಮಕ ಮತ್ತು ಗೃಹ ರಕ್ಷಕ ದಳದ ಡಿಜಿಪಿ ಎಂ.ಎನ್.ರೆಡ್ಡಿ ಹಾಗೂ ಸಿಬ್ಬಂದಿಯವರು ಇಬ್ಬರನ್ನು ರಕ್ಷಿಸಿದರು.
ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಕಡೆ ಪ್ರವಾಹ ಉಂಟಾಗಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರಿವೆ. ಎಲ್ಲೆಡೆ ಭೂ ಕುಸಿತ ಉಂಟಾಗುತ್ತಿರುವುದರಿಂದ ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲಾಡಳಿತ ಹಲವು ತ್ವರಿತ ಕ್ರಮಗಳನ್ನು ಕೈಗೊಂಡಿದ್ದರೂ ವರುಣನ ಆರ್ಭಟಕ್ಕೆ ಜನರ ಜೀವನ ಮೂರಾಬಟ್ಟೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
