ಬೆಂಗಳೂರು:
ನಗರದ ಪ್ರತಿಷ್ಠಿತ ಖಾಸಗಿ ಕಾಲೇಜೊಂದರಲ್ಲಿ ರ್ಯಾಗಿಂಗ್ ನಡೆಸಿದ 6 ಮಂದಿ ಆರೋಪಿಗಳನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಕಳೆದ ಶುಕ್ರವಾರ ರಾತ್ರಿ ಬೊಮ್ಮನಹಳ್ಳಿಯಲ್ಲಿರುವ ಕಾಲೇಜಿನ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳಾದ ಇಬ್ಬರು ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರೂಂಗೆ ಕರೆದೊಯ್ದು ರ್ಯಾಂಗಿಂಗ್ ಮಾಡಿ ದೌರ್ಜನ್ಯ ಎಸಗಿರುವ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೊಮ್ಮನಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ
ಪ್ರಕರಣದ ವಿವರ: ಕೆಲವು ದಿನಗಳ ಹಿಂದೆ ಡಿ-ಫಾರ್ಮ್ ವ್ಯಾಸಂಗಕ್ಕೆ ವಿದ್ಯಾರ್ಥಿಗಳಿಬ್ಬರು ಸೇರಿದ್ದರು. ಆದರೆ, ಅದೇ ಕಾಲೇಜಿನ 6 ಜನ ಸ್ನೇಹಿತರು ಸೇರಿಕೊಂಡು ಬಲವಂತದಿಂದ ಇವರಿಬ್ಬರನ್ನು ಭಯಪಡಿಸಿ, ತಾವು ವಾಸವಿದ್ದ ಮಂಗಮ್ಮನಪಾಳ್ಯ ರಸ್ತೆ ಬಳಿ ಇರುವ ಮನೆಗೆ ಕರೆದೊಯ್ದಿದ್ದರು.ನಾವು ಹಿರಿಯ ವಿದ್ಯಾರ್ಥಿಗಳು, ನಾವು ಹೇಳಿದಂತೆ ನೀವು ಕೇಳಬೇಕು ಎಂದು ಭಯಪಡಿಸಿದ್ದರು.
ಅಷ್ಟೇ ಅಲ್ಲದೇ ಮನೆಯಿಂದ ಹೊರಗೆ ಹೋಗದಂತೆ ಬಾಗಿಲು ಹಾಕಿ ರಾತ್ರಿಯಿಡೀ ಕಿರಿಯ ವಿದ್ಯಾರ್ಥಿಗಳಿಂದ ಡ್ಯಾನ್ಸ್ ಮಾಡಿಸಿ, ಹಾಡು ಹೇಳಿಸಿ, ನೆಲ ಒರೆಸಿ ಅವರನ್ನು ಗೇಲಿ ಮಾಡುತ್ತಾ ಗಾಂಜಾ ಮತ್ತಿನಲ್ಲಿ ನಸುಕಿನ 2.30 ವರೆಗೆ ಕಿರುಕುಳ ನೀಡಿದ್ದರು.
ನೊಂದ ವಿದ್ಯಾರ್ಥಿಗಳು ಈ ವಿಷಯವನ್ನು ಕಾಲೇಜು ಮುಖ್ಯಸ್ಥರ ಗಮನಕ್ಕೆ ತಂದು ಬೊಮ್ಮನಹಳ್ಳಿ ಠಾಣೆಗೆ ದೂರು ನೀಡಿದ್ದರು.ಪೊಲೀಸರು ಆರು ಆರೋಪಿಗಳನ್ನು ಐಪಿಸಿ ಸೆಕ್ಷನ್ 342, 504, 506, 363, 149 ಹಾಗೂ ಕರ್ನಾಟಕ ಶೈಕ್ಷಣಿಕ ಕಾಯ್ದೆ 116 ಅಡಿಯಲ್ಲಿ ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
![](https://prajapragathi.com/wp-content/uploads/2018/08/RAGING-01-1454479796_835x547.jpg)