ಹಿಂದುಳಿದವರಿಗೆ ಅರಸು ಕೊಡುಗೆ ಮಹತ್ವದ್ದು

ಚಿತ್ರದುರ್ಗ

  ದೇವರಾಜ ಅರಸು ಹಿಂದುಳಿದ ವರ್ಗಗಳ ಸಮುದಾಯಕ್ಕೆ ನೀಡಿದ ಕೊಡುಗೆ ಅಪಾರ ಅವಿಸ್ಮರಣೀಯವಾಗಿದ್ದು, ಮೇಲ್ವರ್ಗ ಹಾಗೂ ಬಲಾಡ್ಯರ ವಿರೋಧದ ನಡುವೆಯೂ ಅನೇಕ ಜನಪರ ಕಾರ್ಯಕ್ರಮ ರೂಪಿಸಿದರು ಎಂದು ಪ್ರೊ.ಪರಮೇಶ್ವರಪ್ಪ ತಿಳಿಸಿದರು.

  ನಗರದ ಗೊಲ್ಲರ ಸಂಘದಲ್ಲಿ ಸೋಮವಾರ ಜಿಲ್ಲಾ ಗೊಲ್ಲರ ಸಂಘ, ಅಲೆಮಾರಿ ವಿದ್ಯಾರ್ಥಿಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿಭೂ ಸುಧಾರಣಾ ಕಾಯ್ದೆ, ಮಲ ಹೊರುವ ಪದ್ದತಿ ನಿಷೇಧ, ಹಾವನೂರು ವರದಿ ಜಾರಿ ಹೀಗೆ ನೂರಾರು ಯೋಜನೆ ರೂಪಿಸುವ ಮೂಲಕ ಹಿಂದುಳಿದವರ್ಗದ ಪಾಲಿಗೆ ವಜ್ರವಾಗಿದ್ದಾರೆ ಎಂದು ಬಣ್ಣಿಸಿದರು.

  ಅರಸು ಮನೆತನ ಇರುವುದು ಕೇವಲ ಅತ್ಯಂತ ಅಲ್ಪ. ಅಲ್ಪಸಂಖ್ಯಾತರಾದರೂ ಹಿಂದುಳಿದವರ್ಗಗಳ ಕಲ್ಯಾಣವೇ ಅವರ ಮೂಲ ಉದ್ದೇಶವಾಗಿತ್ತು. ಮುಖ್ಯಮಂತ್ರಿಯಾಗಿದ್ದಾಗ ಹೆಂಚಿನ ಮನೆ ಇತ್ತು. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ಸ್ವಂತ ಸೂರಿಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡಿದ್ದರು. ಅಂತಹ ಪ್ರಾಮಾಣಿಕ ರಾಜಕಾರಣಿ ಬಗ್ಗೆ ಭ್ರಷ್ಟಾಚಾರದ ಆರೋಪ ಹೊರಿಸಲಾಯಿತು. ಒಬ್ಬ ಸಜ್ಜನ ರಾಜಕಾರಣಿ ಬಗ್ಗೆ ಇಂತಹ ಅಪವಾದ ಹೊರಿಸುವ ಮೂಲಕ ಅಪಮಾನ ಮಾಡಲಾಯಿತು ಎಂದರು.

