ಗೋವಿನ ಜೋಳ ಬೆಳೆಯಲ್ಲಿ ವಿದೇಶಿ ಫಾಲ್ ಆರ್ಮಿ ವರ್ಮ್ ಸೈನಿಕ ಹುಳುವಿನ ನಿರ್ವಹಣೆ ಕ್ರಮಗಳು.

 

ಹಾವೇರಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಮುಖ್ಯವಾಗಿ ಗೋವಿನಜೋಳ ಬೆಳೆಯ ಮೇಲೆ ಅಲ್ಲಲ್ಲಿ ವಿದೇಶಿ ಫಾಲ್ ಆರ್ಮಿ ವರ್ಮ್ ಸೈನಿಕ ಹುಳುವಿನ ಹೊಸ ಪ್ರಭೇದದ ಬಾಧೆ ಕಂಡುಬಂದಿರುತ್ತದೆ. ಈ ಸೈನಿಕ ಹುಳುವನ್ನು ವೈಜ್ಞಾನಿಕವಾಗಿ ಸ್ಪೋಡಾಪ್ಟೆರಾ ಫ್ರೂಜಿಪೆರಡಾ (Spodoptera frugiperda)ಎಂದು ಕರೆಯುತ್ತಾರೆ. ಹಾಗೂ ಸಾಮಾನ್ಯವಾಗಿ ಇದನ್ನು ಫಾಲ್ ಆರ್ಮಿ ವರ್ಮ್ Fall  Army worm )  ಎಂದು ಕರೆಯುತ್ತಾರೆ. ಈ ಹುಳುಗಳನ್ನು ಸ್ಥಳೀಯವಾಗಿ ಲದ್ದಿ ಹುಳು ಎಂದು ಸಹ ಕರೆಯುತ್ತಾರೆ.

