ದಾವಣಗೆರೆ
ರಾಜಕೀಯ ಪಕ್ಷಗಳು ಸಾಮರಸ್ಯ ಕದಡಲು ಪ್ರಯತ್ನಿಸುತ್ತಿರುವುದು ಅತ್ಯಂತ ದುರಂತವಾಗಿದೆ ಎಂದು ತರಳಬಾಳು ಸಾಣೇಹಳ್ಳಿ ಶಾಖಾಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾಧ ವ್ಯಕ್ತಪಡಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಏರ್ಪಡಿಸಿದ್ದ ಕರ್ನಾಟಕ ಪರಂಪರೆಯ ಜಾತ್ಯಾತೀತ ನೆಲೆಗಳು ಎಂಬ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಜಾತಿ ಎಂಬ ಕಸವನ್ನು ಸ್ವಚ್ಛಮಾಡುತ್ತಾ ಹೋದಂತೆ, ರಾಜಕಾರಣಿಗಳು ಜನರಲ್ಲಲಿ ಜಾತಿಯ ಕಲುಷಿತ ಭಾವನೆಯನ್ನು ತುಂಬುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ನಮ್ಮಲ್ಲಿರುವಂಥಹ ಸಾಮರಸ್ಯವನ್ನು ಕಡಿದು ಹಾಕಿ ವಿಷದ ಬೀಜ ಬಿತ್ತುತ್ತಿದ್ದಾರೆ. ಆದ್ದರಿಂದ ನಾವು ಸಾಮರಸ್ಯವನ್ನು ಮತ್ತೆ ಬೆಳೆಸುವ ಕಾರ್ಯ ಮಾಡಬೇಕಿದೆ. ಇದು ಕೇವಲ ಭಾಷಣ, ಸಂಘಟನೆ, ಸಂವಾದ, ಗೋಷ್ಠಿಗಳಿಂದ ಆಗದು. ನಮ್ಮ ನಮ್ಮ ಮಿತಿಯಲ್ಲಿ ಜಾತಿಯ ಭೂತವನ್ನು ಹೊಡೆದೋಡಿಸಲು ಪ್ರತಿಯೊಬ್ಬರು ಮಾಡಬೇಕಾಗಿದೆ. ಈ ಜಾತಿಯ ಭೂತವನ್ನು ಹೊಡೆದೊಡಿಸಿದರೆ ಶರಣರ, ಸಂತರ ಆಶಯಗಳನ್ನು ನಾವು ಜಾರಿಗೆ ತರಲು ಸಾಧ್ಯವಾಗಲಿದೆ ಎಂದು ಪ್ರತಿಪಾದಿಸಿದರು.
ಕೆಲ ಸ್ವಾಮೀಜಿಗಳು, ಸಾಹಿತಿಗಳು, ರಾಜಕಾರಣಿಗಳು ಒಂದೊಂದು ರೀತಿಯಲ್ಲಿ ಜಾತಿಯ ಗೋಡೆಗಳನ್ನು ನಿರ್ಮಿಸುತ್ತಿದ್ದಾರೆ. ಆ ಗೋಡೆಯನ್ನು ಕೆಡವುವವರು ಯಾರು? ಹೇಗೇ? ಎಂಬ ಬಗ್ಗೆ ಚಿಂತನೆ ಮಾಡಿದರೆ ಸಾಲದು. ಬದಲಿಗೆ ಚಿಂತನೆಗಳು ಸಾಕಾರರೂಪಗೊಳ್ಳುವಂಥಹ ಪ್ರಯತ್ನವನ್ನೂ ಸಹ ಮಾಡಬೇಕಿದೆ. ನಾವೆಲ್ಲಾ ಮನಸ್ಸು ಮಾಡಿದರೆ ಜಾತಿಯ ಭೂತವನ್ನು ಹೊಡದು ಹಾಕಿ, ಜಾತ್ಯತೀತ ವ್ಯಕ್ತಿತ್ವ ಮೈಗೂಡಿಸಿಕೊಂಡು ಸಾಮರಸ್ಯದಿಂದ ಬದುಕುವುದು ಕಷ್ಟವೇನಲ್ಲ ಎಂದರು.
ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಜಾತೀಯ ವೈಭವೀಕರಣ ನಡೆಯುತ್ತಿದೆ. ವಿದ್ಯಾರ್ಥಿಯೊಬ್ಬ ಶಾಲೆ ಸೇರುವಾಗ, ಆತನ ಜಾತಿಯನ್ನು ಕೇಳಲಾಗುತ್ತದೆ. ನಂತರ ವಿದ್ಯಾರ್ಥಿ ವೇತನ ಹಾಗೂ ಇತರೆ ಸೌಲಭ್ಯ ಕಲ್ಪಿಸಲು ಜಾತಿ ನೋಡಲಾಗುತ್ತಿದೆ. ಜಾತಿ ವಿನಾಶವಾಗಬೇಕೆಂದು ಹೇಳುತ್ತಲೇ, ಜಾತಿಯ ಗೋಡೆಗಳನ್ನು ಕಟ್ಟಿಕೊಳ್ಳುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.
ಜಾತ್ಯತೀತ ಸಮಾಜ ನಿರ್ಮಾಣ ಮಾಡಬೇಕೆನ್ನುವ ನಾವುಗಳೇ ಮತ್ತೊಂದೆಡೆ ಜಾತಿ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎನ್ನುವ ವಾತಾವರಣ ನಿರ್ಮಾಣ ಮಾಡುತ್ತಿದ್ದೇವೆ. ಇದೊಂದು ರೀತಿಯ ಅನಿಷ್ಟ ಪರಂಪರೆಯಾಗಿದೆ. ಒಂದೆಡೆ ಜಾತ್ಯತೀತತೆ ಬೆಂಬಲಿಸಿ, ಮತ್ತೊಂದೆಡೆ ವಿರೋಧಿಸುತ್ತಿದ್ದೇವೆ. ನಮ್ಮಲ್ಲಿರುವ ಧ್ವಂಧ್ವ ಭಾವವನ್ನು ಮೊದಲು ಕಳೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಆದಿಕವಿ ಪಂಪನ ಕಾಲದಿಂದಲೂ ಕರ್ನಾಟಕದಲ್ಲಿ ಜಾತ್ಯಾತೀತ ಪರಂಪರೆ ನೆಲೆಯೂರಿದೆ. ಆದರೂ ಪ್ರಸ್ತುತ ದಿನಗಳಲ್ಲಿ ಶೋಷಿತರನ್ನು ಗುರುತಿಸಲು ಜಾತಿಯ ಉಲ್ಲೇಖ ಅನಿವಾರ್ಯವಾಗಿದೆ. ಕರ್ನಾಟಕದಲ್ಲಿ 42 ಅಲೆಮಾರಿ ಸಮುದಾಯಗಳಿದ್ದು, ಅವುಗಳಿಗೆ ಐಡೆಂಟಿಯೇ ಇಲ್ಲವಾಗಿದೆ. ಒಂದು ಸಮುದಾಯಕ್ಕೆ ಐದಾರು ಹೆಸರುಗಳಿವೆ. ಈ ಅಲೇಮಾರಿ ಸಮುದಾಯದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ನೂರು ದಾಟಿಲ್ಲ. ಹೀಗೆ ಕೆಳ ಸ್ತರದಲ್ಲಿದ್ದು ಹಸಿವಿನಿಂದ ಬಳಲುವವರು ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟಿತರಾದರೆ ತಪ್ಪೇನೂ ಇಲ್ಲ. ಆದರೆ, ಇನ್ನೊಂದು ಜಾತಿಯ ಸೌಲಭ್ಯವನ್ನು ಕಬಳಿಸುವ ದುರುದ್ದೇಶದಿಂದ ಸಂಘಟಿತರಾಗುವ ಜಾತಿ ಸಂಘಟನೆಗಳನ್ನು ಮೊದಲು ನಿಷೇಧಿಸಬೇಕಾಗಿದೆ ಎಂದು ಹೇಳಿದರು.