  ಅರಸು ರಾಜಕೀಯ ಗರಡಿಯಲ್ಲಿ ಬೆಳೆದ ರಾಜಕೀಯ ನಾಯಕರು ಅದರಲ್ಲಿಯೂ ಹಿಂದುಳಿದ ವರ್ಗದ ನಾಯಕರೇ ದೇವರಾಜ್ ಅರಸು ಅವರ ಕೈ ಹಿಡಿಯದೆ ಕೈ ಕೊಟ್ಟರು ಎಂದು ವಿಷಾದಿಸಿ ಬಂಗಾರಪ್ಪ, ಕೆ.ಎಚ್.ರಂಗನಾಥ್ ಹಾಗೂ ಇತರರು ಅರಸು ಅವರಿಂದಲೇ ರಾಜಕೀಯ ಕ್ಷೇತ್ರದಲ್ಲಿ ಅತಿ ಎತ್ತರಕ್ಕೆ ಬೆಳೆದರು. ಅರಸು ಜನಪ್ರಿಯತೆ ಸಹಿಸಲಾರದೆ ಇಂದಿರಾಗಾಂಧಿ ಅರಸು ಅವರನ್ನು ಪಕ್ಷದಿಂದ ವಜಾಗೊಳಿಸಿದರು. ಆಗ ಪಕ್ಷ ಇಬ್ಬಾಗವಾದಾಗ ಅರಸು ಅವರಿಗೆ ಈ ಮಹಾನ್ ನಾಯಕರು ಕೈಕೊಟ್ಟರು. ಇದೊಂದು ದುರಂತ ಎಂದು ಖೇಧ ವ್ಯಕ್ತಪಡಿಸಿದರು

  ರಾಜ್ಯವನ್ನು ಅನೇಕ ಮುಖ್ಯಮಂತ್ರಿಗಳು ಆಳಿದ್ದಾರೆ. ಎಲ್ಲರನ್ನು ನೆನಪಿಸಿಕೊಳ್ಳುವುದಿಲ್ಲ. ಅರಸು ವ್ಯಕ್ತಿತ್ವ ಅಪರೂಪ. ಬೆಂಗಳೂರಿನಲ್ಲಿ ಮರಣ ಹೊಂದಿದಾಗ ಬೆಂಗಳೂರಿನಿಂದ ಹುಣಸೂರಿನವರೆಗೂ ಅವರ ಪಾರ್ಥಿವ ಶರೀರ ನೋಡಲು ಸಾಗರೋಪಾದಿಯಲ್ಲಿ ಜನರು ಭಾಗವಹಿಸಿ ಕಣ್ಣೀರು ಇಟ್ಟರು. ಅಬ್ರಾಂಲಿಂಕನ್ ಬಿಟ್ಟರೆ 2ನೇ ಅಪರೂಪದ ವ್ಯಕ್ತಿ ಅರಸು ಎಂದರು.

  ಹಾವನೂರು ವರದಿ ಜಾರಿಗೊಳಿಸಲು ಮುಂದಾದಾಗ ಮೇಲ್ವರ್ಗದ ಕೆಂಗಣ್ಣಿ ಗುರಿಯಾಗಬೇಕಾಯಿತು. ಇದನ್ನು ಲೆಕ್ಕಸದೆ ಹಾವನೂರು ವರದಿ ಜಾರಿಗೊಳಿಸುವ ಮೂಲಕ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಶಕ್ತಿ ನೀಡಿದರು. ಶಕ್ತಿ ನೀಡಿದ ಅರಸು ಅವರಿಗೆ ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಪಂಗಡದವರು ಚುನಾವಣೆಯಲ್ಲಿ ಸೋಲಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

  ಗೊಲ್ಲರ ಸಂಘದ ಕಾರ್ಯದರ್ಶಿ ಆನಂದ್ ಮಾತನಾಡಿ, ಎಲ್ಲರೂ ದೇವರಾಜ ಅರಸು ಆಗಲು ಸಾಧ್ಯವಿಲ್ಲ. ಇದರ ಬದಲಿಗೆ ಅರಸು ಅವರ ಮೌಲ್ಯ, ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ.ಅರಸು ಅವರ ಬಡವರ ಪರ ಕಾಳಜಿ ಇಂದಿನ ರಾಜಕಾರಣಿಗಳ ಮಾದರಿಯಾಗಿದೆ ಎಂದು ಹೇಳಿದರು.
ಸಂಘದ ಮುಖಂಡರಾದ ಮಹಾಲಿಂಗಪ್ಪ ರಂಗಸ್ವಾಮಿ, ಮುನಿಸ್ವಾಮಿ ಹಾಗೂ ಇತರರು ಭಾಗವಹಿಸಿದ್ದರು

Recent Articles

spot_img

Related Stories

Share via
Copy link