ಜೀವನ ಚರಿತ್ರೆ :- ಪತಂಗವು ರಾತ್ರಿ ವೇಳೆ ಚಟುವಟಿಕೆಯಿಂದ ಕೂಡಿದ್ದು ಬೂದು ಮತ್ತು ಕಂದು ಬಣ್ಣದ್ದಾಗಿರುತ್ತದೆ. ಹಿಂದಿನ ರೆಕ್ಕೆಗಳು ಬೆಳ್ಳಿ ಬಿಳಿ ಬಣ್ಣದಿಂದ ಕೂಡಿದ್ದು ಸಣ್ಣದಾದ ಕಪ್ಪು ಗೆರೆಯು ರೆಕ್ಕೆಯ ಅಂಚಿನಲ್ಲಿರುತ್ತದೆ. ಪತಂಗದ ಜೀವನ ಅವಧಿಯು 17-21 ದಿನಗಳಾಗಿರುತ್ತದೆ. ಒಂದು ಹೆಣ್ಣು ಪತಂಗವು 1500-2000 ಮೊಟ್ಟೆಗಳನ್ನು ಗುಂಪು ಗುಂಪಾಗಿ ಪ್ರತಿ ಗುಂಪಿನಲ್ಲಿ 100-200 ಮೊಟ್ಟೆಗಳನ್ನು ಇಡುತ್ತದೆ. 2-3 ದಿನಗಳಲ್ಲಿ ಮೊಟ್ಟೆಯಿಂದ ಮರಿಗಳು ಹೊರಬರುತ್ತವೆ. ಮರಿಹುಳುಗಳು ಕಪ್ಪು ಬಣ್ಣದ ತೆಲೆಯನ್ನು ಹೊಂದಿದ್ದು ಹಸಿರಾಗಿರುತ್ತವೆ. ಸಂಪೂರ್ಣವಾಗಿ ಬೆಳೆದ ಹುಳುಗಳು ಕಂದು ಬಣ್ಣದಿದ್ದು ತಲೆಯ ಮೇಲೆ ಙ ಆಕಾರದ ಗುಳಿ ಇರುತ್ತದೆ ಮತ್ತು ಹುಳುವಿನ ಕೊನೆಯ ಸೆಗ್‍ಮೆಂಟ್‍ನ 4 ಕಪ್ಪು ಚುಕ್ಕೆಗಳು ಸಮಾನಾಂತರದಲ್ಲಿ ಇರುತ್ತವೆ. ಹುಳುವಿನ ಅವಧಿಯು 14 (ಬೇಸಿಗೆಯಲ್ಲಿ) ರಿಂದ 30 (ಚಳಿಗಾಲದಲ್ಲಿ) ದಿನಗಳಾಗಿದ್ದು ನಂತರ ಕೋಶಾವಸ್ಥೆಗೆ ಹೋಗುತ್ತದೆ. ಕೋಶಾವಸ್ಥೆಯಲ್ಲಿ ಹುಳುಗಳು ಮಣ್ಣಿನಲ್ಲಿ 2-8 ಸೆಂ.ಮೀ ಆಳದಲ್ಲಿ ಇರುತ್ತವೆ. ಕೋಶಾವಸ್ಥೆಯು 8-9 ದಿನಗಳ (ಬೇಸಿಗೆಯಲ್ಲಿ), 20-30 ದಿನಗಳು (ಚಳಿಗಾಲದಲ್ಲಿ) ಅವಧಿಯಾಗಿರುತ್ತದೆ. ಮೊಟ್ಟೆಯಿಂದ ಹೊರಬಂದ ಮರಿಹುಳುಗಳು ಮೊದಲು ಎಲೆಗಳನ್ನು ಕರೆದು ತಿನ್ನುತ್ತವೆ ನಂತರ ಕಾಂಡ ಕೊರೆಯುವ ಕೀಟದಂತೆ ಸುಳಿಗಳಲ್ಲಿ ಸಣ್ಣ ಸಣ್ಣ ರಂದ್ರಗಳನ್ನು ಮಾಡಿ ಎಲೆಗಳನ್ನು ತಿಂದು ನಾಶಪಡಿಸುತ್ತವೆ.
ನಿಯಂತ್ರಣ ಕ್ರಮಗಳು:-
 ವ್ಯಾಪಕವಾಗಿ ಪೀಡೆ ಸಮೀಕ್ಷೆಯನ್ನು ಕೈಗೊಂಡು, ಕೀಟದ ಉಪಸ್ಥಿತಿ ಮತ್ತು ಹರಡುವಿಕೆ ಬಗ್ಗೆ ನಿಗಾ ವಹಿಸುವುದು.
 ಗುಂಪಾಗಿ ಇಟ್ಟಿರುವ ಮೊಟ್ಟೆ ಹಾಗೂ ಮರಿಹುಳುಗಳನ್ನು ಕೈಯಿಂದ ಆಯ್ದು ನಾಶಪಡಿಸುವುದು.
 ತತ್ತಿ ಪರಾವಲಂಬಿ ಕೀಟಗಳಾದ ಟ್ರೈಕೋಗ್ರಾಮ ಮತ್ತು ಟೆಲಿಮೋನಸ್‍ಗಳನ್ನು ಬಿಡುಗಡೆಗೊಳಿಸಿ ಕೀಟದ ತತ್ತಿಗಳನ್ನು ನಾಶಪಡಿಸುವುದು.
 ಕೀಟ ಬಾಧೆ ತೀವ್ರತೆ ಕಡಿಮೆ ಇದ್ದಾಗ ಅಥವಾ ಮರಿ ಹುಳಗಳ ನಿರ್ವಹಣೆಗೆ ಬೇವಿನ ಮೂಲ ಕೀಟನಾಶಕವಾದ ಅಜಾಡಿರಕ್ಟಿನ್ 5 % ಇ.ಸಿ. @ 0.5 ಎಂ.ಎಲ್/ಲೀ ಅಥವಾ ಜೈವಿಕ ಕೀಟನಾಶಕವಾದ ನ್ಯುಮೋರಿಯಾ ರಿಲೇ ಶಿಲೀಂಧ್ರವನ್ನು 2 ಗ್ರಾಂ. ಪ್ರತಿ ಲೀಟರ್ ನೀರಿಗೆ ಮಿಶ್ರಣಮಾಡಿ ಸಿಂಪಡಿಸುವುದು.
 ಕೀಟದ ತೀವ್ರತೆ ಹೆಚ್ಚಾದಲ್ಲಿ ಅಥವಾ ಬೆಳೆದ ಹುಳುಗಳನ್ನು ಹತೋಟಿಯಲ್ಲಿಡಲು ಕೀಟನಾಶಕಗಳಾದ ಇಮಾಮೆಕ್ಟಿನ್ ಬೆಂಜೋಯೇಟ್ 5 % ಎಸ್.ಜಿ. @ 0.4 ಗ್ರಾಂ/ಲೀ, ಥಯಾಮೆಥೋಕ್ಸಿಮ್ 12.6 % + ಲಾಮ್ಡಸಹಲೋಥ್ರಿನ್ 9.5 % ಝಡ್.ಸಿ @ 0.5 ಗ್ರಾಂ/ಲೀ ಅಥವಾ ಬಳಸಿ ಕೀಟವನ್ನು ಹತೋಟಿ ಮಾಡುವುದು.

