ಹುಳಿಯಾರು:
ರಸ್ತೆ ತಿರುವಿನಲ್ಲಿ ದ್ವಿಚಕ್ರ ವಾಹನ ಪರಸ್ಪರ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಹಿಂಬದಿ ಕುಳಿತಿದ್ದ ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಮನೋಜ್ ಎಂಬಾತನ ತಲೆಗೆ ತೀವ್ರ ಪೆಟ್ಟಾಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟ ಘಟನೆ ಹುಳಿಯಾರಿನಲ್ಲಿ ಜರುಗಿದೆ.
ಮೃತ ದುರ್ದೈವಿ ಬಾಲಕನನ್ನು ಮನೋಜ್ (16) ಎಂದು ಗುರುತಿಸಲಾಗಿದ್ದು ಈತ ಲಿಂಗಪ್ಪಪಾಳ್ಯದ ಲೇಟ್ ಡಿ.ಬೀರಪ್ಪ ಎಂಬುವರ ಮಗನಾಗಿದ್ದು ಈತ ಜಿಪಿಯುಸಿಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಕಂಪನಹಳ್ಳಿಯಲ್ಲಿರುವ ಅವರ ತೋಟಕ್ಕೆ ಹೋಗಿ ವಾಪಸ್ ಲಿಂಗಪ್ಪನಪಾಳ್ಯಕ್ಕೆ ಬರುತ್ತಿದ್ದಾಗ ಕೆ.ಸಿ.ಪಾಳ್ಯದ ಆಂಜನೇಯಸ್ವಾಮಿ ದೇವಾಲಯದ ರಸ್ತೆಯ ತಿರುವಿನಲ್ಲಿ ಅಪಘಾತ ಸಂಭವಿಸಿದೆ.
ಹುಳಿಯಾರಿನಿಂದ ಕಂಪನಹಳ್ಳಿಗೆ ಬೈಕಿನಲ್ಲಿ ಇದೇ ಮಾರ್ಗವಾಗಿ ಹೋಗುತ್ತಿದ್ದ ರೈತ ಸಂಘದ ಕೆ.ಸಿ.ಜಯಣ್ಣ ಎಂಬ ವ್ಯಕ್ತಿಯ ಬೈಕ್ ಹಾಗೂ ಟಿವಿಎಸ್ ಮುಖಾಮುಖಿ ಡಿಕ್ಕಿಯಾಗಿ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದ ಮನೋಜ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕನಾಯಕನಹಳ್ಳಿಗೆ ಕರೆದೊಯ್ದು ಅಲ್ಲಿಂದ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿರುತ್ತಾನೆ. ಬೈಕಿನ ಸವಾರ ಕೆ.ಸಿ.ಜಯಣ್ಣ ಎಂಬಾತನನ್ನು ಕೂಡ ತುಮಕೂರಿನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಪ್ರಕರಣ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೃತ ಬಾಲಕನ ಅಂತ್ಯಕ್ರಿಯೆ ಲಿಂಗಪ್ಪನ ಪಾಳ್ಯದ ಜಮೀನಿನಲ್ಲಿ ನಡೆಯಿತು.
ನೇತ್ರದಾನ ಮಾಡಿ ಮಾದರಿಯಾದ ಕುಟುಂಬ
ಅಪಘಾತದಲ್ಲಿ ತಲೆಗೆ ತೀರ್ವ ಪೆಟ್ಟು ಬಿದ್ದ ಮೃತನಾದ ಬಾಲಕ ಮನೋಜ್ನ ಎರಡೂ ಕಣ್ಣುಗಳನ್ನೂ ಕುಟುಂಬವರ್ಗದವರು ದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಇನ್ನೂ ಬಾಳಿ ಬದುಕಬೇಕಿದ ಹುಡುಗ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾನೆ. ನೇತ್ರ ದಾನ ಮಾಡುವ ಮೂಲಕವಾದರೂ ಇನ್ನೊಷ್ಟು ವರ್ಷ ಮನೋಜ್ ಕಣ್ಣು ಭೂಮಿ ಮೇಲಿರಲಿ ಎನ್ನುವುದು ಪೋಷಕರ ಇಚ್ಚೆಯಾಗಿತ್ತು. ಅದರಂತೆ ತುಮಕೂರಿನ ನೇತ್ರ ಕೇಂದ್ರಕ್ಕೆ ಮನೋಜ್ ಕಣ್ಣುಗಳನ್ನು ದಾನ ಮಾಡಿ ಕುಟುಂಬವರ್ಗ ಮಾದರಿಯಾಗಿದೆ.