ಜಾತಿ-ವರ್ಣ ವ್ಯವಸ್ಥೆಯನ್ನು ಮೀರಿ, ಸಮ ಸಮಾಜ ನಿರ್ಮಿಸಲು ಆದಿಕವಿ ಪಂಪನಿಂದ ಹಿಡಿದು ಜಿ.ಎಸ್.ಶಿವರುದ್ರಪ್ಪನವರಿಗೆ ಹಲವರು ವೈದಿಕ ಪುರಾಣಕ್ಕೆ ವಿರುದ್ಧವಾಗಿ ಕಟ್ಟಿಕೊಡ್ಡ ಪರ್ಯಾಯ ಸಹಕಾರಿಯಾಗಿದೆ. ಭಾರತವನ್ನು ಬಹುತ್ವ ಒಳಗೊಂಡಿದ್ದು, ಭಾರತ ಏಕ ಸಂಸ್ಕøತಿ ಮತ್ತು ಏಕ ಭಾಷೆಯ ರಾಷ್ಟ್ರವಲ್ಲ. ನಮ್ಮ ಧರ್ಮ ಗ್ರಂಥ ಸಂವಿಧಾನವೇ ಆಗಿದೆ ಎಂದ ಅವರು, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಯುವಜನರನ್ನು ದೃಷ್ಟಿಯಲ್ಲಿಟ್ಟುಕೊಂಡು, ಜಾತ್ಯಾತೀತ ಸಮಾಜ ನಿರ್ಮಾಣದ ಕನಸು ಕಂಡಿದ್ದರು ಎಂದು ಸ್ಮರಿಸಿದರು.
ಡಾ.ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದ ಸದಸ್ಯೆ ಡಾ.ತಾರಿಣಿ ಶುಭದಾಯಿನಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ, ಕಸಾಪ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ ಕುರ್ಕಿ, ಚಿಂತಕ ಎಂ.ಟಿ.ಸುಭಾಷ್ ಚಂದ್ರ, ಎಂ.ವೈ.ನಾರಾಯಣಸ್ವಾಮಿ, ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್‍ನ ರುದ್ರಪ್ಪ ಹನಗವಾಡಿ ಮತ್ತಿತರರು ಉಪಸ್ಥಿತರಿದ್ದರು. ಚನ್ನಗಿರಿಯ ಎ.ಎನ್.ಅರುಣ ಕುಮಾರ ಮತ್ತು ವೃಂದದವರು ಜಿಎಸ್ಸೆಸ್ ಭಾವಗೀತೆಗಳ ಗಾಯನ ನಡೆಸಿಕೊಟ್ಟರು.
ತರಳಬಾಳು ಮಠದ ಮೂಲ ಪುರುಷ ವಿಶ್ವಬಂಧು ಮರುಳಸಿದ್ದರು, ಮೂಲದಲ್ಲಿ ಮಾದಿಗರಾದರೂ ಸಹ ತಮ್ಮ ಸಾಧನೆಯ ಮೂಲಕ ಮಾದಿಗತನ ಕಳೆದುಕೊಂಡು ವಿಶ್ವ ಬಂಧುವಾದರು. ಅಂಥಹ ಮಹತ್ವದ ಕೆಲಸ ಇಂದು ನಡೆಯಬೇಕಾಗಿದೆ. ನಾವು ಹುಟ್ಟಿದ ಜಾತಿ ಯಾವುದೇ ಆಗಿರಲಿ, ಆ ಜಾತಿಯ ಕಟ್ಟಳೆ ಮೀರಿ ವಿಶ್ವಮಾನವರಾಗಿ ಬದುಕಲು ಖಂಡಿತ ಸಾಧ್ಯವಿದೆ.
-ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ,
ತರಳಬಾಳು ಸಾಣೇಹಳ್ಳಿ ಶಾಖಾಮಠ.








