ಮಧುಗಿರಿ
ಪ್ರೀತಿಸಿ ಮದುವೆಯಾದ ಪ್ರೇಮಿಗಳು ಪೊಲೀಸ್ ಠಾಣೆಗೆ ಆಗಮಿಸಿ ಹೇಳಿಕೆ ನೀಡಿ ವಾಪಸ್ಸು ತೆರಳುವಾಗ ಯುವತಿಯ ಸಂಬಂಧಿಕರು ಜೋಡಿಗಳ ಕಣ್ಣಿಗೆ ಕಾರದ ಪುಡಿ ಎರಚಿ ದೈಹಿಕವಾಗಿ ಹಲ್ಲೆ ಮಾಡಿರುವ ಘಟನೆ ತಾಲ್ಲೂಕಿನ ಬಡವನಹಳ್ಳಿಯ ಪೊಲೀಸ್ ಠಾಣೆಯ ಮುಂಭಾಗವೇ ನಡೆದಿದೆ.
ಶಿವಾನಂದಬಾಬು (23) ಮತ್ತು ರಮ್ಯಾ (22) ಇತ್ತೀಚೆಗೆ ಪ್ರೀತಿಸಿ ಮದುವೆಯಾಗಿದ್ದರು. ಇದನ್ನು ವಿರೋಧಿಸಿದ ಯುವತಿಯ ತಾಯಿ, ಭಾಗ್ಯಮ್ಮ ಬಡವನಹಳ್ಳಿಯ ಠಾಣೆಗೆ ಬಂದಿದ್ದರು. ಎರಡೂ ಕಡೆಯ ಪೋಷಕರನ್ನು ಠಾಣೆಗೆ ಕರೆಸಿದ ಪೊಲೀಸರು, ಎಲ್ಲರ ಹೇಳಿಕೆಗಳನ್ನು ಪಡೆದು ವಾಪಸ್ಸು ಕಳುಹಿಸಿ ಕೊಡುವಾಗ ಮದುವೆಯನ್ನು ಒಪ್ಪದ ಯುವತಿಯ ತಾಯಿ ಇಬ್ಬರನ್ನು ಬಾಯಿಗೆ ಬಂದಂತೆ ಬೈದಿದ್ದಾರೆ. ನಂತರ ಹುಡುಗಿಯ ತಾಯಿಯ ಮನವೊಲಿಸಿದ ಪೊಲೀಸರು ನಂತರ ಯಾವುದಾದರೂ ದೇವಾಲಯದಲ್ಲಿ ಹಾರ ಬದಲಿಸಿಕೊಂಡು ನಿಮ್ಮ ಊರುಗಳಿಗೆ ತೆರಳಿ ಎಂದು ಸೂಚಿಸಿದ್ದಾರೆ.
ಯುವ ಜೋಡಿ ಠಾಣೆಯಿಂದ ಹೊರ ಬಂದಾಗ ಪೂರ್ವ ನಿಯೋಜಿತರಾಗಿದ್ದ ಯುವತಿಯ ಸಂಬಂಧಿಕರಾದ ಭಾಗ್ಯಮ್ಮ, ಪುಷ್ಟ, ರೇಣುಕಾ, ಸುಜಾತ, ಗೋಪಿಕೃಷ್ಣ ಹಾಗೂ ಮತ್ತಿತರರು ಏಕಾಏಕಿ ಖಾರದ ಪುಡಿಯನ್ನು ಎರಚಿದ್ದಾರೆ. ನಂತರ ಹುಡುಗಿಯ ಕೂದಲನ್ನು ಹಿಡಿದು ಎಳೆದಾಡಿದ್ದಾರೆ. ನಂತರ ದೈಹಿಕವಾಗಿಯೂ ಕೂಡ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.
ನಂತರ ಮಧ್ಯ ಪ್ರವೇಶಿಸಿದ ಪೊಲೀಸರು ಜನರನ್ನು ಚದುರಿಸಿ, ಹುಡುಗಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಈ ಘಟನೆಯಿಂದ ಯುವತಿ ಅರೆ ಪ್ರಜ್ಞಾವಸ್ಥೆ ತಲುಪಿದ್ದು, ಘಟನೆಯು ಸಾರ್ವಜನಿಕ ವಲಯದಲ್ಲಿ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.
![](https://prajapragathi.com/wp-content/uploads/2018/08/19-mdg3.jpg)