ಪಾಶಾಣವನ್ನು ತಯಾರಿಸಲು ಬೇಕಾಗುವ ಪರಿಕರಗಳು:

ಕ್ರ.ಸಂ ವಸ್ತುಗಳು ಪ್ರಮಾಣ
01 ಗೋಧಿ ಅಥವಾ ಭತ್ತದ ತೌಡು 20 ಕೆ.ಜಿ
02 ಮೋನೋಕ್ರೋಟೋಫಾಸ್ ಅಥವಾ ಥೈಯೋಡಿಕಾರ್ಬ್ 36 Sಐ 250 ಮಿ.ಲೀ
03 ಬೆಲ್ಲ 2 ಕೆ.ಜಿ
04 ನೀರು 5 ರಿಂದ 8 ಲೀ

ಮಾಡುವ ವಿಧಾನ: ಮೊದಲು ಬೆಲ್ಲವನ್ನು ಕುಟ್ಟಿ ಸಣ್ಣಗೆ ಪುಡಿ ಮಾಡಿ ನೀರು & ಥೈಯೋಡಿಕಾರ್ಬ್ ಅಥವಾ ಮೋನೋಕ್ರೋಟೋಫಾಸ್ 36 Sಐ (250 ಮಿ.ಲಿ) ಸೇರಿಸಿ ಬೆಲ್ಲ ಪೂರ್ತಿ ಕರಗುವವರೆಗೂ ಚೆನ್ನಾಗಿ ಮಿಶ್ರ ಮಾಡಿ. ಈ ಮಿಶ್ರಣಕ್ಕೆ 20 ಕೆ.ಜಿ ಗೋಧಿ ಅಥವಾ ಅಕ್ಕಿ ತೌಡು ಸೇರಿಸಿ ತಂಬಿಟ್ಟು ಹದಕ್ಕೆ ಕಲಸಿ ಗಾಳಿಯಾಡದ ಚೀಲದಲ್ಲಿ ಅಥವಾ ಡ್ರಮ್ಮಿನಲ್ಲಿ 24 ಗಂಟೆಗಳ ಕಾಳ ಕಳಿಯಲು ಬಿಡಬೇಕು. ಈ ರೀತಿ ತಯಾರಿಸಿದ ವಿಷ ಪಾಶಾಣ ಆಹಾರವನ್ನು ಸಂಜೆ 5:00 ಗಂಟೆಯ ನಂತರ ಪ್ರತಿ ಹೆಕ್ಟೇರಿಗೆ 50 ಕೆ.ಜಿ ಯಂತೆ ಸುಳಿ ಹಾಗೂ ಎಲೆಗಳ ಮೇಲೆ ಬೀಳುವಂತೆ ಎರಚಬೇಕು.

Recent Articles

spot_img

Related Stories

Share via
Copy link